Advertisement

ಶಾಸಕರ ನಡೆಗೆ ರೈತಸಂಘದಿಂದ ಛೀ…ಥೂ…

09:03 AM Jul 16, 2019 | Team Udayavani |

ದಾವಣಗೆರೆ: ಮೂರು ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು ರಾಜ್ಯದ ಮತದಾರರ ಆಶಯಗಳನ್ನು ಧಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸಾರಿಗೆ ಬಸ್‌ ನಿಲ್ದಾಣದ ಎದುರು ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಎಲೆ-ಅಡಕೆ ಹಾಕಿಕೊಂಡು ಛೀ…ಥೂ… ಎಂದು ಉಗಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಡವರು, ರೈತರಿಗೆ ನ್ಯಾಯ ದೊರಕುತ್ತಿಲ್ಲ. ಅನೇಕರಿಗೆ ರೇಷನ್‌ ಕಾರ್ಡ್‌, ಮನೆ, ಜಾಗ ಇಲ್ಲ, ಮಹದಾಯಿ ಯೋಜನೆ ಜಾರಿಗೊಳಿಸಲಿಲ್ಲ, ಬೆಳೆಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ಬರದಿಂದ ತತ್ತರಿಸುತ್ತಿರುವ ಜನರಿಗೆ ಪರಿಹಾರ ಒದಗಿಸುತ್ತಿಲ್ಲ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ನೀಡುತ್ತಿಲ್ಲ, ಗೋಶಾಲೆ ಸರಿಯಾಗಿ ನಡೆಸುತ್ತಿಲ್ಲ, ಹೇಳಿದಂತೆ ರೈತರ ಸಾಲ ಮನ್ನಾ ಮಾಡಲಿಲ್ಲ…. ಯಾವ ಶಾಸಕರು ಸಹ ಇದ್ಯಾವ ಕಾರಣಕ್ಕೂ ರಾಜೀನಾಮೆ ನೀಡಿಲ್ಲ. ಬದಲಿಗೆ ತಮ್ಮ ಸ್ವಾರ್ಥಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಮಗೆ ಆ ಖಾತೆ ನೀಡಿಲ್ಲ. ಈ ಖಾತೆ ಕೊಟ್ಟಿಲ್ಲ ಎನ್ನುವ ಶಾಸಕರು ಕೃಷಿ ಇಲಾಖೆಯಲ್ಲಿ ಟೊಮೊಟೋ, ಬೆಂಡೆಕಾಯಿ, ಮೆಕ್ಕೆಜೋಳ, ರಾಗಿ, ಪಶುಪಾಲನೆ ಇಲಾಖೆಯಲ್ಲಿ ಕೋಳಿ, ಹಂದಿ, ನಾಯಿ, ಕತ್ತೆ, ಶಿಕ್ಷಣ ಇಲಾಖೆಯಲ್ಲಿ 1ನೇ ಕ್ಲಾಸ್‌, 2ನೇ ಕ್ಲಾಸ್‌… ಹೀಗೆ 224 ಜನ ಶಾಸಕರು ಮಂತ್ರಿಗಳಾಗಲಿ ಎಂದು ಲೇವಡಿ ಮಾಡಿದರು.

ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ, ಕೆಲಸ ಮಾಡಿಕೊಡುವಂತೆ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದರೆ ತಮ್ಮ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಅರಾಜಕತೆ ಉಂಟು ಮಾಡುತ್ತಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ, ವಿಧಾನಸಭೆ ವಿಸರ್ಜಿಸಿ, ಮತ್ತೆ ಚುನಾವಣೆ ನಡೆಸುವಂತಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ನೀರು-ಮೇವಿಲ್ಲದೆ ಜನ-ಜಾನುವಾರು ಪರಿತಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ವಿಧಾನ ಸಭಾ ಕಲಾಪದಲ್ಲಿ ಗಹನ ಚರ್ಚೆ ನಡೆಸಿ, ಪರಿಹಾರ, ಮಾರ್ಗೋಪಾಯ ಕಂಡುಕೊಳ್ಳಬೇಕಾದ ಶಾಸಕರು ಇಡೀ ರಾಜ್ಯದ ಜನತೆ ತಲೆತಗ್ಗಿಸುವಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ತದ್ವಿರುದ್ಧವಾಗಿ ನಡೆದುಕೊಂಡಿರುವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Advertisement

ಜಿಲ್ಲಾ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಹುಚ್ಚವ್ವನಹಳ್ಳಿ ಗಣೇಶ್‌, ಚಿನ್ನಸಮುದ್ರ ಶೇಖರನಾಯ್ಕ, ಮಲ್ಲಶೆಟ್ಟಿ ಹಳ್ಳಿ ಹನುಮೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next