ಕೊಟ್ಟಿಗೆಹಾರ: ಮರ್ಕಲ್ ಗ್ರಾಮದ ರೈತರ ಕೃಷಿಭೂಮಿಗೆ ಹೋಗುವ ರಸ್ತೆ ನಿರ್ಮಿಸಲು ಜಾಗ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಬೇಸತ್ತ ಕೃಷಿಕರು ಕೃಷಿಭೂಮಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ.
ಮರ್ಕಲ್ ಗ್ರಾಮದ ಕುಂಬರಾಣಿಗೆ ಹೋಗುವ ರಸ್ತೆಯಲ್ಲಿ 6 ಕೃಷಿಕರಿಗೆಸೇರಿದ ಸುಮಾರು 12 ಎಕರೆ ಕೃಷಿ ಭೂಮಿ ಇದ್ದು ಈ ಕೃಷಿ ಭೂಮಿಗೆ ಹೋಗಲು ಮಣ್ಣಿನ ಕಾಲುದಾರಿ ಇದೆ. ವಾಹನ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ರಸ್ತೆ ಅಗಲೀಕರಣ ಮಾಡಿ ರಸ್ತೆಯನ್ನು ವಾಹನಸಂಚರಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದರು. ರಸ್ತೆ ಬದಿಯ ಅಗಲೀಕರಣಕ್ಕಾಗಿ ರಸ್ತೆ ಇಬ್ಬದಿಯ ತೋಟಗಳ ಮಾಲೀಕರು ಸ್ವಲ್ಪ ಜಾಗವನ್ನು ಬಿಡಬೇಕಾಗಿದ್ದು ಕೆಲ ರಸ್ತೆಬದಿಯ ತೋಟದ ಕೃಷಿಕರು ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟಿದ್ದರು.
ಆದರೆ ರಸ್ತೆ ಬದಿಯ ತೋಟವೊಂದರ ವ್ಯಕ್ತಿಯೊಬ್ಬರು ಜಾಗ ಬಿಡದ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಸಾಧ್ಯವಾಗದೆ 6 ಕೃಷಿಕರಿಗೆ ತೋಟಕ್ಕೆ ವಾಹನದಲ್ಲಿ ಹೋಗಲು ತೊಂದರೆಯಾಗಿತ್ತು. ಇದರಿಂದ ಬೇಸತ್ತು ಕೃಷಿಭೂಮಿಗೆ ಬೆಂಕಿ ಇಟ್ಟು ಕೃಷಿಕರು ಆಕ್ರೋಶ ವ್ಯಕ್ತ ಪಡಿಸಿದರು. ಮರ್ಕಲ್ ಗ್ರಾಮಸ್ಥ ಪ್ರವೀಣ್ ಮಾತನಾಡಿ, 1972ನೇ ಇಸವಿಯಿಂದ ಇಲ್ಲಿ ಕೃಷಿಭೂಮಿ ಹೊಂದಿದ್ದು ಕಾಲ್ನಡಿಗೆಯಲ್ಲೇ ತೋಟಕ್ಕೆ ಹೋಗುತ್ತಿದ್ದೇವೆ. ಕಾಫಿ ಕೊಯ್ಲು ಸಮಯದಲ್ಲಿ ಕೂಡ ತಲೆಯ ಮೇಲೆ ಕಾಫಿ ಮೂಟೆಗಳನ್ನು ಹೊತ್ತು ತರುತ್ತಿದ್ದೇವೆ. ವ್ಯಕ್ತಿಯೊಬ್ಬರು ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡದೆ ಇರುವುದರಿಂದ ರಸ್ತೆ ಅಗಲೀಕರಣ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೂಡ ಮನವಿ ಮಾಡಲಾಗಿದೆ ಎಂದರು.
ಘಟನಾ ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ತಹಶೀಲ್ದಾರ್ ರಮೇಶ್, ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಡದ ವ್ಯಕ್ತಿಯ ಬಳಿ ಮಾತುಕತೆ ನಡೆಸಿ ಜಾಗಬಿಟ್ಟು ಕೊಡಲು ಮನವೊಲಿಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಮೂಡಿಗೆರೆ ತಹಶೀಲ್ದಾರ್ ರಮೇಶ್, ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿಸ್ಥಳಕ್ಕೆ ಆಗಮಿಸಿದ್ದು ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಡದ ವ್ಯಕ್ತಿಯ ಬಳಿ ಮಾತನಾಡಿದ್ದು, ಜಾಗ ಬಿಟ್ಟು ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಮೂಡಿಗೆರೆ ವೃತ್ತ ನಿರೀಕ್ಷಕಜಗನ್ನಾಥ್, ಗ್ರಾಮಸ್ಥರಾದ ಹಾಲಪ್ಪ, ಕೆಂಚಯ್ಯ, ಸುಬ್ಬಣ್ಣ, ಲಕ್ಷ್ಮೀ, ಶಶಿಕಲಾ, ಚಂದ್ರಶೇಖರ್, ಸಾಗರ್, ನವೀನ್ ಹಾವಳಿ, ಪ್ರಭಾಕರ್ ಬಿನ್ನಡಿ, ಮನೋಹರ್, ಸೋಮೇಶ್, ಉಪೇಂದ್ರ ಮುಂತಾದವರು ಇದ್ದರು.