Advertisement
ನಮ್ಮಂಥ ಕೃಷಿಕ ಮಹಿಳೆಯರಿಗೆ ಪ್ರತಿದಿನವೂ ಗೃಹಕೃತ್ಯ ನೋಡಿಕೊಳ್ಳುವುದಲ್ಲದೆ ಬೇರೆ ದಿನಚರಿಯಿಲ್ಲ. ಏಕತಾನತೆಯ ಬದುಕು. ಹೊಸ ಅನುಭವ ಸಿಗಬೇಕೆಂದರೆ, ಬದಲಾವಣೆ ಸಿಗಬೇಕೆಂದರೆ ಮನೆಗೆ ಅತಿಥಿಗಳು ಬರಬೇಕು. ಅವರೊಡನೆ ಮಾತನಾಡುತ್ತ, ಅವರನ್ನು ಸತ್ಕರಿಸುತ್ತ ಕೊಂಚವಾದರೂ ನಿತ್ಯಬದುಕಿನಲ್ಲಿ ಬದಲಾವಣೆ ಸಿಗುತ್ತದೆ. ಆದರೆ, ತೀರಾ ಹಳ್ಳಿಯಲ್ಲಿರುವ ಕೃಷಿಕ ಕುಟುಂಬದವರು ಒಮ್ಮಿಂದೊಮ್ಮೆಲೇ ಅತಿಥಿಗಳು ಆಗಮಿಸಿದರೆಂದರೆ ಕೊಂಚ ದಿಗಿಲುಗೊಂಡುಬಿಡುತ್ತಾರೆ. ದಿಗಿಲುಗೊಳ್ಳುವುದು ನಿಜವಾದರೂ ಹಳ್ಳಿಯವರಿಗೆ ಇದರಿಂದ ಸಂಭ್ರಮವಾಗುವುದು ಅಷ್ಟೇ ನಿಜ. ದಿಗಿಲು ಯಾಕೆನ್ನುವಿರಾ? ಈಗಿನ ಬದಲಾದ ಜಮಾನದಲ್ಲಿ , ಹೆಚ್ಚಿನ ಕೃಷಿಕರು ವಾಣಿಜ್ಯ ಬೆಳೆಗಳ ಮೊರೆ ಹೊಕ್ಕಿದ್ದಾರೆ. ಮನೆಯಲ್ಲಿ ಅಗತ್ಯಕ್ಕೆ ಬೇಕಾದ ತರಕಾರಿ ಇರುವುದಿಲ್ಲ, ಬೆಳೆಯುವುದೂ ಇಲ್ಲ. ಎಲ್ಲವನ್ನೂ ಅಂಗಡಿಯಿಂದಲೇ ತರುವುದು. ಕೋಳಿಸಾಕಣೆ, ಹೈನುಗಾರಿಕೆ, ಜೇನು ಸಂಗ್ರಹ, ತೋಟಗಾರಿಕೆ ಇತ್ಯಾದಿ ಆದಾಯದ ಮೂಲಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡಿ ತೋಟದ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ಇಂಥ ಬದಲಾವಣೆಗಳು ಹಳ್ಳಿಯ ಜೀವನದಲ್ಲಿ ಸಾಧಾರಣವಾಗುತ್ತಿರುವಾಗ ಅತಿಥಿಗಳು ಬಂದರೆ ಏನು ಮಾಡುವುದು! ಆರೇಳು ಮೈಲಿ ದೂರದ ಪೇಟೆಗೆ ಹೋಗಿ ಸಾಮಾನುಗಳನ್ನು ತರಬೇಕಷ್ಟೆ. ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ನಮ್ಮೂರ ಶಾಲೆಯ ಹತ್ತಿರ ಚಿಕ್ಕ ಎರಡು ಅಂಗಡಿಗಳಿವೆ. ಅವುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಶಾಲಾಮಕ್ಕಳಿಗೆ ಬೇಕಾದ ತೀರಾ ಅಗತ್ಯದ ವಸ್ತುಗಳು, ಚಾಕೊಲೇಟ್‌ನಂಥ ತಿನಿಸುಗಳು ಮಾತ್ರ ಅಲ್ಲಿ ಲಭ್ಯ.
Related Articles
Advertisement
ಹೆಚ್ಚಾಗಿ, ಆಮಂತ್ರಣ ಪತ್ರಿಕೆ ನೀಡಲು, ಕಾರ್ಯಕ್ರಮಕ್ಕೆ ಹಣ ಸಂಗ್ರಹಿಸಲು ಕೆಲವರು ಪೂರ್ವಸೂಚನೆ ಇಲ್ಲದೇ ಆಗಮಿಸುವವರು ಇದ್ದಾರೆ. ನಮ್ಮದೇ ಮನೆ. ಕೃಷಿ ಕೆಲಸ ಮಾಡಲು ಮುಜುಗರವಿಲ್ಲ. ಕೈಯಲ್ಲಿ ಮಣ್ಣು ಮಾಡಿಕೊಳ್ಳಲು, ಮಾಸಿದ ಬಟ್ಟೆ ಧರಿಸಲು ಸಂಕೋಚವಿಲ್ಲ. ಆದರೆ, ಯಾರಾದರೂ ಆಗಂತುಕರು ಆಗಮಿಸಿದಾಗ ಅವರೆದುರು ಹೀಗೆ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆಯೆ?
ಆದರೆ, ಮೊಬೈಲ್ ಬಂದಿರುವುದರಿಂದ ಇಲ್ಲೂ ಒಂದು ಲಾಭವಿದೆ. ಪಕ್ಕದ ಮನೆಗೆ ಯಾರಾದರೂ ಬಂದರೆ ಅವರು ಕೂಡಲೇ ತಿಳಿಸುತ್ತಾರೆ. ಅಥವಾ ನಮ್ಮ ಮನೆಗೆ ಬಂದರೂ ನಾವು ಅವರಿಗೆ ತಿಳಿಸುತ್ತೇವೆ. ಇಂಥ ಸಹಕಾರಿ ಮನೋಭಾವದಿಂದ ತತ್‌ಕ್ಷಣ ವೇಷಪಲ್ಲಟ ಮಾಡಿ ಅತಿಥಿಗಳ ಮುಂದೆ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮನೆಯಲ್ಲಿರುವಾಗಲೇ ಪ್ರತಿದಿನ ಒಳ್ಳೊಳ್ಳೆಯ ಬಟ್ಟೆ ಧರಿಸಿ ಒಪ್ಪವಾಗಿ ಇರೋಣವೆಂದರೆ ಕೃಷಿಕ ಮಹಿಳೆಯರ ಕಾಯಕಗಳು ಅದಕ್ಕೆ ಅವಕಾಶ ನೀಡುವುದಿಲ್ಲ. ಒಲೆಯ ಮುಂದೆ ಕುಳಿತಿರುವುದರಿಂದ ಮಸಿ ಮೆತ್ತಿಕೊಳ್ಳುತ್ತದೆ. ಹಟ್ಟಿಗೆ ಹೋಗಿ ಬಂದರೆ, ಸೌದೆ ಹೊತ್ತು ತಂದರೆ ತೊಳೆ-ತಿಕ್ಕುಗಳಿಂದ ಗಲೀಜು ಉಂಟಾಗುವುದು ಸಾಮಾನ್ಯ. ತೋಟದ ಉತ್ಪನ್ನಗಳಾದ ಕೊಕ್ಕೋ, ಬಾಳೆ, ಸೀಯಾಳ ಇವುಗಳನ್ನೆಲ್ಲ ಮುಟ್ಟುವಾಗ, ಕೊಂಚ ಅಜಾಗರೂಕತೆ ವಹಿಸಿದರೂ ಕರೆ ಅಥವಾ ಕಲೆ ಶಾಶ್ವತವಾಗಿ ಬಟ್ಟೆಗಳಲ್ಲಿ ಉಳಿದುಬಿಡುತ್ತವೆ. ಚಿಕ್ಕಮಕ್ಕಳಿದ್ದರಂತೂ ಬಟ್ಟೆ ಗಲೀಜಾಗುವುದು ಇನ್ನೂ ಜಾಸ್ತಿ. ಬೆಳಗ್ಗೆಯಿಂದ ಸಂಜೆಯವರೆಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ. ಕೈಕೊಳೆಯಾದರೆ ಹಾಕಿದ ಬಟ್ಟೆಯಲ್ಲೇ ಉಜ್ಜಿಬಿಡುತ್ತೇವೆ. ಹಾಗಾಗಿ, ಕೃಷಿ ಮಹಿಳೆಯರು ತಮ್ಮ ನಿಲುವಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ಮನೆಯಲ್ಲಿ ಇರುವಾಗ ಪೇಟೆಯವರಂತೆ ಅಂದವಾಗಿ ಉಡುಪು ಧರಿಸಿಕೊಂಡಿರಲು ಸಾಧ್ಯವಾಗುವುದಿಲ್ಲ.
ಕೃಷಿ ನೋಡಿಕೊಳ್ಳುವ ಗೆಳತಿ ಇತ್ತೀಚೆಗೆ ಫೋನ್ ಮಾಡಿದ್ದಳು. ಅವಳ ಮಾತುಗಳನ್ನು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿರುವೆ. ಗಂಡ-ಹೆಂಡತಿ ಇಬ್ಬರೂ ಹಾರೆಯಲ್ಲಿ ತರಕಾರಿ ಸಾಲು ತೆಗೆಯುತ್ತಿದ್ದರಂತೆ. ಸಂಪೂರ್ಣ ಮಣ್ಣು ಮೆತ್ತಿಕೊಂಡು ಅದರೊಂದಿಗೆ ಬೆವರು ತಳುಕು ಹಾಕಿಕೊಂಡು ಅವರನ್ನು ನೋಡುವಂತೆಯೇ ಇರಲಿಲ್ಲ. ಅಚಾನಕ್ಕಾಗಿ ಅತಿಥಿಗಳು ಬಂದರು. ದೂರದಲ್ಲಿ ಅವರನ್ನು ನೋಡಿ ಹೌಹಾರಿದರು. ತೀರಾ ಪರಿಚಯದವರಾದರೆ ಅಲ್ಲಿಯೇ ಮಾತನಾಡಿ ಸುಧಾರಿಸಬಹುದಿತ್ತು. ಅವರು ಹಳೆಯ ಕಾಲೇಜು ಗುರುವೃಂದದವರು. ಸುವರ್ಣ ಮಹೋತ್ಸವಕ್ಕೆ ಹಣ ಸಂಗ್ರಹಿಸಲು ಬಂದಿದ್ದರು. ಅವರನ್ನು ಹೇಗೆ ಎದುರುಗೊಳ್ಳುವುದೆಂದು ಗೆಳತಿಗೆ ದಿಗಿಲಾಯಿತು. ತಡಮಾಡಲಿಲ್ಲ. ಎದುರಿನಿಂದ ಹೋದರೆ ಅತಿಥಿಗಳಿಗೆ ಕಾಣಿಸುತ್ತದೆ. ಅಲ್ಲಿಂದಲೇ ಇಬ್ಬರೂ ಮನೆಯ ಹಿತ್ತಲಲ್ಲಿ ಓಡಿ ಕಿಟಕಿ ಹತ್ತಿ ಟೆರೇಸ್‌ಗೆ ಏರಿದರು. ಅಲ್ಲಿಂದ ಒಳಗೆ ಇಳಿದರು. ಕೈಕಾಲು ತೊಳೆದು ಬಟ್ಟೆ ಬದಲಾಯಿಸಿ ಬಂದ ಅತಿಥಿಗಳ ಮುಂದೆ ಪ್ರತ್ಯಕ್ಷರಾದರು.
ಇದು ಕೀಳರಿಮೆಯ ವಿಷಯವಲ್ಲ . ಇದನ್ನು ಹೇಳಿಕೊಳ್ಳುವುದರಲ್ಲಿ ಎಳ್ಳಷ್ಟೂ ನಾಚಿಕೆಯೂ ಇಲ್ಲ. ಇದು ಮನಸ್ಸಿಗೆ ಸಂಬಂಧಿಸಿದ ವಿಚಾರ. ತರಗತಿಯಲ್ಲಿ ಕಲಿಕೆಯಲ್ಲಿ ಎಲ್ಲರಿಗಿಂತ ಮುಂದಿದ್ದ ಹುಡುಗಿ ಈಗ ಮನೆಯಲ್ಲಿ ಮುಸುರೆ ತಿಕ್ಕಿ , ಮಣ್ಣುಕೆಲಸ ಮಾಡುತ್ತಿದ್ದಾಳೆ ಎಂದು ತೋರಿಸಿಕೊಳ್ಳಲು ಭಯವೇ? ಅದೂ ಗೊತ್ತಿಲ್ಲ. ಹೊರಗಡೆ ಉದ್ಯೋಗಕ್ಕೆ ಹೋದರೆ ಜ್ಞಾನ, ಅನುಭವ ವಿಸ್ತಾರಗೊಳ್ಳುತ್ತದೆ ಎಂದು ಗುರುಗಳು ಈಗ ಕೇಳಿದರೆ ಏನುತ್ತರ ಕೊಡಲಿ ಎಂಬ ಅಳುಕಿರಬಹುದೇ? ಅದೂ ತಿಳಿದಿಲ್ಲ . ಧೈರ್ಯದಿಂದ ಮನೆವಾರ್ತೆ, ಕೃಷಿ ಕೆಲಸ ಮಾಡುತ್ತಿದ್ದೇನೆ ಎನ್ನಲು ಧೈರ್ಯದ ಧ್ವನಿ ಇಲ್ಲ. ಒಟ್ಟಿನಲ್ಲಿ ಬಂದವರ ಎದುರು ನನಗೆ ಹೊರಗೆ ದುಡಿಯುವ ಅನಿವಾರ್ಯತೆ ಇಲ್ಲ ಎಂದು ತೋರಿಸಿಕೊಳ್ಳುವ ಅರಿಯಲಾಗದ ಅಭಿಲಾಷೆ ಅಷ್ಟೆ! ಬದುಕು ತಂದು ನಿಲ್ಲಿಸುವ ತಿರುವು ಎಲ್ಲಿರುತ್ತದೆ ಎಂದು ಕಂಡುಕೊಳ್ಳುವ ಹೊತ್ತಿಗೆ ಬದುಕಿನ ಬಹುಪಾಲು ಮುಗಿದಿರುತ್ತದೆ.
ಬಂದವರನ್ನು ಉಳಿದುಕೊಳ್ಳಿ ಎಂದೇ ಒತ್ತಾಯಿಸುತ್ತೇವೆ. ಮಹಾನಗರದಲ್ಲಿ ವಾಸಿಸುವ ಮಹಿಳೆಯರು ತಾವು ಉಟ್ಟ ಉಡುಗೆಯಲ್ಲಿಯೇ ಛಂಗನೆ ಮೆಟ್ಟಿಲಿಳಿದು ಹಾರಿಹೋಗಿ ಪಕ್ಕದ ಅಂಗಡಿಯಿಂದ ಬೇಕಾದ ಸಾಮಾನು ತಂದು ಚಕಚಕನೆ ಸ್ಟವ್‌ನಲ್ಲಿ ತಿನಿಸು ತಯಾರಿಸುತ್ತಾರೆ. ಪ್ಲಾಸ್ಟಿಕ್ ಕವರ್ ಒಳಗಿಂದ ಹಾಲು ತೆಗೆದು ನಿಮಿಷದಲ್ಲಿ ಕಾಫಿ ಸಿದ್ಧವಾಗುತ್ತದೆ. ಇದು ಹಳ್ಳಿಯವರಿಗೆ ಸಾಧ್ಯವಿಲ್ಲ. ಏನೇ ಇರಲಿ, ಸಂತೋಷ ಎಂಬುದು ನಮ್ಮೊಳಗೆಯೇ ಅಡಗಿದೆ ಹೊರತು ನಮ್ಮ ಜೀವನ ಶೈಲಿಯಲ್ಲಲ್ಲ. ಮೊನ್ನೆ ತಾನೆ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಂತಹ ಅತಿಥಿಗಳು ಆಗಮಿಸಿದಾಗ ನಮ್ಮ ಹಳ್ಳಿಮನೆಯ ದಾರಿಯನ್ನು , ಇಲ್ಲಿನ ಕಾರ್ಯವೈಖರಿಯನ್ನು ಕಂಡು ಬೆಚ್ಚಿದರು. ಒಂದು ಅಂಗಡಿಯೂ ಇಲ್ಲದ ಕಾಡುದಾರಿಯಲ್ಲಿ ಸುಮಾರು ದೂರ ಕ್ರಮಿಸಿ ನಮ್ಮಲ್ಲಿಗೆ ತಲುಪಿದ್ದೇ, ಮೊದಲು ಕೇಳಿದ ಪ್ರಶ್ನೆ, “ಹೇಗೆ ಒಮ್ಮಿಂದೊಮ್ಮೆಲೆ ಅಷ್ಟು ದೂರ ಹೋಗ್ತಿàರಾ, ತುರ್ತು ವೈದ್ಯರ ಸೇವೆಗೆ ಏನು ಮಾಡ್ತೀರ?’ ನಮ್ಮ ಹಳ್ಳಿಯಲ್ಲಿನ ವಿಚಾರಗಳ ಕುರಿತು ಅವರಿಗೆ ನಂತರ ಸಾವಕಾಶವಾಗಿ ತಿಳಿಹೇಳಿದೆ. ಹಳ್ಳಿಯಲ್ಲಿ ವಾಸಿಸುವ ನಾವು ಚಲನಚಿತ್ರ ನೋಡಲು ಥಿಯೇಟರ್ ಕಡೆ ಹೋದದ್ದೇ ಇಲ್ಲ. ಮೂವತ್ತೆ„ದು-ನಲವತ್ತು ಕಿ.ಮೀ. ದೂರದ ಪಟ್ಟಣದಲ್ಲಿ ಥಿಯೇಟರ್ ಇದೆ, ಆದರೆ, ಹಾಗೆ ಹೋಗುವ ಆಸಕ್ತಿ ಹಳ್ಳಿ ಮಹಿಳೆಯರಲ್ಲಿ ಯಾರಲ್ಲೂ ಇಲ್ಲ. ನಮ್ಮೂರಿನ ದೇವರ, ದೈವಗಳ ಜಾತ್ರೆಗಳ ವಿವರ, ಸ್ತ್ರೀಶಕ್ತಿ ಸಂಘಗಳ ಚಟುವಟಿಕೆ, ಪ್ರತಿ ಮನೆಯ ಖಾಸಗಿ ಕಾರ್ಯಕ್ರಮಗಳಿಗೆ ಹಳ್ಳಿಗರೆಲ್ಲ ಸೇರುವ ವಿಚಾರ ಮೊದಲಾದ ಸಂಗತಿಗಳನ್ನು ಅವರಿಗೆ ವಿವರಿಸಿದಾಗ ಅವರು ಚಕಿತರಾದರು.
ಪಟ್ಟಣದಲ್ಲಿ ವಾರಕ್ಕೊಮ್ಮೆ ಮಾಲ್, ಸಿನಿಮಾ ಎಂದು ಸುತ್ತಾಡದಿದ್ದರೆ ಅದು ಸುಖವಾದ ಜೀವನವೇ ಅಲ್ಲ ಎಂಬಂತಿದೆ. ಸಂಜೆಯ ಹೊತ್ತಿಗೆ ಎಲ್ಲಾದರೂ ಸುತ್ತಾಡಿ ಬರೋಣ ಎಂದು ನಮ್ಮನ್ನು ಕರೆದಾಗ ನಾವು ಹೊರಡಲು ಹಿಂದೇಟು ಹಾಕಿದ್ದು ಕಂಡು ಅತ್ಯಾಶ್ಚರ್ಯ ಪಟ್ಟರು. ನಮ್ಮ ಸಂಜೆಯ ಕೆಲಸದ ವೇಳಾಪಟ್ಟಿಯಲ್ಲಿ ನಮಗೆ ಬಿಡುವೇ ಇಲ್ಲ. ನಾವು ಎಲ್ಲಿಗೆ ಹೋಗಬೇಕೆಂದರೂ ಮೊದಲೇ ನಿರ್ಧರಿತವಾಗಬೇಕು. ಆಗ ಕೆಲಸವನ್ನೆಲ್ಲ ಆ ಹೊತ್ತಿಗೆ ಮುಗಿಸುವಂತೆ ಹೊಂದಿಸಿಕೊಂಡು ಹೊರಡುತ್ತೇವೆ, ಹಳ್ಳಿಯಲ್ಲಿ ಹೆಚ್ಚಿನ ಯಾವ ಮನೆಗಳಲ್ಲೂ ಬೀಗ ಹಾಕಿ ಎಲ್ಲರೂ ಹೊರಗೆ ಹೋದ ಸಂದರ್ಭವೇ ಇಲ್ಲ.
ನಮ್ಮ ಶ್ರಮಜೀವನದ ಬಗ್ಗೆ ಅವರಿಗೇನೂ ತಕರಾರಿಲ್ಲ. ಆದರೆ, ಬಿಡುವು ಮಾಡಿಕೊಳ್ಳದಷ್ಟು ಕಾರಣಗಳಿದ್ದಾಗ ಅದು ಕೆಲವೊಮ್ಮೆ ನೆಪಗಳು ಎಂದೆನಿಸಿಬಿಡುತ್ತದೆ. ಆದರೆ, ಹಳ್ಳಿಮಹಿಳೆಯರು ಹೆಚ್ಚಾಗಿ ಹೊರಗಡೆ ಹೋಗದಿರುವುದಕ್ಕೆ ಕೆಲಸದ ಒತ್ತಡವೇ ಕಾರಣ. ದಿನಂಪ್ರತಿ ಮಾಡಲೇಬೇಕಾದ ಅನಿವಾರ್ಯ ಕೆಲಸಗಳೇ ಇರುತ್ತವೆ. ಅದಕ್ಕೆ ನೆಪಗಳನ್ನು ಹೇಳಿ ತಮ್ಮನ್ನು ತಾವು ರಾಜಿಮಾಡಿಕೊಳ್ಳುತ್ತಾರೆ.
ಸಂಗೀತ ರವಿರಾಜ್