Advertisement
ರಾಜ್ಯದ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ಭತ್ತ, ರಾಗಿ, ಜೋಳ, ಸೋಯಾಬೀನ್, ಹೆಸರು ಸಹಿತ ವಿವಿಧ ಬೆಳೆಗಳಿಗೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಪ್ರತ್ಯೇಕವಾಗಿ ವಿಮೆ ಕಂತು ಪಾವತಿಸುತ್ತಾರೆ.
ಬೆಳೆ ಹಾನಿಗೆ ಸರಕಾರವೇ ಪರಿಹಾರ ನೀಡಿದ್ದರೂ ಬಹುತೇಕ ರೈತರಿಗೆ ತಮ್ಮ ಬೆಳೆಗೆ ಕಟ್ಟಿದ ವಿಮಾ ಹಣಕ್ಕೆ ಪರಿಹಾರ ಮಾತ್ರ ಬಂದಿಲ್ಲ. 2020-21ನೇ ಸಾಲಿನಲ್ಲಿ ಶೇ. 40.10ರಷ್ಟು ರೈತರಿಗೆ ಮಾತ್ರ ಬೆಳೆ ವಿಮೆ ಪರಿಹಾರ ದೊರೆತಿದೆ. 2020-21ನೇ ಸಾಲಿನಲ್ಲಿ 15,16,014 ರೈತರು ಬೆಳೆ ವಿಮೆಗೆ ಪ್ರೀಮಿಯಂ ಕಟ್ಟಿದ್ದು, ಕಂಪೆನಿಗಳಿಗೆ 1,511.25 ಕೋಟಿ ರೂ. ಜಮೆಯಾಗಿದೆ. ಪರಿಹಾರವಾಗಿ ಇದುವರೆಗೆ 580.77 ಕೋ. ರೂ. ರೈತರ ಖಾತೆಗೆ ಜಮೆಯಾಗಿದೆ.
Related Articles
Advertisement
ಸರಕಾರದ ಮೂಲಗಳ ಪ್ರಕಾರ ಸರಕಾರಿ ಸ್ವಾಮ್ಯದ ಸಂಸ್ಥೆಗೆ ಪ್ರೀಮಿಯಂ ಕಟ್ಟಿದ ರೈತರಿಗೆ ವಿಮೆ ದೊರೆತಿದ್ದು, ಖಾಸಗಿ ಕಂಪೆನಿಗಳಿಗೆ ಕಟ್ಟಿರುವ ರೈತರಿಗೆ ಸರಿಯಾಗಿ ಪರಿಹಾರ ದೊರೆತಿಲ್ಲ. ಸ್ವತಃ ಕೇಂದ್ರ ರಸಗೊಬ್ಬರ ಸಚಿವ ಭಗವಂತ ಖೂಬಾ ಹಾಗೂ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಖಾಸಗಿ ವಿಮಾ ಕಂಪೆನಿಗಳು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸೂಚಿಸಿದ್ದರು.
ಖಾಸಗಿ ವಿಮಾ ಕಂಪೆನಿಗಳು ಪ್ರತಿ ಜಿಲ್ಲೆಯಲ್ಲಿಯೂ ಸ್ವಂತ ಕಟ್ಟಡ ಹೊಂದಿರಬೇಕು ಹಾಗೂ ತಾಲೂಕು ಕೃಷಿ ಇಲಾಖೆಯ ಕಚೇರಿಯಲ್ಲಿ ರೈತರಿಗೆ ಮಾಹಿತಿ ನೀಡಲು ಒಬ್ಬ ಕಂಪೆನಿಯ ಪ್ರತಿನಿಧಿಯನ್ನು ನಿಯೋಜಿಸುವಂತೆ ಸೂಚನೆಯನ್ನೂ ನೀಡಿದ್ದಾರೆ.
ತಾಂತ್ರಿಕ ಕಾರಣಸರಕಾರದ ಮೂಲಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಶೇ. 99ರಷ್ಟು ರೈತರಿಗೆ ವಿಮಾ ಪರಿಹಾರ ತಲುಪಿಸಲಾಗುತ್ತಿದೆ. ಐದು ವರ್ಷಗಳಲ್ಲಿ 5,500 ಕೋಟಿ ರೂ.ದಲ್ಲಿ 50 ಕೋಟಿ ಮಾತ್ರ ಬಾಕಿ ಉಳಿದುಕೊಂಡಿದೆ. ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಆಹಾರ ಉತ್ಪಾದನೆಯಾಗಿದ್ದು, ಶೇ. 60ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಮಾತ್ರ ವಿಮಾ ಪರಿಹಾರ ದೊರೆಯಲಿದೆ. ಪರಿಹಾರ ಬಾಕಿ ಉಳಿದುಕೊಳ್ಳಲು ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ. ಸರಕಾರ ರೈತರ ಬ್ಯಾಂಕ್ ಖಾತೆಗಳಿಗೆ ಹಾಕಿರುವ ಪರಿಹಾರದ ಹಣ ಸುಮಾರು 20 ಕೋಟಿ ರೂ. ಸರಕಾರಕ್ಕೆ ವಾಪಸ್ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಳೆದ ಐದು ವರ್ಷಗಳಲ್ಲಿ ಬಹುತೇಕ ರೈತರಿಗೆ ವಿಮಾ ಪರಿಹಾರ ನೀಡಲಾಗಿದೆ. ಕೆಲವು ರೈತರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದ ಕಾರಣ ಪರಿಹಾರ ದೊರಕದಿರಬಹುದು, ಅಂಥ ಪ್ರಕರಣಗಳಿದ್ದರೆ, ಅವರ ಸಮಸ್ಯೆ ಪರಿಹರಿಸಿ ವಿಮೆ ಹಣ ವರ್ಗಾವಣೆ ಮಾಡಲಾಗುವುದು.
–ಬ್ರಿಜೇಶ್ ಕುಮಾರ್ ದೀಕ್ಷಿತ್, ಕೃಷಿ ಇಲಾಖೆ ಆಯುಕ್ತ -ಶಂಕರ ಪಾಗೋಜಿ