ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಏಕಾಏಕಿ ಕುಸಿದಿದ್ದನ್ನು ಖಂಡಿಸಿ ರೈತರು ಹುಬ್ಬಳ್ಳಿ-ಧಾರವಾಡ ರಸ್ತೆ ಒಂದು ಗಂಟೆ ಬಂದ್ ಮಾಡಿದ ಘಟನೆ ಸೋಮವಾರ ನಡೆಯಿತು.
ಬೆಳಗ್ಗೆ 11 ಗಂಟೆಗೆ ಟೆಂಡರ್ ಆರಂಭವಾಗುತ್ತಿದ್ದಂತೆಯೇ ಉಳ್ಳಾಗಡ್ಡಿ ದರ ಕ್ವಿಂಟಲ್‌ಗೆ 1500ರೂ.ದಿಂದ 2000ರೂ. ವರೆಗೆ ನಿಗದಿಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ಶನಿವಾರದ ದರ ನೀಡಬೇಕೆಂದು ಒತ್ತಾಯಿಸಿದರು. ವ್ಯಾಪಾರಸ್ಥರಿಂದ ಸ್ಪಂದನೆ ದೊರೆಯದಿದ್ದಾಗ, ರೈತರು ರಸ್ತೆ ತಡೆಗೆ ಮುಂದಾದರು.
ಸುಮಾರು 70-80 ರೈತರು ಹು-ಧಾ ರಸ್ತೆಯ ಮಧ್ಯೆ ಕಲ್ಲುಗಳನ್ನಿಟ್ಟು ರಸ್ತೆ ಬಂದ್ ಮಾಡಿದರು. ಪರ್ಯಾಯ ಮಾರ್ಗದಲ್ಲಿ ಸಂಚಾರ ಕಲ್ಪಿಸಲಾಗಿತ್ತು. ಬಿಆರ್‌ಟಿಎಸ್ ಬಸ್‌ಗಳಿಗೆ ಸಂಚಾರಕ್ಕೆ ಅವಕಾಶ ಇಲ್ಲದೆ ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಆಗಮಿಸಿ ರೈತರ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಎಪಿಎಂಸಿ ಅಧ್ಯಕ್ಷರು ಬರಬೇಕೆಂದು ರೈತರು ಪಟ್ಟು ಹಿಡಿದರು. ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡರ ಆಗಮಿಸಿ, ರೈತರು ಹಾಗೂ ವ್ಯಾಪಾರಸ್ಥರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರಿಂದ ರೈತರು ರಸ್ತೆ ತಡೆ ಹಿಂತೆಗೆದುಕೊಂಡರು.
ಗೊಂದಲ: ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಹಮಾಲಿ ಕಾರ್ಮಿಕರು ಇದೇ ವೇಳೆ ಧರಣಿಗೆ ಮುಂದಾಗಿದ್ದರಿಂದ ಗೊಂದಲ ಸೃಷ್ಟಿಯಾಯಿತು. ವ್ಯಾಪಾರಸ್ಥರು ಉದ್ದೇಶಪೂರ್ವಕವಾಗಿ ಹಮಾಲಿ ಕಾರ್ಮಿಕರ ಮೂಲಕ ಹೋರಾಟ ಮಾಡಿಸುತ್ತಿದ್ದಾರೆಂದು ರೈತರು ಆರೋಪಿಸಿದರು. ಈ ವೇಳೆ ರೈತರು-ಹಮಾಲರಮಧ್ಯ ಮಾತಿನ ಚಕಮಕಿ ನಡೆಯಿತು. ವ್ಯಾಪಾರಸ್ಥರು ಹಮಾಲರಿಗೆ ಬೆಂಬಲ ನೀಡಿದ್ದು ರೈತರ ಆಕ್ರೋಶ ಇನ್ನಷ್ಟು ಹೆಚ್ಚುವಂತೆ ಮಾಡಿತು.
ಅಸಮಾಧಾನ ಸ್ಫೋಟ: ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಭಾಗಗಳಿಂದ ರೈತರು ಇಲ್ಲಿನ ಎಪಿಎಂಸಿಗೆ ಈರುಳ್ಳಿ ಮಾರಾಟಕ್ಕೆ ಬಂದಿದ್ದಾರೆ. ಶನಿವಾರ ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 5000ರೂ.ವರೆಗೂ ಮಾರಾಟವಾಗಿದೆ. ಆದರೆ ಸೋಮವಾರ ಆವಕ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ಏಕಾಏಕಿ ದರ ಇಳಿಸಿದ್ದಾರೆ. ಅತಿವೃಷ್ಟಿಯಿಂದಾಗಿ ರೈತರು ಆತಂಕದಲ್ಲಿದ್ದಾರೆ. ಉಳ್ಳಾಗಡ್ಡಿಗೆ ಕ್ವಿಂಟಲ್‌ಗೆ 1500ರಿಂದ 2000ರೂ.ವರೆಗೆ ದರ ನಿಗದಿ ಮಾಡಿದರೆ ನಾವು ರೈತರು ಬದುಕುವುದು ಹೇಗೆ? ಎಂಬುದು ರೈತರ ಪ್ರಶ್ನೆಯಾಗಿತ್ತು. ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡರ, ರೈತರ ಹಿತ ಕಾಪಾಡುವುದು ಎಪಿಎಂಸಿ ಕರ್ತವ್ಯ.
ಟೆಂಡರ್ ಪ್ರಕ್ರಿಯೆಗೆ ಸಹಕರಿಸುವಂತೆ ರೈತರಿಗೆ ಮನವಿ ಮಾಡಿದರಲ್ಲದೆ, ಉತ್ತಮ ಗುಣಮಟ್ಟದ ಉಳ್ಳಾಗಡ್ಡಿಗೆ ಒಳ್ಳೆಯ ದರ ನೀಡಿ ಎಂದು ವ್ಯಾಪಾರಸ್ಥರಿಗೆ ತಿಳಿಸಿದರು. ನಂತರ ಟೆಂಡರ್ ಆರಂಭಗೊಂಡಿತು. ಉತ್ತಮ ಗುಣಮಟ್ಟದ ಉಳ್ಳಾಗಡ್ಡಿಗೆ ಪ್ರತಿ ಕ್ವಿಂಟಲ್‌ಗೆ 4000ರೂ. ವರೆಗೂ ದರ ಲಭಿಸಿತು.