ಬೆಳಗಾವಿ: ಸಂಚಾರ ದಟ್ಟಣೆ ನಿಯಂತ್ರಿಸಲು ಕೇಂದ್ರ ಸರ್ಕಾರದಿಂದ ನಿರ್ಮಾಣವಾಗಲಿರುವ ರಿಂಗ್ ರಸ್ತೆಯ ಸರ್ವೇ ಹಾಗೂ ಮಾರ್ಕಿಂಗ್ ಕಾರ್ಯ ಪ್ರಗತಿಯಲ್ಲಿದ್ದು, ಇನ್ನು ನಾಲ್ಕೈದು ತಿಂಗಳು ಬಳಿಕ ರಿಂಗ್ ರಸ್ತೆ ಕಾಮಗಾರಿಗೆ ಹಸಿರು ನಿಶಾನೆ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಸದ್ಯ ನಡೆಯುತ್ತಿರುವ ಮಾರ್ಕಿಂಗ್ ಕಾರ್ಯಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಯ ನೀಲ ನಕ್ಷೆ ಸಿದ್ಧ: ಬೆಳಗಾವಿ ನಗರದಲ್ಲಿ ನಿತ್ಯ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಜತೆಗೆ ಗೋವಾ-ಬೆಂಗಳೂರು ಹಾಗೂ ಗೋವಾ-ಮುಂಬೈ ಮಧ್ಯೆ ಸಂಚರಿಸುವ ಭಾರಿ ವಾಹನಗಳು ಕೂಡ ನಗರ ಮೂಲಕವೇ ಸಂಚರಿಸುತ್ತವೆ. ಹೀಗಾಗಿ ನಗರದ ಎಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸ್ಥಳೀಯ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿರುವುದರಿಂದ ರಿಂಗ್ ರಸ್ತೆಯ ನೀಲ ನಕ್ಷೆ ತಯಾರಾಗಿದೆ.
427 ಹೆಕ್ಟೇರ್ ಜಮೀನು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು ರಿಂಗ್ ರಸ್ತೆ ನಿರ್ಮಿಸಲು ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿದೆ. ಸುಮಾರು 68.3 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ 427.17 ಹೆಕ್ಟೇರ್ ಜಮೀನು ಸ್ವಾಧೀನಪಡಿಸಿಕೊಂಡಿದೆ. ಕಳೆದ ಒಂದೂವರೆ ದಶಕದಿಂದ ಯೋಜನೆ ರೂಪದಲ್ಲಿಯೇ ಇದ್ದ ಇದಕ್ಕೆ ಈಗ ಹೊಸ ಕಳೆ ಬಂದಿದೆ. ನಗರದ ಹೊರ ವಲಯದಲ್ಲಿ ಕಾಮಗಾರಿಗೆ ಬಗ್ಗೆ ಅಧಿಕಾರಿಗಳು ಕೆಲಸ ನಡೆಸಿದ್ದಾರೆ.
Advertisement
ತಾಲೂಕಿನ ಸುಮಾರು 33 ಗ್ರಾಮಗಳ ಜಮೀನಿನಲ್ಲಿ ಹಾಯ್ದು ಹೋಗುವ ರಿಂಗ್ ರಸ್ತೆಗೆ ರೈತರು ವ್ಯಾಪಕವಾಗಿ ವಿರೋಧಿಸುತ್ತಿದ್ದು, ಈಗಾಗಲೇ ಅಲ್ಲಲ್ಲಿ ಸರ್ವೇ ಕಾರ್ಯ ನಡೆದಿದೆ. ಎಷ್ಟೇ ಅಡೆತಡೆಗಳು ಬಂದರೂ ಕಾಮಗಾರಿ ನಿಲ್ಲಿಸುವದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಸದ್ಯ ಕಾಮಗಾರಿಯ ನೀಲನಕ್ಷೆ ಪ್ರಾಥಮಿಕ ಹಂತದಲ್ಲಿದ್ದರೂ ಅದನ್ನು ಮುಂದುವರಿಸಲು ಅಧಿಕಾರಿಗಳು ವೇಗ ಪಡೆದುಕೊಂಡಿದ್ದಾರೆ.
Related Articles
Advertisement
427 ಹೆಕ್ಟೇರ್ ಪ್ರದೇಶದಲ್ಲಿ ಖಾಸಗಿ ಹಾಗೂ ಸರ್ಕಾರ ಜಮೀನಿನಲ್ಲಿ ರಿಂಗ್ ರಸ್ತೆ ನಿರ್ಮಾಣವಾಗಲಿದ್ದು, ಸುಮಾರು 68.03 ಕಿ.ಮೀ. ರಸ್ತೆ ಮಾರ್ಗ, 200 ಅಡಿ ಅಗಲವಾದ ರಸ್ತೆ ಇರಲಿದೆ. ಇದರಲ್ಲಿ 10 ಕಿ.ಮೀ. ಅರಣ್ಯ ಪ್ರದೇಶದ ಜಾಗವೂ ಸೇರಿಕೊಂಡಿದೆ. ರಸ್ತೆ ನಿರ್ಮಿಸಲು 3,000 ಕೋಟಿ ರೂ. ವೆಚ್ಚ ಆಗುವ ಸಾಧ್ಯತೆ ಇದೆ. ಇನ್ನು ನಾಲ್ಕೈದು ತಿಂಗಳಲ್ಲಿ ಈ ಸಣ್ಣ ಪುಟ್ಟ ಎಲ್ಲ ಪ್ರಾಥಮಿಕ ಹಂತದ ಕೆಲಸಗಳನ್ನು ಮುಗಿಸಿದ ಬಳಿಕ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಬರಡು ಭೂಮಿ ಆಯ್ಕೆಗೆ ಒತ್ತಾಯ: 2006ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಕುರಿತು ಚರ್ಚೆ ಆಗಿದ್ದಾಗಲೇ ರಿಂಗ್ ರಸ್ತೆ ಯೋಜನೆ ಮೊಳಕೆಯೊಡೆದಿದೆ. ಕೆಲವು ಗ್ರಾಮಗಳ ಹೆಸರು ಬರುತ್ತಿದ್ದಂತೆ ಆ ಭಾಗದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಹೊಲದಲ್ಲಿ ಈ ರಸ್ತೆ ಬೇಡ, ಬೇರೆ ಯಾವುದಾದರೂ ಪ್ರದೇಶಗಳಿಂದ ರಿಂಗ್ ರೋಡ್ ನಿರ್ಮಾಣ ಮಾಡಿ. ಫಲವತ್ತಾದ ಜಮೀನು ಕಸಿದುಕೊಂಡರೆ ಹೊಟ್ಟೆಗೆ ತಿನ್ನುವುದಾದರೂ ಏನು ಎಂಬುದು ರೈತರ ಪ್ರಶ್ನೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಸಮೀಕ್ಷೆ ಆರಂಭಿಸಿದಾಗ ರೈತರ ವಿರೋಧ ವ್ಯಾಪಕವಾಗಲು ಶುರುವಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಯವರು ಸಂಪರ್ಕ ರಸ್ತೆಗಳ ನಿರ್ಮಾಣದ ಕಡೆಗೆ ಗಮನ ಹರಿಸಿ ಸಂಚಾರ ದಟ್ಟಣೆ ಪ್ರಮಾಣ ಕಡಿಮೆಗೊಳಿಸಲು ಯತ್ನಿದ್ದರು. ಆದರೆ ಇದು ಕೈಗೂಡಲಿಲ್ಲ. ಸಂಸದ ಸುರೇಶ ಅಂಗಡಿ ಅವರು ರಿಂಗ್ ರಸ್ತೆ ನಿರ್ಮಾಣ ಬಗ್ಗೆ ಮುತುವರ್ಜಿ ವಹಿಸಿದರು. ರಿಂಗ್ ರಸ್ತೆ ನಿರ್ಮಾಣ ಉಸ್ತುವಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ತೆಗೆದುಕೊಂಡಿದ್ದರಿಂದ ಕೆಲಸದ ವೇಗ ಹೆಚ್ಚಿದೆ.
ಈಗಾಗಲೇ ನಕ್ಷೆ ತಯಾರಿಗೊಂಡಿರುವ ರಿಂಗ್ ರಸ್ತೆಯಲ್ಲಿ ನಗರ ಪೂರ್ವಭಾಗದ ರಾಷ್ಟ್ರೀಯ ಹೆದ್ದಾರಿ 4ರ (ಪುಣೆ) ಕಡೆಯಿಂದ ಕಾಕತಿ, ಹಿಂಡಾಲ್ಕೋ, ಕಣಬರಗಿ, ಕಲಕಾಂಬ, ಮುಚ್ಚಂಡಿ, ಮುತಗಾ, ಶಿಂದೊಳ್ಳಿ, ಮಾಸ್ತಮರರ್ಡಿ ಮೂಲಕ ಸುವರ್ಣ ವಿಧಾನಸೌಧದ ಬಳಿ ಧಾರವಾಡ ಹೆದ್ದಾರಿವರೆಗೆ ಸೇರುತ್ತದೆ. ಪಶ್ಚಿಮ ಭಾಗದ ರಾಷ್ಟ್ರೀಯ ಹೆದ್ದಾರಿ 4ರ(ಧಾರವಾಡ) ಕಡೆಯಿಂದ ಹಲಗಾ, ಮಚ್ಛೆ, ಪೀರನವಾಡಿ, ಬೆಳಗುಂದಿ, ಉಚಗಾವಿ, ಅಲತಗಾ, ಬೆನಕನಹಳ್ಳಿ ಮೂಲಕ ಕಾಕತಿಗೆ ಸೇರಲಿದೆ.
ರಿಂಗ್ ರಸ್ತೆ ಹಾಯ್ದು ಹೋಗುವ ಹಳ್ಳಿಗಳು:
ಭೂತರಾಮನಹಟ್ಟಿ, ಹಾಲಭಾಂವಿ, ಹೆಗ್ಗೇರ, ಬಂಬರಗೆ, ಹಂದಿಗನೂರ, ಮಹಲೇನಹಟ್ಟಿ, ಚೆಲುವಿನಹಟ್ಟಿ, ಕೆದನೂರ, ಮನ್ನಿಕೇರಿ, ಅಗಸಗೆ, ಕಡೋಲಿ, ಜಾಫರವಾಡಿ, ದೇವಗಿರಿ, ಅಲತಗೆ, ಗೌಂಡವಾಡ, ಹೊನಗಾ, ಬೆಂಡಿ, ಸೋನಟ್ಟಿ, ಧರನಟ್ಟಿ, ಕೆಂಚನಟ್ಟಿ, ಹುದಲಿ, ಕಬಲಾಪುರ, ಭರಮ್ಯಾನಹಟ್ಟಿ, ಕರವಿನಕುಂಪಿ, ಕಲಖಾಂಬ, ಮುಚ್ಚಂಡಿ, ಅಷ್ಟೆ, ಚಂದಗಡ, ಬೆಕ್ಕಿನಕೇರಿ, ಅತ್ತಿವಾಡ, ಗೋಜಗೆ, ಮನ್ನೂರ, ಅಂಬೇವಾಡಿ, ಸುಳಗೆ, ಕಲ್ಲೇಹೊಳ, ಉಚಗಾಂವ, ಬಸುರ್ತೆ, ತುರಮುರೆ, ಬಾಚಿ, ಕುದ್ರೇಮನಿ, ಬೆಳಗುಂದಿ, ಬೋಕನೂರ, ಸಾವಗಾಂವ, ಮಂಡೋಳಿ, ಬಿಜಗರ್ಣಿ, ಕವಳೇವಾಡಿ, ರಾಕಸಕೊಪ್ಪ, ಕಿಣಯೇ, ಕರ್ಲೇ, ನಾವಗೆ, ಜಾನೇವಾಡಿ, ಕುಟ್ಟಲವಾಡಿ, ಸಂತಿಬಸ್ತವಾಡ, ಬಾಹದರವಾಡಿ, ರಣಕುಂಡೆ, ವಾಘವಡೆ, ದೇಸೂರ, ಸುಲಗೆ, ರಾಜಹಂಸಗಡ, ನಂದೀಹಳ್ಳಿ, ನಾಗೇನಹಟ್ಟಿ, ಜಾಡ ಶಾಹಪುರ, ದಸಾಮಣೆ, ಬೆಳಗಾವಿ, ಯರಮಾಳೆ, ಖನಗಾಂವ ಕೆ.ಎಚ್, ಖನಗಾಂವ ಬಿ.ಕೆ., ಬಾಳೇಕುಂದ್ರಿ ಬಿ.ಕೆ., ಬಾಳೇಕುಂದ್ರಿ ಕೆ.ಎಚ್., ನಿಲಜಿ, ಶಿಂಧೋಳ್ಳಿ, ಬಸರೀಕಟ್ಟಿ, ಮಾವಿನಕಟ್ಟಿ, ಚಂದನಹೊಸೂರ, ತಾರಿಹಾಳ, ಮಾಸ್ತಮರ್ಡಿ, ಹಲಗಾ, ಬಸ್ತವಾಡ, ಶಗನಮಟ್ಟಿ, ಡಸಕೊಪ್ಪ, ಕಮಕಾರಟ್ಟಿ, ಕೋಳಿಕೊಪ್ಪ, ಕಾಕತಿ, ಸಾಂಬ್ರಾ, ಮುತಗಾ, ಬೆನಕನಹಳ್ಳಿ, ಕಾಕತಿ, ಮಚ್ಚೆ, ಪೀರನವಾಡಿ, ಬೆಳಗಾವಿ, ಜುಮನಾಳ, ಶಿಂಧೋಳಿ, ಗೋಕುಲನಗರ, ತಮ್ಮನಾಯಕನಹಟ್ಟಿ, ಯಳ್ಳೂರ, ಕಣಬರಗಿಯಲ್ಲಿ ರಿಂಗ್ ರಸ್ತೆ ಹಾಯ್ದು ಹೋಗಲಿದೆ.
ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ:
ರಿಂಗ್ ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರುವ ಮಾರ್ಕಿಂಗ್ ಕೆಲಸದ ವೇಳೆ ತಾಲೂಕಿನ ಸಂತಿಬಸ್ತವಾಡ ಹಾಗೂ ವಾಘವಡೆ ಗ್ರಾಮದಲ್ಲಿ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳನ್ನು ವಾಪಸ್ ಕಳುಹಿಸಲಾಗಿದೆ. ಮಾರ್ಕಿಂಗ್ ಕಾರ್ಯಕ್ಕೆ ತೆರಳುತ್ತಿರುವ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ರೈತರು, ಯಾವುದೇ ಕಾರಣಕ್ಕೂ ಫಲವತ್ತಾದ ಜಮೀನು ಕಬಳಿಸಬಾರದು ಎಂದು ಆಗ್ರಹಿಸಿದರು. ರೈತರ ವಿರೋಧ ತೀವ್ರಗೊಳ್ಳುತ್ತಿದ್ದಂತೆ ಮಾರ್ಕಿಂಗ್ ಮಾಡಲು ಬಂದವರು ವಾಪಸ್ ಹೋಗಿದ್ದಾರೆ.
ಹೈಕೋರ್ಟ್ ಮೊರೆ ಹೋಗಲು ರೈತರ ನಿರ್ಧಾರ:
ರಿಂಗ್ ರಸ್ತೆಯನ್ನು ವಿರೋಧಿಸಲು ಎಲ್ಲ ಗ್ರಾಮಗಳಲ್ಲಿಯೂ ವಿರೋಧಿಸಬೇಕು ಹಾಗೂ ಪ್ರತಿ ಗ್ರಾಮದಿಂದ ಇಬ್ಬರು ರೈತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಶುಕ್ರವಾರ ನಡೆದ ಸಭೆಯಲ್ಲಿ ರೈತರು ತೀರ್ಮಾನಿಸಿದ್ದಾರೆ. ಯಾವುದೇ ಗ್ರಾಮಕ್ಕೂ ಅಧಿಕಾರಿ ವರ್ಗದವರು ಬಂದಿ ಮಾರ್ಕಿಂಗ್ ಮಾಡಲು ಪ್ರಯತ್ನಿಸಿದರೂ ಎಲ್ಲರೂ ತೀವ್ರವಾಗಿ ವಿರೋಧಿಸಬೇಕು ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
•ಭೈರೋಬಾ ಕಾಂಬಳೆ