Advertisement

ಸರ್ಕಾರದಿಂದ ರೈತಪರ ಯೋಜನೆ ಜಾರಿ; ರೇಣುಕಾಚಾರ್ಯ

06:27 PM Jun 07, 2022 | Team Udayavani |

ಹೊನ್ನಾಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಪರ ಚಿಂತನೆ ನಡೆಸಿ ರೈತರಿಗೆ ಉಪಯೋಗವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಅರಕೆರೆ ಗ್ರಾಮದಲ್ಲಿ ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ ಬೆಂಗಳೂರು, ಮತ್ತು ಹೊನ್ನೆತ್ತೆಮ್ಮ ಬಂಧು ರೈತ ಉತ್ಪಾದಕ ಕಂಪನಿ ಅರಕೆರೆ ಹಾಗೂ ಸಹರಾ ಸಂಸ್ಥೆ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ರೈತರೊಂದಿಗೊಂದು ದಿನ’, ರೈತರಿಗೆ ಬೆಳೆ ಬೆಳೆಯುವ ಬಗ್ಗೆ ತಜ್ಞರಿಂದ ಮಾಹಿತಿ ಹಾಗೂ ಸಂಘದ ಸದಸ್ಯರಿಗೆ ಬಾಂಡ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಪ್ರಧಾನಿ ನರೇಂದ್ರ ಮೋದಿ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಎಲ್ಲಾ ಬೆಳೆಗಳನ್ನು ಸರ್ಕಾರ ಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಯೋಧರು ಹಾಗೂ ರೈತರನ್ನು ಎರಡು ಕಣ್ಣುಗಳಂತೆ ಕಾಣುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಒಂದೇ ಗಂಟೆಯಲ್ಲಿ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯವಾಗಲೆಂದು ಕೃಷಿ ವಿದ್ಯಾನಿಧಿ  ಘೋಷಿಸಿ 43 ಲಕ್ಷ ರೂ.ಗಳ ಪ್ರೋತ್ಸಾಹಧನದ ಚೆಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊನ್ನೆತ್ತೆಮ್ಮ ಬಂಧು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಎ.ಬಿ. ಹನುಮಂತಪ್ಪ ಮಾತನಾಡಿ, ಗ್ರಾಮದಲ್ಲಿ ಸ್ಥಾಪನೆಯಾಗಿರುವ ರೈತ ಉತ್ಪಾದಕ ಕಂಪನಿ ಉತ್ತರೋತ್ತರವಾಗಿ ಬೆಳೆಯಲು ಸಂಘದ ಎಲ್ಲಾ ಸದಸ್ಯರ ಸಹಕಾರ ಮತ್ತು ಸಹಾಯ ಅಗತ್ಯ ಎಂದು ಹೇಳಿದರು.

Advertisement

ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್‌. ಪ್ರತಿಮಾ, ಉಪ ಕೃಷಿ ನಿರ್ದೇಶಕ ಸಿದ್ದೇಶ್‌, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜಿ.ಆರ್‌. ವೀರಭದ್ರಸ್ವಾಮಿ, ಹೊನ್ನೆತ್ತೆಮ್ಮ ಪ್ರಕಾಶನ ಬಂಧು ರೈತ ಉತ್ಪಾದಕ ಕಂಪನಿ ಉಪಾಧ್ಯಕ್ಷ ಸಿ.ಎಚ್‌. ಅಶೋಕ್‌ ಮತ್ತು ಸದಸ್ಯರು, ಅರಬಗಟ್ಟೆ ಗ್ರಾಮದ ಪ್ರಕಾಶನ ರೈತ ಸಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ರಮೇಶ್‌ ಇತರರು ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ರೇಷ್ಮಾ ಮತ್ತು ಉಮೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next