ದಾವಣಗೆರೆ: ಉತ್ತರ ಪ್ರದೇಶದ ಲಖೀಂಪುರ ಕೇರಿಯಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ, ಸಿಪಿಐ, ಎಐಕೆಎಸ್, ಪ್ರಾಂತ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ ಒಳಗೊಂಡಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ಅತ್ಯಂತ ಮಾರಕವಾಗಿವೆ. ಮುಂದಿನ ದಿನಗಳಲ್ಲಿ ಕೃಷಿಕರು ಬೀದಿಪಾಲಾಗಲಿದ್ದಾರೆ. ದೇಶದ ಕೃಷಿ ಕ್ಷೇತ್ರವೇ ಸರ್ವನಾಶವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳು 11 ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿವೆ. 600ಕ್ಕೂ ಹೆಚ್ಚು ಅನ್ನದಾತರು ಹುತಾತ್ಮರಾಗಿದ್ದಾರೆ. ಆದರೂ ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸುವತ್ತ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು
ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ಉತ್ತರ ಪ್ರದೇಶದ ಲಖೀಂಪುರ ಕೇರಿಯಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರದ ಗೃಹ ಇಲಾಖೆ ರಾಜ್ಯ ಸಚಿವರ ಪುತ್ರ ಕಾರು ಹರಿಸಿ, ನಾಲ್ವರು ರೈತರನ್ನು ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ರೈತರ ಹತ್ಯೆ ಮಾಡಿರುವ ಸಚಿವನ ಪುತ್ರನೊಂದಿಗೆ ಗೃಹ ಸಚಿವ ಅಮಿತ್ ಶಾ ಗಂಟೆಗಟ್ಟಲೆ ಚರ್ಚೆ ಮಾಡಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು. ಪುತ್ರನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಮೋದಿ ಅಧಿಕಾರಕ್ಕೆ ಬರುವ ಮುನ್ನ ಅಚ್ಚೇ ದಿನ್ ತರಲಾಗುವುದು ಎಂದು ಹೇಳಿದ್ದರು. ಏಳು ವರ್ಷವಾದರೂ ಅಚ್ಚೇ ದಿನ್ ಬಂದಿಲ್ಲ. ಬದಲಿಗೆ ಪೆಟ್ರೋಲ್, ಡೀಸೆಲ್, ಆಡುಗೆ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಅಚ್ಚೇ ದಿನ್ ಬದಲಿಗೆ ಜನರಿಗೆ ಕಚ್ಚೇ ದಿನ್ ಬಂದಿವೆ. ಜನ, ಕಾರ್ಮಿಕ, ದೇಶ ವಿರೋಧಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರವನ್ನ ಕಿತ್ತೂಗೆಯಬೇಕು ಎಂದರು.
ಜಯದೇವ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾವಚಿತ್ರ ಪ್ರದರ್ಶನ ಮತ್ತು ದಹಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಈ ವಿಚಾರವಾಗಿ ಪ್ರತಿಭಟನಾಕಾರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ವಾಗ್ವಾದ, ತಳ್ಳಾಟ, ನೂಕಾಟ ನಡೆಯಿತು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಯತ್ನವೂ ನಡೆಯಿತು. ಪ್ರಧಾನಿ ಮೋದಿ, ಅಮಿತ್ ಶಾ ಭಾವಚಿತ್ರಗಳೊಂದಿಗೆ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಲೂ ಸಹ ಪೊಲೀಸರು ಅವಕಾಶ ನೀಡಲಿಲ್ಲ. ಕೊನೆಗೂ ಭಾವಚಿತ್ರಗಳನ್ನು ಪಡೆದುಕೊಂಡ ಪೊಲೀಸರು ಗಾಂಧಿ ವೃತ್ತದವರೆಗೆ ಮೆರವಣಿಗೆಗೆ ಅವಕಾಶ ನೀಡಿದರು. ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲು ಅವಕಾಶ ನೀಡಲಾಯಿತು.
ಹೋರಾಟ ಹತ್ತಿಕ್ಕಲು ಹುನ್ನಾರ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟವನ್ನು ಸರ್ಕಾರಗಳು ಪೊಲೀಸರ ಮೂಲಕ ಹತ್ತಿಕ್ಕುತ್ತಿವೆ. ಬಿಜೆಪಿಯವರು ನಡೆಸುವ ಬೈಕ್ ರ್ಯಾಲಿ, ರಾಜಕೀಯ ಸಮಾವೇಶಗಳಿಗೆ ಇಲ್ಲದ ಕೊರೊನಾ ಮಾರ್ಗಸೂಚಿಗಳನ್ನು ರೈತರ ಹೋರಾಟಕ್ಕೆ ವಿಧಿಸಲಾಗುತ್ತಿದೆ. ಬಿಜೆಪಿಯವರು ಏನೇ ಮಾಡಿದರೂ ಕೊರೊನಾ ಬರುವುದಿಲ್ಲ. ರೈತರು, ಕಾರ್ಮಿಕರು ಹೋರಾಟ ಮಾಡಿದರೆ ಕೊರೊನಾ ಬರುತ್ತದೆಯೇ ಎಂದು ಪ್ರಶ್ನಿಸುವಂತಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಹೋರಾಟವನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿದಂತೆ. ಫ್ಯಾಸಿಸ್ಟ್ ನೀತಿ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.