ಕೆಜಿಎಫ್: ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ರೈತರ ಮನೆ ಬಾಗಿಲಲ್ಲೇ 2 ಕೋಟಿ ರೂ.ಗಳ ಕೆಸಿಸಿ ಸಾಲವನ್ನು ಶಾಸಕಿ ರೂಪಕಲಾ ಶಶಿಧರ್ ವಿತರಿಸಿದರು.
ಬೇತಮಂಗಲ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಸ್ತ್ರೀ ಶಕ್ತಿ ಗುಂಪುಗಳಿಗೆ ಮತ್ತು ಕೃಷಿಯನ್ನೇ ನಂಬಿರುವ ತಾಲೂಕಿನ ಗುಟ್ಟಹಳ್ಳಿ, ದೊಡ್ಡಕಾರಿ, ನತ್ತ, ಬಡಮಾಕನಹಳ್ಳಿ, ಕಂಗಾನ ಲ್ಲೂರು, ಜಯಮಂಗಲ ಮದ್ದನಾಯಕನಹಳ್ಳಿ, ಗೆನ್ನೇರಹಳ್ಳಿ ಕಳ್ಳಿಕುಪ್ಪ, ಪುತರಾಜನಹಳ್ಳಿ ಬೇತಮಂಗಲ ಸೇರಿದಂತೆ 14 ಗ್ರಾಮಗಳ ರೈತರ ಮನೆ ಬಾಗಿಲಿಗೆ ಹೋಗಿ ಎಟಿಎಂ ಕಾರ್ಡ್ ಮೂಲಕ ಸಾಲವನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕಿ ರೂಪಕಲಾ, ಕ್ಷೇತ್ರದ ಹೆಣ್ಣು ಮಕ್ಕಳು ಡಿಸಿಸಿ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡು ತ್ತಿದ್ದು, ಪಡೆದ ಸಾಲದ ಹಣದಲ್ಲಿ ಕುಟಂಬದ ಅರ್ಥಿಕ ಬಲವರ್ಧನೆಗೆ ಬಳಿಸಿಕೊಂಡು ಗೌರವಯುತ ಜೀವನ ನಡೆಸುತ್ತಿದ್ದಾರೆ ಎಂದರು. ಕಳೆದ ನಾಲ್ಕು ಬಾರಿ ಸಾಲವನ್ನು ನೀಡಿದ್ದೇವೆ. ಹೆಣ್ಣುಮಕ್ಕಳು ಸಾಲದ ಹಣದಿಂದ ಕುರಿ, ಹಸು, ಮೇಕೆ, ತರಕಾರಿ ಮಾರಾಟ, ಹೊಲಿಗೆ ಯಂತ್ರ ಸೇರಿದಂತೆ ಹಲವು ಗುಡಿ ಕೈಗಾರಿಕೆಗಳಲ್ಲಿ ಈ ಹಣ ಹೂಡಿ ಜೀವನ ಮಟ್ಟ ಸುಧಾರಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ವಿರೋಧ ಪಕ್ಷದ ಮುಖಂಡರು ಸುಖಾ ಸಮ್ಮನೆ ಡಿಸಿಸಿ ಬ್ಯಾಂಕ್‌ನ ಸಾಲವನ್ನು ನೀಡುವುದೇ ಶಾಸಕರ ಕೆಲಸವಾಗಿದೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಬೇತಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ 20 ಕೋಟಿ ರೂ.ಗಳ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ ಬಹುತೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ದಾಖಲೆ ಸಮೇತ ನೀಡುವುದಾಗಿ ವಿರೋಧ ಪಕ್ಷದವರ ಆರೋಪಕ್ಕೆ ತಿರುಗೇಟು ನೀಡಿದರು.
40 ಸಾವಿರ ಹೆಣ್ಣು ಮಕ್ಕಳಿಗೆ ಸಾಲ: ಕೆಜಿಎಫ್ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್‌ನಿಂದ 40 ಸಾವಿರ ಹೆಣ್ಣು ಮಕ್ಕಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ಸಮಾಜದ ಮುಖ್ಯವಾಹಿನಿಗೆ ಹೆಣ್ಣುಮಕ್ಕಳನ್ನು ಕರೆ ತರುವ ಕೆಲಸ ಮಾಡಿದ್ದು, ನನ್ನ ಕ್ಷೇತ್ರದ ತಾಯಂದಿರು ಬದುಕು ಕಟ್ಟಿಕೊಳ್ಳಲು ಸಾಲ ಸೌಲಭ್ಯ ವಿತರಿಸಿದ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಧನ್ಯವಾದ ತಿಳಿಸುವುದಾಗಿ ನುಡಿದರು. ಶಾಸಕರ ಬೆಂಬಲಿಸಿ ಮುಖಂಡರಾದ ಅ.ಮು. ಲಕ್ಷ್ಮೀನಾರಾಯಣ ಮತ್ತಿತರರು ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕರು ಕ್ಷೇತ್ರದಲ್ಲಿ ಬಡ ಹೆಣ್ಣು ಮಕ್ಕಳ ಸೇವೆ ಮಾಡಲು ಶಾಸಕರ ಕೈಯನ್ನು ಬಲಪಡಿಸಬೇಕು ಎಂದರು.
ಈ ವೇಳೆ ಮುಖಂಡ ಅ.ಮು. ಲಕ್ಷ್ಮೀನಾರಾಯಣ್, ಬೇತಮಂಗಲ ವ್ಯವಾಸಯ ಸೇವಾ ಸಹಕಾರ ಸಂಘ ಅಧ್ಯಕ್ಷ ಪ್ರಸನ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣರೆಡ್ಡಿ ಸುರೇಂದ್ರಗೌಡ, ವಕೀಲರಾದ ಪದ್ಮನಾಭರೆಡ್ಡಿ, ಓಬಿಸಿ ಮುನಿಸ್ವಾಮಿ ಇತರರು ಹಾಜರಿದ್ದರು.