ನಾಯಕನಹಟ್ಟಿ: ಬಂಗಾರದ ಒಡವೆ ಸಾಲ ಪಡೆದ ರೈತರಿಗೆ ಬೇಕಾಬಿಟ್ಟಿಯಾಗಿ ವಸೂಲಾತಿ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಪಟ್ಟಣದ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಎಸ್.ಟಿ. ಬೋರಸ್ವಾಮಿ, ರೈತರು ಬಂಗಾರದ ಒಡವೆಗಳನ್ನು ಬ್ಯಾಂಕ್‌ನಲ್ಲಿಟ್ಟು ಸಾಲ ಪಡೆದಿದ್ದಾರೆ. ಆದರೆ ಸಾಲ ಪಡೆದ ರೈತರು ಏಳು ದಿನಗಳ ಒಳಗೆ ಸಾಲದ ಹಣ ಮತ್ತು ಬಡ್ಡಿಯನ್ನು ತಕ್ಷಣ ಪಾವತಿಸುವಂತೆ ಸಾವಿರಾರು ರೈತರಿಗೆ ನೋಟಿಸ್ ನೀಡಲಾಗಿದೆ. ಬಂಗಾರ ಅಡವಿಟ್ಟು ಒಂದು ವರ್ಷ
ತುಂಬಿದ ಜನರಿಗೂ ನೋಟಿಸ್ ನೀಡಲಾಗಿದೆ. ಬಡ್ಡಿದರವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಲಾಗಿದೆ. ತಮ್ಮ ಒಡವೆ ಹರಾಜಾಗುವ ಭಯದಿಂದ ರೈತರು ಖಾಸಗಿ ಲೇವಾದೇವಿಗಾರರಿಂದ ಹಾಗೂ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಗೆ ಹಣ ತಂದು ಬ್ಯಾಂಕ್‌ಗೆ ಸಾಲದ ಹಣ ಪಾವತಿ ಮಾಡುತ್ತಿದ್ದಾರೆ. ರೈತ ಮಹಿಳೆಯರು ಕೂಡ ತಮ್ಮ ಒಡವೆ ಹರಾಜಾಗುತ್ತದೆ ಎಂಬ ಆತಂಕದಿಂದ ಬ್ಯಾಂಕ್‌ನಲ್ಲಿ ಸಾಲ ಮರುಪಾವತಿಗೆ ಮುಗಿಬಿದ್ದಿದ್ದಾರೆ ಎಂದರು.
ಬ್ಯಾಂಕ್ ಎಟಿಎಂ ಮೂರು ದಿನಗಳಿಂದ ಮುಚ್ಚಿದೆ. ಇಲ್ಲಿನ ಬ್ಯಾಂಕ್ ಹೆಚ್ಚಿನ ವ್ಯವಹಾರಕ್ಕೆ ಹೆಚ್ಚಿನ ದಟ್ಟಣೆ ಇದೆ. ಆದ್ದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಶಾಖೆ ಆರಂಭಿಸಲು ಜನಪ್ರತಿನಿಧಿಗಳು ಹಾಗೂ ಲೀಡ್ ಬ್ಯಾಂಕ್ ಮುಂದಾಗಬೇಕು. ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಅಗತ್ಯವಾದ ಸೇವೆಗಳು ದೊರೆಯುತ್ತಿಲ್ಲ. ಬ್ಯಾಂಕ್ ರೈತರನ್ನು ಬೆದರಿಸಿ ಸಾಲ ವಸೂಲಾತಿ ಮಾಡುತ್ತಿದೆ. ಬ್ಯಾಂಕ್ ನಿಂದ ಸೀಲ್ ಹಾಗೂ ಸಹಿಯಿಲ್ಲದೆ ಸಾವಿರಾರು ನೋಟಿಸ್‌ಗಳನ್ನು ನೀಡಲಾಗಿದೆ. ಪ್ರಸಕ್ತ ವರ್ಷದ ಬೆಳೆ ಇನ್ನೂ ರೈತರ ಕೈ ಸೇರಿಲ್ಲ. ಪರಿಸ್ಥಿತಿ ಹೀಗಿದ್ದರೂ ಬ್ಯಾಂಕ್ ನಿಂದ ನೋಟಿಸ್ ನೀಡಲಾಗಿದೆ. ರೈತರಿಗೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಸ್. ಎಂ. ಬೋರಯ್ಯ, ಸೋಮಶೇಖರ್, ಶಿವರಾಜ್, ಓಬಯ್ಯ, ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.