Advertisement

ಪ್ರತಿ 3 ತಿಂಗಳಿಗೊಮ್ಮೆ ರೈತರ ಸಭೆ: ಡಿಸಿ

11:21 AM Dec 10, 2019 | Suhan S |

ದಾವಣಗೆರೆ: ರೈತರ ಕುಂದುಕೊರತೆ ಚರ್ಚಿಸಲು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದ್ದಾರೆ.

Advertisement

ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಗದಿತ ಅವಧಿಯಲ್ಲಿ ರೈತರ ಸಭೆ ನಡೆಸುವುದರಿಂದ ನಮಗೆ ತಿಳಿಯದ ಅನೇಕ ವಿಷಯತಿಳಿಯುವ ಜೊತೆಗೆ ಸ್ಪಂದಿಸಲು ಅವಕಾಶ ಆಗುತ್ತದೆ. ಹಾಗಾಗಿ ಇನ್ನು ಮುಂದೆ ಪ್ರತಿ 3 ತಿಂಗಳಿಗೊಮ್ಮೆ ರೈತರ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಮಾತನಾಡಿ, ಜಿಲ್ಲಾ ಪಂಚಾಯತ್‌ ಸಣ್ಣ ಮತ್ತು ಬೃಹತ್‌ ನೀರಾವರಿ ಇಲಾಖೆಗಳ ಸಣ್ಣ ಮತ್ತು ದೊಡ್ಡ ಕೆರೆಗಳ ಒತ್ತುವರಿಯಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಸ್ವಾಧೀನವಾದ ಜಮೀನುಗಳು ಮರು ಮಾರಾಟವಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಾನೂನು ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿವೆ ಎಂದು ದೂರಿದರು.

ಈಗಾಗಲೇ ಅನೇಕ ಕೆರೆಗಳು ಮುಚ್ಚಿ ಹೋಗಿವೆ. ಹಲವಾರು ಕೆರೆಯಲ್ಲಿ ಹೂಳು ತುಂಬಿದೆ, ದುರಸ್ತಿ ಅಗತ್ಯವಿದೆ. ದೇವರ ಬೆಳಕೆರೆ ಹಾಗೂ ಸೂಳೆಕೆರೆಗಳೂ ಸೇರಿದಂತೆ ಸಮಗ್ರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಪಂಚಾಯತಿ ಮತ್ತು ನೀರಾವರಿ ಇಲಾಖಾ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳು ಬರುತ್ತವೆ. ಅಗತ್ಯವಿರುವ ರಿಪೇರಿ, ಇತರೆ ಕಾಮಗಾರಿ, ಕಾನೂನು ತೊಡಕುಗಳಿದ್ದರೆ ಆ ಕುರಿತ ಮಾಹಿತಿ ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ದೇವರ ಬೆಳಕೆರೆಯ ಅಂತಿಮ ಅಧಿಸೂಚನೆಯಲ್ಲಿ ಮೂಲ ಮಾಲೀಕರ ಹೆಸರು ಇದೆಯೋ ಅಥವಾ ಬದಲಾವಣೆ ಆಗಿದೆಯೋ ಎಂಬುದನ್ನು ನೋಡಬೇಕು. ಸರ್ವೇ ಕಾರ್ಯಕ್ಕೆ ತಂಡ ರಚಿಸಲು ಸೂಚನೆ ನೀಡಿದರು. ರೈತರ ಖಾತೆಗೆ ಪಾವತಿಯಾಗುವ ಹಾಲಿನ ಮೊತ್ತವನ್ನು ಬ್ಯಾಂಕ್‌ನವರು ಸುಸ್ತಿ ಪಾವತಿಗೆ ಕಟಾವಣೆ ಮಾಡಿಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಸಾಲದ ಮರುಪಾವತಿಯ ನೀತಿಯೂ ದ್ವಂದ್ವಮಯವಾಗಿದೆ ಎಂದು ಬಲ್ಲೂರು ರವಿಕುಮಾರ್‌ ಹೇಳಿದರು.

Advertisement

ಡಿಬಿಟಿ ಮೂಲಕ ಬಿಡುಗಡೆಯಾದ ಮೊತ್ತವನ್ನು ಕಟಾವಣೆ ಮಾಡುವುದಿಲ್ಲ. ಬದಲಾಗಿ ಸ್ವಂತವಾಗಿ ಗಳಿಸಿದ ಮೊತ್ತದಲ್ಲಿ ಸುಸ್ತಿ ಮೊತ್ತವನ್ನು ಕಟಾವಣೆ ಮಾಡುವ ಅಧಿಕಾರ ಇರುತ್ತದೆ.ಕೇಂದ್ರ ಸರ್ಕಾರದ ನಿಯಮಗಳನ್ವಯವೇ ಶೈಕ್ಷಣಿಕ ಸಾಲವನ್ನು ಕಟಾವಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ನ ಸುಶ್ರುತ್‌ ತಿಳಿಸಿದರು. ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ಮೇಲ್ಮನವಿಗಳ ವಿಚಾರಣೆ ಮತ್ತು ವಿಲೇವಾರಿ ಅತಿ ವಿಳಂಬವಾಗುತ್ತಿದೆ. ಮೆಕ್ಕೆಜೋಳ, ಭತ್ತವನ್ನು ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಮಾಡದಂತೆ ಜಿಲ್ಲಾ ಧಿಕಾರಿಗಳು ನಿರ್ದೇಶಿಸಬೇಕು. ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿದರೂ ಅಧಿಕಾರಿ, ಸಿಬ್ಬಂದಿ ಸಂಖ್ಯೆ ಹೆಚ್ಚಿಸದ ಕಾರಣ ಜನಸಂದಣಿ ಹೆಚ್ಚಿದ್ದು, ಸಕಾಲದಲ್ಲಿ ವೈದ್ಯಕೀಯ ಸೇವೆ ಲಭ್ಯವಾಗುತ್ತಿಲ್ಲ. ಹಾಗಾಗಿ ಎರವಲು ಸಿಬ್ಬಂದಿ ವ್ಯವಸ್ಥೆ ಮಾಡಬೇಕು ಎಂದು ರೈತರು ಮನವಿ ಮಾಡಿದರು.

ಭೂಮಾಪನ ಇಲಾಖೆಯವರು ಆದಷ್ಟು ಶೀಘ್ರವಾಗಿ ಮೇಲ್ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬೆಳೆ ದರ ನಿಗದಿ ಕುರಿತು ಚರ್ಚಿಸಲು ಎಪಿಎಂಸಿ ವತಿಯಿಂದ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಜಿಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ಜಿ. ನಜ್ಮಾ, ಉಪ ವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌, ನಗರಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next