ಕಾರಟಗಿ: ಫೆ.15ರಂದು ನಡೆದ ರೈತರ ಟ್ರ್ಯಾಕ್ಟರ್ ಮಾರ್ಚ್ ರ್ಯಾಲಿಯನ್ನು ಮಾಜಿ ಸಚಿವ ಶಿವರಾಜ ತಂಗಡಗಿ ರೈತರ ಪರವಾಗಿ ಮಾಡದೇ ವೈಯಕ್ತಿಕ ರ್ಯಾಲಿ ಮಾಡಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕಿನ ವಿವಿಧ ರೈತ ಮುಖಂಡರು, ಮಾಜಿ ಸಚಿವ ಶಿವರಾಜ ತಂಗಡಗಿ ನಿಜವಾಗಿ ರೈತಪರ ಕಾಳಜಿ ಹೊಂದಿದ್ದರೆ ರೈತ ಸಂಘದವರನ್ನು ಮತ್ತು ಭೂಮಿಯಲ್ಲಿ ಉಳುಮೆ ಮಾಡುವಂತ ರೈತರನ್ನು ಈ ರ್ಯಾಲಿಗೆ ಕರೆಯಬೇಕಾಗಿತ್ತು. ಆದರೆ ಇವರ ಉದ್ದೇಶವೇ ಬೇರೆಯಾಗಿತ್ತು. ಹಾಗಾಗಿ ಯಾವ ರೈತ ಸಂಘಕ್ಕೆ ಮತ್ತು ರೈತರ ಗಮನಕ್ಕೆ ತರದೇ ತಮ್ಮದೇ ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸಿ ರೈತರ ಹೆಸರಿನಲ್ಲಿ ಕಾಂಗ್ರೆಸ್ ರ್ಯಾಲಿ ಮಾಡಿದ್ದಾರೆ ಎಂದು ಆಪಾದಿಸಿದರು.
ರ್ಯಾಲಿಯಲ್ಲಿ ರಸಗೊಬ್ಬರ, ಪೆಟ್ರೋಲ್, ಡೀಸೆಲ್, ಸಿಲಿಂಡರ್, ದಿನನಿತ್ಯ ಅಗತ್ಯ ವಸ್ತುಗಳು ಬೆಲೆ ಗಗನಕ್ಕೆ ಏರುತ್ತಿರುವುದರ ಬಗ್ಗೆ ಪ್ರತಿಭಟನೆಯಲ್ಲಿ ಮಾತನಾಡಬೇಕಾಗಿತ್ತು. ಆದರೆ ಇವರು ರ್ಯಾಲಿಯುದ್ದಕ್ಕೂ ಬರುವ ಜಿಪಂ-ತಾಪಂ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕ್ಷೇತ್ರದ ಶಾಸಕರ ಬಗ್ಗೆ ವೈಯಕ್ತಿಕ ಟೀಕೆಗಳ ಮಾತುಗಳನ್ನಾಡಿದ್ದಾರೆ. ಮಾಜಿ ಸಚಿವ ಶಿವರಾಜ ತಂಗಡಗಿ ರೈತರ ಹೆಸರಿನ ರ್ಯಾಲಿಯಲ್ಲಿ ಈ ರೀತಿಯಾಗಿ ವೈಯಕ್ತಿಕವಾಗಿ ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಶಾಸಕ ಬಸವರಾಜ ದಢೇಸೂಗೂರು ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದಕ್ಕೆ ಬೇರೆ ಬೇರೆ ವೇದಿಕೆ ಬಳಸಿಕೊಳ್ಳಬೇಕಿತ್ತು. ಆದರೆ ರೈತರ ಹೆಸರಿನಲ್ಲಿ ರೈತರ ವೇದಿಕೆ ಮೂಲಕ ವೈಯಕ್ತಿಕ ಟೀಕೆ ಮಾಡಿರುವುದನ್ನು ರೈತರೆಲ್ಲ ಖಂಡಿಸುವುದಾಗಿ ತಿಳಿಸಿದರು.
ಈ ವೇಳೆ ತಾಲೂಕಿನ ವಿವಿಧ ರೈತ ಮುಖಂಡರಾದ ಎಚ್. ಮಲ್ಲನಗೌಡ, ಮುತ್ತಣ್ಣ ಸಿದ್ದಾಪುರ, ಗಂಗಣ್ಣ, ವಿರೂಪಾಕ್ಷಿ ಗುಂಡೂರು, ವಿನೋದ ಪಾಟೀಲ್ ಯರಡೋಣಾ, ಅಯ್ಯಪ್ಪ ಬಂಡಿ, ಶಿವಶರಣಪ್ಪ ಶಿವಪೂಜಿ, ವೀರೇಶ ಪನ್ನಾಪುರ ಇತರರಿದ್ದರು.