ಬೆಳಗಾವಿ: ರೈತರ ಮಕ್ಕಳು ಪಡೆದಿರುವ ಶೈಕ್ಷಣಿಕ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈಗ ವೃತ್ತಿಪರ ಶಿಕ್ಷಣ ಪಡೆದವರಿಗೂ ಉದ್ಯೋಗ ಸಿಗುತ್ತಿಲ್ಲ. ಪಟ್ಟಣಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಸಾಲ ಮರುಪಾವತಿಸಲು ಸಾಧ್ಯವಾಗದಿರುವುದರಿಂದ ಈ ಸಾಲ ಮನ್ನಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಅಪ್ಪಾಸಾಬ ದೇಸಾಯಿ, ರೈತರ ಬದುಕು ತೀರಾ ಶೋಚನೀಯವಾಗಿದೆ. ಅನೇಕ ರೈತ ಕುಟುಂಬಗಳು ಬದುಕು ಮುಗಿಸುವ ಹಂತಕ್ಕೆ ಬಂದು ನಿಂತಿದ್ದಾರೆ. ಸರಕಾರದಿಂದ ಇವರಿಗೆ ಯಾವ ಅನುಕೂಲವೂ ಸಿಗುತ್ತಿಲ್ಲ. ಕೃಷಿ ಕೂಲಿಗಿಂತ ಉದ್ಯೋಗ ಖಾತ್ರಿ ಕೂಲಿ ಹೆಚ್ಚಿದ್ದು ಇದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆ ಕೂಲಿ ಎರಡು ಪಟ್ಟಿದೆ. ಅಲ್ಲಿ ಯಾವುದೇ ಒತ್ತಡವಿಲ್ಲ ಎಂಬ ಕಾರಣದಿಂದ ಕೃಷಿ ಕೂಲಿಕಾರರು ಅದರತ್ತಲೇ ಹೋಗುತ್ತಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಕೂಲಿಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೃಷಿ ಕ್ಷೇತ್ರಕ್ಕೂ ರೋಜಗಾರ ಯೋಜನೆ ವಿಸ್ತರಿಸಬೇಕು ಎಂದು ಅವರು ಆಗ್ರಹಪಡಿಸಿದರು.
ಪ್ರತಿಭಟನೆಯಲ್ಲಿ ಸುಭಾಷ ದಾಯಗೊಂಡೆ, ಬಾಳು ಮಾಯಣ್ಣ, ರಾಮಚಂದ್ರ ಫಡಕೆ, ರಾಮನಗೌಡ ಪಾಟೀಲ, ಟೋಪಣ್ಣ ಬಸರೀಕಟ್ಟಿ, ಮಾರುತಿ ಶಿವಾಜಿ ಬುರಲಿ, ನಾಮದೇವ ದುಡಂ, ನಿಂಗಪ್ಪ ಚುರಮರಿ, ರಾಜು ಕಾಗಣೇಕರ ಪಾಲ್ಗೊಂಡಿದ್ದರು.