ಲಕ್ಷ್ಮೇಶ್ವರ: ಹಿಂಗಾರು ಹಂಗಾಮಿನ ಬೆಳೆ ವಿಮೆ ಪಾವತಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಪ್ರಚಾರ ವಾಹನವನ್ನು ಮಂಗಳವಾರ ಲಕ್ಷ್ಮೇಶ್ವರದ ಕೃಷಿ ಇಲಾಖೆ ಕಚೇರಿ ಮುಂದೆ ರೈತರು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಕರ್ನಾಟಕ ರೈತ ಸುರûಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಹಿಂಗಾರುಬೆಳೆಗಳ ಪ್ರಚಾರಾರ್ಥವಾಗಿ ಆಗಮಿಸಿದ್ದ ವಾಹನ ಹಾಗೂ ವಿಮಾ ಕಂಪನಿಯ ಪ್ರತಿನಿ ಧಿಯನ್ನು ತಡೆದು ನಿಲ್ಲಿಸಿದರು. ರೈತರಿಂದ ಬೆಳೆ ವಿಮೆ ಕಂತು ಮಾತ್ರ ತುಂಬಿಸಿಕೊಳ್ಳುವ ಕಂಪನಿಗಳು ರೈತರಿಗೆ ನಷ್ಟವಾದಾಗ ಪರಿಹಾರ ಕೊಡುವುದಿಲ್ಲ. ಬೆಳೆ ವಿಮೆ ಪಾವತಿಸಿದ ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈಗ ಮತ್ತೆ ಬರಿಗೈಯಲ್ಲಿರುವ ರೈತರ ಮನವೊಲಿಸಿ, ಸಾಲಗಾರರನ್ನಾಗಿಸಿ ವಿಮೆ ಪಾವತಿಸಿಕೊಳ್ಳುವ ಕಂಪನಿಗಳ ಬಗ್ಗೆ ಭರವಸೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿದರು. ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸೇರಿ ರೈತರ ಸಮಸ್ಯೆಗಳಿಗೆ ಜಿಲ್ಲಾ ಮಟ್ಟದಲ್ಲಿ ಕೃಷಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಮೊದಲೇ ಹಲವಾರು ಸಂಕಷ್ಟಗಳಿಂದ ನೊಂದಿರುವ ರೈತರ ಜತೆ ಅಧಿಕಾರಿಗಳು ಸಹಾನುಭೂತಿಯಿಂದ ವರ್ತಿಸಬೇಕು ಮತ್ತು ಸೂಕ್ತ ಮಾಹಿತಿ ನೀಡಬೇಕು ಎಂದು ರೈತ ಶಿವಾನಂದ ಲಿಂಗಶೆಟ್ಟಿ ಆಗ್ರಹಿಸಿದರು.
ಈ ವೇಳೆ ರೈತರಾದ ಶ್ರೀಕಾಂತ ವಾಲ್ಮೀಕಿ, ರಾಮಣ್ಣ ಫಲದಡ್ಡಿ, ಹನುಮಂತಪ್ಪ ವಾಲ್ಮೀಕಿ, ಕರೆಯಪ್ಪ ಹುರಕನವರ, ಸುರೇಶ ಕುಂದಳ್ಳಿ, ಮಂಜುನಾಥ ಭಾವಿಕಟ್ಟಿ, ಪರಮೇಶಪ್ಪ ಕಿತ್ತಲಿ, ಟಾಕಪ್ಪ ಸಾತಪೂತೆ, ಖಾನಸಾಬ ಸೂರಣಗಿ ಸೇರಿ ಅನೇಕ ರೈತರಿದ್ದರು. ವಿಮಾ ಕಂಪನಿ ತಾಲೂಕು ಪ್ರತಿನಿಧಿ ಮಹಾಂತೇಶ ಪ್ರಭಯನ್ನವರಮಠ, ಕೃಷಿ ಅಧಿಕಾರಿ ಎನ್. ಎಚ್.ಹಣಗಿ ರೈತರಿಗೆ ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಯ ಬಹುತೇಕ ರೈತರಿಗೆ ಹಿಂದಿನ ವರ್ಷಗಳ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಜಮೆಯಾಗಿದೆ. ವಿಮೆ ಪಾವತಿ ಕಡ್ಡಾಯವಲ್ಲ. ಆದರೆ ರೈತರ ಹಿತದೃಷ್ಟಿಯಿಂದ ಸೂಕ್ತ ಮಾಹಿತಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ವಿಮೆ ಪಾವತಿ ಮತ್ತು ವಿಮೆ ಪರಿಹಾರದ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಕೊರತೆಯಿಂದ ಸಮಸ್ಯೆ ಉಂಟಾಗುತ್ತವೆ. ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲಾಗುವುದು. –
ರುದ್ರೇಶಪ್ಪ ಟಿ.ಎಸ್., ಜಂಟಿ ಕೃಷಿ ನಿರ್ದೇಶಕ