Advertisement

ಬೇಸಗೆಯೊಂದಿಗೆ ಕರಟಿತು ಕೃಷಿಕರ ಬದುಕು!

05:22 PM Apr 05, 2019 | pallavi |
ಸವಣೂರು : ಕಳೆದ ಕೆಲ ದಿನಗ ಳಿಂದ ಬೆಂಕಿಯಂತೆ ಸುಡುತ್ತಿರುವ ಬಿಸಿಲಿನ ತಾಪ ತಡೆಯಲಾಗದೆ ಅಡಿಕೆ ಮರಗಳು ಕರಟಿ ಹೋಗಲಾರಂಭಿಸಿವೆ. ಇದರೊಂದಿಗೆ ಕೃಷಿಕರ ಬದುಕಿನ ಧಾರೆಯೂ ಚಿಂತಾಜನಕ ಸ್ಥಿತಿಯಲ್ಲಿದೆ! ಮಳೆಗಾಲದಲ್ಲಿ ಎಡಬಿಡದೆ ಸುರಿದ ವಿಪರೀತ ಮಳೆಯಿಂದಾಗಿ ಅಡಿಕೆ ಫಸಲಿಗೆ ಕೊಳೆರೋಗ ಬಾಧಿಸಿ ಕಂಗೆಟ್ಟಿದ್ದ ಕೃಷಿಕರ ಪಾಲಿಗೆ ಈ ಬಿಸಿಲ ಧಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇದೇ ಸ್ಥಿತಿ ಮೇ ತಿಂಗಳ ಕೊನೆಯ ತನಕ ಮುಂದುವರಿದಲ್ಲಿ ಅಡಿಕೆ ಮರಗಳು ನಾಶವಾಗಿ ಮುಂದಿನ ಫಸಲು ನಷ್ಟವಾಗುತ್ತದೆ. 2 ದಿನದ ಹಿಂದೆ ಮಳೆ ಸುರಿದಿದ್ದರೂ, ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಿದೆ.
ತಾಲೂಕಿನ ಹಲವಾರು ಕಡೆಗಳಲ್ಲಿ ಅಡಿಕೆ ತೋಟಗಳು ಒಣಗಿ ಹೋಗಿವೆ. ಗ್ರಾಮಾಂತರ ಪ್ರದೇಶದ ಕೃಷಿಕರು ಅಡಿಕೆ ಕೃಷಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಅಡಿಕೆ ಮರಗಳು ಕರಟಿ ಹೋಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗದೆ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ಕಡೆಗಳಲ್ಲಿನ ಕೊಳವೆಬಾವಿಗಳಲ್ಲಿಯೂ ನೀರು ಬರಿದಾಗಿದೆ. ಸರಕಾರ ಹೊಸ ಕೊಳವೆ ಬಾವಿ ಕೊರೆಯಲು ಅವಕಾಶ ಕೂಡ ನೀಡುತ್ತಿಲ್ಲ. ನೀರಿಲ್ಲದ ಪ್ರದೇಶಗಳಲ್ಲಿನ ಹೊಸ ಕೊಳವೆಬಾವಿ ಕೊರೆದು ಕೃಷಿ ಉಳಿಸಿಕೊಳ್ಳುವಂತೆಯೂ ಇಲ್ಲ. ಕೆಲವೊಂದು ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇದ್ದರೂ, ವಿದ್ಯುತ್‌ ಸಮಸ್ಯೆ ಕೃಷಿ ಉಳಿಸಿಕೊಳ್ಳುವ ರೈತರ ಪ್ರಯತ್ನಕ್ಕೆ ಅಡ್ಡಿಯಾಗಿದೆ.
ಹಿಂಗಾರಗಳು ಕರಟಿವೆ ಜಿಲ್ಲೆಯ ಜೀವನಾಡಿ ಬೆಳೆಯಾಗಿರುವ ಅಡಿಕೆಗೆ ಜೀವಜಲದ ಬಾಧೆ ಒಂದು ಕಡೆಯಿಂದಾದರೆ, ಇನ್ನೊಂದು ಕಡೆಯಲ್ಲಿ  ಬಿಸಿಲಿನ ಧಗೆಯೂ ಅಡಿಕೆ ಮರವನ್ನು ಸುಡುತ್ತಿದೆ. ಜಿಲ್ಲೆಯಲ್ಲಿ ಎಲ್ಲೆಡೆ ಜಲಮಟ್ಟ ಕುಸಿದಿದ್ದು, ಕೃಷಿಕರ ನೀರಾಶ್ರಯದ ಕೆರೆ, ಬಾವಿಗಳು ಬತ್ತಿ ಹೋಗಿವೆ.
ತೀವ್ರತೆ ಹಿಂದಿಗಿಂತ ಹೆಚ್ಚು 2 ತಿಂಗಳಿನಿಂದ ಬಿಸಿಲ
ತಾಪ ಸಹಿಸಿಕೊಳ್ಳಲಾಗದೆ ಅಡಿಕೆ ಮರಗಳು ಸಾಯಲಾರಂಭಿಸಿವೆ. ಕಳೆದ ಮಳೆಗಾಲದಲ್ಲಿ ಕೊಳೆ ರೋಗದಿಂದ ಅಡಿಕೆ ಫಸಲು ಸಂಪೂರ್ಣವಾಗಿ ನಾಶವಾಗಿ ಹೋಗಿವೆ. ಈಗ ಬಿಸಿಲಿನ ತಾಪದಿಂದಾಗಿ ಕೃಷಿ ಸರ್ವನಾಶದತ್ತ ಸಾಗಿದೆ. ಕೃಷಿ ಉಳಿಸುವುದಕ್ಕಾಗಿ ಊರವರೆಲ್ಲ ಸೇರಿ ಹೊಳೆ ಯಲ್ಲಿದ್ದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲಾಗಿದ್ದರೂ, ಈ ಬಾರಿ ಬಹು ಬೇಗನೆ ನೀರು ಖಾಲಿಯಾಗಿದೆ. ಬಿಸಿಲಿನ ತೀವ್ರತೆ ಈ ಹಿಂದಿಗಿಂತಲೂ ಹೆಚ್ಚಾಗಿದೆ.
– ಬಿ.ಕೆ. ರಮೇಶ್‌ ಪಾಲ್ತಾಡಿ ಹಿರಿಯ ಕೃಷಿಕರು
ಉಪಬೆಳೆಗಳಿಗೂ ಕುತ್ತು ಕಳೆದ ಮಳೆಗಾಲದಲ್ಲಿ ಸಮೀಕ್ಷೆಯ ಪ್ರಕಾರ ಶೇ. 60ಕ್ಕೂ ಅಧಿಕ ಅಡಿಕೆ ಫಸಲು ಕೊಳೆರೋಗದಿಂದ ನಷ್ಟವಾಗಿತ್ತು. ಇದೀಗ ಮತ್ತೆ ಕಾಡಲಾರಂಭಿಸಿರುವ ಬಿಸಿಲ ಧಗೆಯಿಂದ ಅಡಿಕೆ ಮರಗಳೇ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅಡಿಕೆಯ ಜತೆಗೆ ಉಪ ಬೆಳಗಳಾದ ಬಾಳೆ, ಕರಿಮೆಣಸು, ಕೊಕ್ಕೋ ಕೃಷಿಯೂ ನಾಶವಾಗುತ್ತಿದೆ. ಕೃಷಿಕರಿಗೆ ಇದು ಭಾರಿ ಹೊಡೆತ ಕೊಟ್ಟಿದೆ.
ಪ್ರವೀಣ್‌ ಚೆನ್ನಾವರ
Advertisement

Udayavani is now on Telegram. Click here to join our channel and stay updated with the latest news.

Next