ಶ್ರೀರಂಗಪಟ್ಟಣ: ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ರೈತರ ಸಹಾಯಧನ, ವ್ಯದ್ಧಾಪ್ಯ, ವಿಧವಾ ವೇತನಗಳನ್ನೂ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲಕ್ಕೆ ಜಮೆ ಮಾಡಿಕೊಳ್ಳುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕಿನ ಮಹದೇವಪುರದ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಮಂಗಳವಾರ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಮಾತನಾಡಿ, ವೃದ್ಧಾಪ್ಯ, ವಿಧವಾ ವೇತನ ಮತ್ತು ಹಾಲು ಉತ್ಪಾದಕರಿಗೆ ನೀಡುವ ಸಹಾಯ ಧನವನ್ನೂ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಅಧಿಕಾರಿಗಳ ಜತೆ ಸಂಬಂಧಪಟ್ಟವರು ಮಾತನಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮೇಳಾಪುರ ಸ್ವಾಮಿಗೌಡ ಮಾತನಾಡಿ, ಜಿಲ್ಲೆಯಲ್ಲಿ ಯಾವ ಬ್ಯಾಂಕುಗಳುಸರ್ಕಾರಿ ನಿಯಮ ಅನುಸರಿಸುತ್ತಿಲ್ಲ, ಅಲ್ಲದೆ ಜಿಲ್ಲಾಧಿಕಾರಿ ಮತ್ತು ಲೀಡ್ ಬ್ಯಾಂಕ್ ಕರೆದಿದ್ದ ಸಭೆಯಲ್ಲಿ ಭಾಗಿಯಾಗದ ಬ್ಯಾಂಕ್ ಆಫ್ ಇಂಡಿಯಾ ನಿಯಮಾವಳಿಗೆ ವಿರುದ್ಧವಾಗಿ ನಡೆಯುತ್ತಿದ್ದು ಕ್ರಮ ಕೈಗೊಳ್ಲಬೇಕು ಎಂದು ಆರೋಪಿಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಶಾಖೆಯ ವ್ಯವಸ್ಥಾಪಕ ಹರೀಶ್‌ರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಖಾತೆಗಳಿಗೆ ಜಮೆಯಾದ ಹಣ ರೈತರಿಗೆ ಹಿಂದಿರುಗಿಸಲು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹರೀಶ್, ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಾ ರೈತರ ಪಡೆದ ಹಣ ಹಿಂತಿರುಗಿಸಲಾಗುವುದು ಹಾಗೂ ಮುಂದೆ ಸಹಾಯಧನ, ವೇತನ ಖಾತೆಗೆ ಜಮೆಯಾಗದಂತೆ ನೋಡಿಕೊಳ್ಳುವ ಎಂದು ಭರವಸೆ ನೀಡಿದರು.
ಮಹದೇವಪುರ ಜಯರಾಮೇಗೌಡ, ಬಾಲಕೃಷ್ಣ, ದೇವೇಗೌಡ, ಕೃಷ್ಣ, ದೊಡ್ಡಪಾಳ್ಯ ಜಯರಾಮೇಗೌಡ, ನಾಗೇಂದ್ರ, ಮಹದೇವು ಇತರರಿದ್ದರು.