ಶೃಂಗೇರಿ/ಬೆಳ್ತಂಗಡಿ: ರಾಜ್ಯದ ಸಾವಿರಾರು ರೈತರು ಹೊಸ ಸರ್ಕಾರ ಬಂದ ತಕ್ಷಣ ಸಾಲ ಮನ್ನಾ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದರು. ಆದರೆ ನಿಯೋಜಿತ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ರೈತರು ನಿರಾಶರಾಗುವಂತೆ ಮಾಡಿದೆ.
ಧರ್ಮಸ್ಥಳ ಮತ್ತು ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ‘ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಬೇಡ. ಸಂಪೂರ್ಣ ಬಹುಮತ ಜೆಡಿಎಸ್‌ಗೆ ಬಂದಿದ್ದರೆ ಸಾಲ ಮನ್ನಾ ಮಾಡುತ್ತಿದ್ದೆ. ಆದರೆ ಈಗ ಸಮ್ಮಿಶ್ರ ಸರ್ಕಾರ ಬಂದಿರುವುದರಿಂದ ಕಾಂಗ್ರೆಸ್‌ನವರನ್ನು ಈ ಬಗ್ಗೆ ಕೇಳಬೇಕಿದೆ’ ಎಂದಿದ್ದಾರೆ.
‘ವಿಶ್ವಾಸಮತ ಯಾಚನೆಯಾದ ಕೂಡಲೆ ರೈತನ ಉಳಿವಿಗಾಗಿ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ,ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ ಅಂಶಗಳನ್ನು ಜಾರಿಗೊಳಿಸುತ್ತೇನೆ’ ಎಂದಿದ್ದಾರೆ.
‘ನನಗೆ ಬಹುಮತ ಕೊಟ್ಟು ಅಧಿಕಾರ ಕೊಟ್ಟರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆ. ಜನರಿಗೆ ಸಾಲ ಮನ್ನಾ ಬೇಕಿರಲಿಲ್ಲ, ಹಾಗಾಗಿ ನಿಮ್ಮನ್ನು ತಿರಸ್ಕರಿಸಿದ್ದಾರೆ’ ಎಂದು ಕೆಲವರು ಕೇವಲವಾಗಿ ಮಾತನಾಡುತ್ತಿದ್ದಾರೆ’ ಎಂದರು.
ಜೆಡಿಎಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ರೈತರು ಮಾಡಿರುವ ಎಲ್ಲಾ ಬಗೆಯ ಕೃಷಿ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡುವ ಬಗ್ಗೆ ಘೋಷಿಸಲಾಗಿತ್ತು. 53, 000 ಕೋಟಿ ರೂ ಸಾಲ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು.
ಇದೀಗ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಕುರಿತು ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾತುರದಿಂದ ಕಾಯಲಾಗುತ್ತಿದೆ.