Advertisement

ನಿಯೋಜಿತ ರೈಲು ಮಾರ್ಗಕ್ಕೆ ರೈತರ ಆಕ್ರೋಶ

06:07 PM Dec 28, 2021 | Team Udayavani |

ಬೆಳಗಾವಿ: ಬೆಳಗಾವಿ-ಕಿತ್ತೂರು- ಧಾರವಾಡ ನಿಯೋಜಿತ ರೈಲು ಮಾರ್ಗಕ್ಕಾಗಿ ರೈತರಿಗೆ ಆಸರೆಯಾಗಿರುವ ಫಲವತ್ತಾದ ಭೂಮಿ ಬಳಸಿಕೊಳ್ಳುತ್ತಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ರೈತರು ಇದೇ ಜಮೀನು ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕಪ್ಪು ಮಣ್ಣಿನ ಈ ಭೂಮಿ ಫಲವತ್ತಾಗಿದೆ. ಈ ಜಮೀನನ್ನೇ ಕಸಿದುಕೊಂಡರೆ ಇದನ್ನೇ ನಂಬಿರುವ ರೈತರಿಗೆ ಕಷ್ಟವಾಗಲಿದೆ ಎಂದು ಅವರು ಆರೋಪಿಸಿದರು.

ರೈಲು ಮಾರ್ಗಕ್ಕಾಗಿ ಕೆ.ಕೆ.ಕೊಪ್ಪ, ಹಾಳಗಿಮರ್ಡಿ, ನಾಗೇರಹಾಳ, ನಾಗೇನಹಟ್ಟಿ, ನಂದಿಹಳ್ಳಿ, ಗರ್ಲಗುಂಜಿ, ದೇಸೂರು, ರಾಜಹಂಸಗಡ, ಸೇರಿದಂತೆ ಅನೇಕ ಗ್ರಾಮಗಳ ರೈತರು ಜಮೀನು ಕಳೆದುಕೊಳ್ಳಲಿದ್ದು, ಇದಕ್ಕೆ ರೈತರ ವಿರೋಧವಿದೆ ಎಂದರು. ಈ ಮಾರ್ಗದಲ್ಲಿ ಯೋಜನೆ ಮಾಡಿದರೆ ಕೃಷಿ ಭೂಮಿಗಳು, ನೀರಾವರಿ ಹಾಗೂ ಜಾನುವಾರುಗಳಿಗೂ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಇದೇ ಭಾಗದ ಬಂಜರು ಭೂಮಿ ಮೂಲಕ ಮಾರ್ಗ ನಿರ್ಮಿಸಿದರೆ 4 ಕಿ.ಮೀ. ಕಡಿಮೆಯಾಗುತ್ತದೆ. ಜತೆಗೆ ಮಾರ್ಗವನ್ನು ನೇರವಾಗಿಯೇ ರೂಪಿಸಬಹುದು.

ಕಾಮಗಾರಿ ವೆಚ್ಚವೂ ಕಡಿಮೆ ಆಗಲಿದೆ. ಇದರ ಬಗ್ಗೆ ಪುನರ್‌ ಪರಿಶೀಲನೆ ನಡೆಸಬೇಕೆಂದರು. ಕೇವಲ ಬೆಳಗಾವಿ-ಧಾರವಾಡ ನಿಯೋಜಿತ ಮಾರ್ಗದ ಜತೆಗೆ ಬೆಳಗಾವಿ-ಕೊಲ್ಲಾಪುರ ಹೊಸ ಮಾರ್ಗ ನಿರ್ಮಾಣಗೊಂಡರೆ ಈ ಭಾಗದ ಜನತೆಗೆ ಮತ್ತಷ್ಟು ಅನುಕೂಲಕರವಾಗಲಿದೆ ಎಂದರು.

ಕೆ.ಕೆ.ಕೊಪ್ಪದ ಗುಡ್ಡದ ಮೇಲಿಂದ ಹೋಗುವ ರೈಲ್ವೆ ಯೋಜನೆಯನ್ನು ಉದ್ದೇಶ ಪೂರ್ವಕವಾಗಿ ರೈತರ ಫಲವತ್ತಾದ ಭೂಮಿಯ ಮೇಲೆ ಅನುಷ್ಠಾನಗೊಳಿಸಲು ಹೊರಟಿರುವುದು ಖಂಡನೀಯ ಎಂದ ಅವರು, ರೈತರ ಪರ ಬೇಡಿಕೆಗೆ ಸ್ಪಂದಿಸದಿದ್ದರೆ ಜ.3ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ರೈತರನ್ನು ಕರೆದುಕೊಂಡು ಧರಣಿ ಮಾಡಲಾಗುವುದು. ಜತೆಗೆ ಸಂಸದೆ ಮಂಗಲಾ ಸುರೇಶ ಅಂಗಡಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು.

Advertisement

ಮುಖಂಡ ಪ್ರಕಾಶ ನಾಯಕ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳಬಗ್ಗೆ ನಮ್ಮ ವಿರೋಧ ಇಲ್ಲ. ಆದರೆ ರೈತರ ಅಸ್ತಿತ್ವಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರಲ್ಲ. ಈ ನಿಯೋಜಿತ ರೈಲು ಮಾರ್ಗದಿಂದ ಅನೇಕ ರೈತರ ಜಮೀನು ಸರ್ಕಾರದ ಪಾಲಾಗಲಿದೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗಲಿದ್ದಾರೆ. ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಂಡರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ರಾಘವೇಂದ್ರ ನಾಯಿಕ, ನರೇಂದ್ರ ಪಾಟೀಲ, ಪ್ರಸಾದ ಪಾಟೀಲ, ಸಂಗಪ್ಪ ಕಂಬಾರ, ಮಾರುತಿ ಲೋಕೂರ, ಕಿರಣ ಕೊಂಡೆ, ದೇವೇಂದ್ರ ಪಾಟೀಲ, ಪರಶುರಾಮ ಜಾಧವ ಸುದ್ದಿಗೋಷ್ಠಿಯಲ್ಲಿದ್ದರು.

ಕೋಡಿಹಳ್ಳಿ ಆರೋಪ ಸಾಬೀತುಪಡಿಸಲಿ
ಜನ ಬೆಂಬಲ ಕಳೆದುಕೊಂಡಕೋಡಿಹಳ್ಳಿ ಚಂದ್ರಶೇಖರ ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ತಾಕತ್ತಿದ್ದರೆ ಇದನ್ನು ಆರೋಪ ಸಾಬೀತುಪಡಿಸಲಿ. ಅವರುಕೇವಲ ನಮ್ಮ ಮೇಲೆ ಮಾತ್ರವಲ್ಲ. ನಂಜುಂಡಸ್ವಾಮಿ, ಪುಟ್ಟಣ್ಣ, ಬಸವ ರಾಜ ಮಳಲಿ ಸೇರಿದಂತೆ ಅನೇಕರ ಮೇಲೂಹೀಗೆಯೇ ಆರೋಪಿಸಿದ್ದರು. ಇವರ ಸಹವಾಸವೇ ಬೇಡವೆಂದು ಹೊರ ಬಂದಿದ್ದೇವೆಂದು ರೈತ ಸಂಘದ ಮುಖಂಡರಾದ ಚೂನಪ್ಪ ಪೂಜೇರಿ, ಪ್ರಕಾಶ ನಾಯಕ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next