ದಾವಣಗೆರೆ: ಕೇಂದ್ರ ಸರ್ಕಾರ ವಾಪಾಸ್ ಪಡೆದಿರುವ ಮೂರು ಕೃಷಿ ಕಾಯ್ದೆಗಳ ಅನೂರ್ಜಿತಕ್ಕಾಗಿ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸುವಂತೆ ಒತ್ತಾಯಿಸಿ ಶುಕ್ರವಾರ ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳು ಟ್ರ್ಯಾಕ್ಟರ್ ರ್ಯಾಲಿ, ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದಂತಹ ಮೂರು ಕರಾಳ ಕೃಷಿ ಕಾಯ್ದೆಗಳನ್ನ ರದ್ದುಗೊಳಿಸ ಬೇಕು ಎಂದು ಅನ್ನದಾತರ ನಡೆಸಿದ ನಿರಂತರ ಹೋರಾಟಕ್ಕೆ ಮಣಿದು ಹಿಂದಕ್ಕೆ ಪಡೆದಿದೆ. ಸಂಸತ್‌ನಲ್ಲೂ ಅನುಮೋದನೆ ಪಡೆದುಕೊಂಡಿದೆ. ಮೂರು ಕರಾಳ ಕಾಯ್ದೆಗಳು ಅನೂರ್ಜಿತವಾಗಲು ಅತ್ಯಗತ್ಯವಾಗಿರುವ ರಾಷ್ಟ್ರಪತಿಗಳ ಅಂಕಿತ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ವರ್ಷದಿಂದ ದೇಶದ ರೈತರು ಪ್ರತಿಭಟನೆ ನಡೆಸಿದರು.
ರಾಜಕೀಯ ಇಚ್ಚಾಶಕ್ತಿಯಿಂದಾಗಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ. ರಾಷ್ಟ್ರಪತಿಯವರಿಂದ ಅಂಕಿತ ಹಾಕಿಸಬೇಕು. ಅಲ್ಲಿಯವರೆಗೆ ಪ್ರಕ್ರಿಯೆ ಮುಗಿಯುವುದಿಲ್ಲ. ಪ್ರಧಾನ ಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ವಾಮಿನಾಥನ್ ವರದಿಗೆ ಅನುಸಾರವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಬೆಳೆಗಳ ಖರೀದಿ ಮಾಡುವುದು ಶಿಕ್ಷಾರ್ಹ ಅಪರಾಧ ಎೆಂದು ಕಾನೂನು ಮಾಡುವ ಮೂಲಕ ರೈತರನ್ನು ರಕ್ಷಿಸಬೇಕು. ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿರುವ ಎಪಿಎಂಸಿ, ವಿದ್ಯುತ್, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಆವರಗೆರೆ ಎಚ್ .ಜಿ. ಉಮೇಶ್, ಹುಚ್ಚವ್ವನಹಳ್ಳಿ ಮಂಜುನಾಥ್, ಆವರಗೆರೆ ಚಂದ್ರು, ಗುಮ್ಮನೂರು ಬಸವರಾಜ್, ಐರಣಿ ಚಂದ್ರು, ಹೊನ್ನೂರು ಮುನಿಯಪ್ಪ, ಜಬೀನಾಖಾನಂ, ಕೆಂಚಮ್ಮನಹಳ್ಳಿ ಹನುಮಂತ, ಕೈದಾಳೆ ಮಂಜುನಾಥ್, ಮಧು ತೊಗಲೇರಿ, ಡಾ| ಸುನೀತ್ ಕುಮಾರ್, ನಾಗಜ್ಯೋತಿ, ಅಣಬೇರು ತಿಪ್ಪೇಸ್ವಾಮಿ, ಬಲ್ಲೂರು ರವಿಕುಮಾರ್ ಇತರರು ಇದ್ದರು.