ಬೀದರ: ಪಶುಗಳ ಸಾಕಾಣಿಕೆ ಕುರಿತು ರೈತರಿಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ನೀಡಬೇಕು. ತರಬೇತಿದಾರರು ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರೈತರು ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜಿಲ್ಲೆ ವಿವಿಧೆಡೆ ಕುರಿಗಳು ಮೃತಪಟ್ಟಿವೆ. ಯಾವ ಕಾರಣಕ್ಕೆ ಅವು ಮೃತಪಟ್ಟಿವೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಒಂದೇ ಶೆಡ್ಡಿನಲ್ಲಿ ಅವುಗಳನ್ನು ಇರಿಸಿದ್ದೇ ಅವುಗಳ ಸಾವಿಗೆ ಕಾರಣ ಎಂದು ತಿಳಿಸಿದರು.
ನಂತರ ಸಚಿವರು, ಕುರಿ ಸಾಕಾಣಿಕೆ ಮಾಡುವ ರೈತರಿಗೆ ಸೂಕ್ತ ತರಬೇತಿ ನೀಡಿಲ್ಲವೆ ಎಂದು ಪ್ರಶ್ನಿಸಿದರು. ತರಬೇತಿದಾರರು ಸೂಕ್ತ ತರಬೇತಿ ನೀಡದ ಕಾರಣ ಅವು ಮೃತಪಟ್ಟಿವೆ. ಒಂದೇ ಶೆಡ್ಡಿನಲ್ಲಿ ಜಾನುವಾರುಗಳನ್ನು ಇರಿಸಿದರೆ ಅವುಗಳಿಗೆ ರೋಗ ಬರುತ್ತದೆ. ಪ್ರತಿದಿನ ಹೊರಗಿನ ವಾತಾಣದಲ್ಲಿ ಅಲೆದಾಡಬೇಕು ಎಂಬುದು ಗೊತ್ತಿಲ್ಲವೆ ಎಂದು ಕಿಡಿಕಾರಿದ ಸಚಿವರು, ತರಬೇತಿ ನೀಡುವ ಅಧಿಕಾರಿಗೆ ತರಬೇತಿ ನೀಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದರ ಜಿಲ್ಲೆಯ ಒಂದು ಲಕ್ಷ ಪಶುಗಳಿಗೆ ಪಶು ಇಲಾಖೆಯಿಂದ ಚಿಪ್ ಅಳವಡಿಸುವ ಗುರಿ ಇದ್ದು, ಸದ್ಯ ಈವರೆಗೆ 50 ಸಾವಿರ ಜಾನುವಾರುಗಳಿಗೆ ಚಿಪ್ ಅಳವಡಿಸುವ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಕುರಿತು ಸಚಿವರು, ಚಿಪ್ ಅಳವಡಿಸುವ ಕಾರ್ಯಕ್ಕೆ ಅಧಿಕಾರಿಗಳು ಹೆಚ್ಚು ಮಹತ್ವ ನೀಡಬೇಕು ಎಂದು ಸೂಚಿಸಿದರು. ಅಲ್ಲದೆ, ಜಿಲ್ಲೆಯ ವಿವಿಧೆಡೆ ನಿರ್ಮಾಣಗೊಳ್ಳುತ್ತಿರುವ ವಿವಿಧ ಕಟ್ಟಡ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಅವರು, ಯಾವ ಕಾರಣಕ್ಕೆ ಕಟ್ಟಡ
ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿವೆ.
ಯಾರು ಗುತ್ತೆಗೆ ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಬಹುತೇಕ ಕಟ್ಟಡ ಕಾಮಗಾರಿಗಳು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದ್ದು, ಅಧಿಕಾರಿಗಳು ಸೂಕ್ತ ಸಮಯಕ್ಕೆ ಕೆಲಸ ನಿರ್ವಹಿಸುತ್ತಿಲ್ಲ ಎಂದು ಮಾಹಿತಿ ನೀಡಿದರು. ಸೂಕ್ತ ಸಮಯಕ್ಕೆ ಕೆಲಸ ನಿರ್ವಹಿಸದ ಸಂಸ್ಥೆಗೆ ಯಾಕೆ ಗುತ್ತಿಗೆ ನೀಡುತ್ತಾರೊ ಗೊತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಗತ್ಯವಿದ್ದರೆ ಗೋಶಾಲೆಗಳನ್ನು ತೆರೆಯಲು ಕ್ರಮ ವಹಿಸಬೇಕು. ಗೋಶಾಲೆ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕಾಲು ಮತ್ತು ಬಾಯಿ ರೋಗ ನಿವಾರಣೆ ಲಸಿಕಾ ಕಾರ್ಯಕ್ರಮದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಜಿಲ್ಲೆಯ ಎಲ್ಲ ಹಸುಗಳಿಗೆ ಕಡ್ಡಾಯ ಲಸಿಕೆ ಹಾಕಿಸಲು ಕ್ರಮ ವಹಿಸಬೇಕು. ಯಾವೊಂದು ಹಸು ಕೂಡ ಲಸಿಕೆಯಿಂದ ವಂಚಿತವಾಗಬಾರದು ಎಂದು ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ| ರವೀಂದ್ರ ಭೂರೆ, ಡಾ| ಗೌತಮ ಅರಳಿ, ಸಿದ್ದಪ್ಪ ಪಾಟೀಲ, ಚಂದ್ರಶೇಖರ ಪಾಟೀಲ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಡಾ| ಶೇಷಪ್ಪ ಹಾಗೂ ಇತರರು ಇದ್ದರು.