ಸುಳ್ಯ : ನಗರದ ಜಟ್ಟಿಪಳ್ಳ- ಕೊಡಿಯಾಲಬೈಲು ರಸ್ತೆಯಲ್ಲಿ ಕಂದಡ್ಕ ಹೊಳೆಗೆ ನಿರ್ಮಿಸಿರುವ ಸೇತುವೆ ವಾಹನ
ಸವಾರರ ಪಾಲಿಗೆ ಮೃತ್ಯುಕೂಪವೆನಿಸಿದೆ. ಹಲವು ಸಮಯದಿಂದ ಈ ಸಮಸ್ಯೆ ಯಿದ್ದರೂ, ಸ್ಥಳೀಯಾಡಳಿತ ದುರಸ್ತಿಗೆ ಮನಸ್ಸು ಮಾಡಿಲ್ಲ. ಸಂಚಾರದ ಸಂದರ್ಭ ವಾಹನ ಸವಾರರು ಕೊಂಚ ಬದಿಗೆ ಸರಿದರೆ ಹೊಳೆ ಪಾಲಾಗುವುದು ನಿಶ್ಚಿತ. ಈಗಾಗಲೇ ಕೆಲ ಅವಘಡಗಳು ಸಂಭವಿಸಿವೆ.
ಪ್ರಮುಖ ಸಂಪರ್ಕ ರಸ್ತೆ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಈ ಸೇತುವೆ ಇದೆ. ಇದನ್ನು ಸಂಪರ್ಕಿ ಸುವ ರಸ್ತೆಯ ಸ್ಥಿತಿಯೂ ಅಷ್ಟಕ್ಕಷ್ಟೆ. ಸುಬ್ರಹ್ಮಣ್ಯ-ಜಾಲೂರು ಮುಖ್ಯ ರಸ್ತೆಯಿಂದ ದುಗಲಡ್ಕದ ಮೂಲಕ ಸುಳ್ಯ ನಗರ ಸಂಪರ್ಕಿಸಲು ಸಾಧ್ಯವಿರುವ ಉಪಯುಕ್ತ ರಸ್ತೆ ಇದಾಗಿದೆ. ದುಗಲಡ್ಕ – ನೀರಬಿದಿರೆ- ಕಮಿಲಡ್ಕ- ಕೊಡಿಯಾಲಬೈಲು- ಜಟ್ಟಿಪಳ್ಳ ರಸ್ತೆ ಮೂಲಕ 6 ಕಿ.ಮೀ. ಅಂತರದಲ್ಲಿ ಸುಳ್ಯ ನಗರ ಪ್ರವೇಶಿಸಬಹುದು. ಆದರೆ ರಸ್ತೆ ಸಮರ್ಪಕವಾಗಿಲ್ಲದೆ, ಸೇತುವೆ ಸುರಕ್ಷಿತವಾಗಿಲ್ಲದ ಕಾರಣ ಸುಬ್ರಹ್ಮಣ್ಯ, ಗುತ್ತಿಗಾರು ಭಾಗದಿಂದ ಬರುವ ಹನಗಳು ಪೈಚಾರು ಮೂಲಕ ನಗರಕ್ಕೆ ಸಂಚರಿಸಬೇಕು. ಇದರ ಅಂತರ ಸುಮಾರು 9 ಕಿ.ಮೀ. ಹೀಗಾಗಿ ದುಗಲಡ್ಕ -ನೀರಬಿದಿರೆ-ಜಟ್ಟಿಪಳ್ಳ ರಸ್ತೆ ಪರ್ಯಾಯ ರಸ್ತೆಯಾಗಿ ಅಭಿವೃದ್ಧಿ ಪಡಿಸಿದಲ್ಲಿ ಕೆಎಸ್ ಆರ್‌ಟಿಸಿ ಬಸ್ ಸಹಿತ ಎಲ್ಲ ವಾಹನಗಳು ನೇರ ನಗರಕ್ಕೆ ಪ್ರವೇಶಿಸಬಹುದು. ಇದರಿಂದ ನಗರದ ಸಂಚಾರ ದಟ್ಟನೆ ಸಮಸ್ಯೆಗೆ ಒಂದಷ್ಟು ಪರಿಹಾರ ದೊರೆಯಲಿದೆ.
ಸಂಪರ್ಕ ಸೇತುವಿನ ದುಃಸ್ಥಿತಿ ಕಂದಡ್ಕ ಹೊಳೆಗೆ ನಿರ್ಮಿಸಿರುವ ಸೇತುವೆ ದಾಟಿ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿದಿನ ಸಂಚರಿಸುತ್ತಾರೆ. ಕೊಡಿಯಾಲಬೈಲಿನಲ್ಲಿರುವ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಒಕ್ಕಲಿಗ ಸಮುದಾಯ ಭವನ, ಉಬರಡ್ಕ ಗ್ರಾ.ಪಂ. ಕಚೇರಿ, ಸಾರ್ವಜನಿಕ ರುದ್ರಭೂಮಿ, ಸರಕಾರಿ ಪ್ರಾಥಮಿಕ ಶಾಲೆ ಮೊದಲಾದೆಡೆ ಸಂಚಾರಕ್ಕೆ ಈ ಸೇತುವೆ ಅನಿವಾರ್ಯ. ದಿನಂಪ್ರತಿ ಸಾವಿರಕ್ಕೂ ಅಧಿಕ ಪ್ರಯಾಣಿಕರು, ವಾಹನಗಳು ಇಲ್ಲಿ ಸಂಚರಿಸುತ್ತವೆ. ರಸ್ತೆಯಿಂದ ಸೇತುವೆ ಸಾಕಷ್ಟು ಕೆಳಭಾಗದಲ್ಲಿದೆ. ಸುಳ್ಯ ಭಾಗದಿಂದ ಸಂಚರಿಸುವ ವಾಹನಗಳು ಸೇತುವೆ ಪ್ರವೇಶ ಸ್ಥಳದಿಂದ 50 ಮೀ. ದೂರ ಇರುವ ಕಾಂಕ್ರೀಟ್ ರಸ್ತೆಯಲ್ಲಿ ಇಳಿಮುಖವಾಗಿ ಸಾಗಬೇಕು. ಇದು ಕೂಡ ಅಪಾಯಕಾರಿ ದಾರಿಯೇ. ಮೇಲಿಂದ ಸೇತುವೆ ಕಡೆಗೆ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಬದಿಗೆ ಸರಿಯಲು ಜಾಗವಿಲ್ಲ. ಸ್ವಲ್ಪ ತಪ್ಪಿದರೂ ಹೊಳೆ ಪಾಲಾಗುವ ಅಪಾಯವಿದೆ. ಸೇತುವೆ ಎರಡು ಬದಿಗಳಲ್ಲಿ ಬೇಲಿ ಮುರಿದು ಬಿದ್ದು ಅದೆಷ್ಟೂ ವರ್ಷಗಳು ಕಳೆದಿವೆ. ರಸ್ತೆ, ಸೇತುವೆ ನಡುವೆ ಓರೆಕೋರೆ ರಸ್ತೆಯಿದೆ. ಇವೆಲ್ಲವೂ ವಾಹನ ಸವಾರರ ಪಾಲಿಗೆ ಸವಾಲೆನಿಸಿದೆ.
ಮಳೆಗಾಲದಲ್ಲಿ ಭಾರಿ ಅಪಾಯ
ಇನ್ನೇನು ಮಳೆಗಾಲ ಸಮೀಪಿಸುತ್ತದೆ. ಆಗ ಹೊಳೆ ತುಂಬಾ ನೀರು ಹರಿಯುತ್ತದೆ. ಈ ವೇಳೆ ವಾಹನ ಚಲಾಯಿಸುವುದಂತೂ ಜೀವ ಕೈಯಲ್ಲಿ ಹಿಡಿದು ಸಾಗಿದ ಅನುಭವ. ವಾಹನ ತುಸು ವೇಗವಾಗಿ ಬಂದಲ್ಲಿ ನಿಯಂತ್ರಣಕ್ಕೆ ಸಿಗಲಾರದು. ಹೊಳೆ ನೀರಲ್ಲಿ ಕೊಚ್ಚಿಕೊಂಡು ಹೋಗುವುದು ಗ್ಯಾರಂಟಿ.
ದುರಸ್ತಿಗೆ ಕ್ರಮ
ಸೇತುವೆ ದುರಸ್ತಿಗೆ ಪ್ರಾಕೃತಿಕ ವಿಕೋಪದಡಿ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದು ಮಂಜೂರಾಗಬೇಕಿದೆ. ಈ ಬಾರಿ ಅನುದಾನಕ್ಕೆ ಕಾಯದೇ ನ.ಪಂ. ಸ್ವಂತ ನಿಧಿಯಿಂದ ದುರಸ್ತಿ ಕೈಗೆತ್ತಿಕೊಳ್ಳಲಾಗುವುದು.
– ಶಿವಕುಮಾರ್ ಎಂಜಿನಿಯರ್, ನ.ಪಂ. ಸುಳ್ಯ
ಹೆಚ್ಚು ಪ್ರಯೋಜನವಿದೆ
ಈ ರಸ್ತೆ ಮತ್ತು ಸೇತುವೆ ಅಭಿವೃದ್ಧಿಪಡಿಸಿದರೆ ಹೆಚ್ಚು ಪ್ರಯೋಜನವಿದೆ. ಹುಡ್ಕೊ ಯೋಜನೆಯಲ್ಲಿ ಅನುದಾನ
ಬಿಡುಗಡೆಗೊಂಡು, ಅದು ಸರಕಾರಕ್ಕೆ ವಾಪಾಸು ಹೋಗಿತ್ತು. ಅನಂತರ ಸೀಮಿತ ಭಾಗದಲ್ಲಿ ಮಾತ್ರ ದುರಸ್ತಿ ಆಗಿತ್ತು. ಈ
ಮುರಿದ ಸೇತುವೆ ಅಪಾಯಕಾರಿ ಆಗಿದೆ.
-ಭವಾನಿ ಶಂಕರ ಕಲ್ಮಡ್ಕ ಸ್ಥಳೀಯ ನಿವಾಸಿ