Advertisement

Farmers: ರೇಷ್ಮೆಗೂಡಿನ ಬೆಲೆ ಕುಸಿತ; ಕಂಗಾಲಾದ ರೈತ

04:40 PM Feb 01, 2024 | Team Udayavani |

ರಾಮನಗರ: ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರೇಷ್ಮೆ ಮತ್ತೆ ಬೆಲೆ ಕುಸಿತಕ್ಕೆ ಸಿಲುಕಿದ್ದು, ಕೆಲ ದಿನಗಳಿಂದ ಗಣನೀಯವಾಗಿ ರೈತರು ಬೆಳೆದ ರೇಷ್ಮೆಗೂಡಿನ ಬೆಲೆ ಕಡಿಮೆಯಾಗಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

Advertisement

ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ರೇಷ್ಮೆಗೂಡಿನ ಬೆಲೆ 5 ವರ್ಷಗಳ ಹಿಂದಿನ ಬೆಲೆಗೆ ಸರಿಸಮಾನವಾಗಿದ್ದು, ಬೆಲೆ ಏರಿಕೆಯ ಸಮಯದಲ್ಲಿ ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಿಬಿಗೋಲ್ಡ್‌ ತಳಿಯ ರೇಷ್ಮೆ ಗೂಡಿಗೆ ಪ್ರತಿ ಕೆ.ಜಿ.ಗೆ ಸರಾಸರಿ 387 ರೂ. ಬೆಲೆ ಸಿಗುತ್ತಿದ್ದು, ದಿನೇ ದಿನೆ ಬೆಲೆ ಕುಸಿತವಾಗುತ್ತಿದೆ. ಕೆಲ ತಿಂಗಳ ಹಿಂದೆ ರೇಷ್ಮೆಗೂಡಿನ ಬೆಲೆ 700 ರೂ.ಆಸುಪಾಸು ಇತ್ತು. ಇದೀಗ ದೊರೆಯುತ್ತಿರುವ ಬೆಲೆಯಿಂದ ಬೆಳೆ ಬೆಳೆಯಲು ಮಾಡಿದ ಖರ್ಚು ರೈತರಿಗೆ ಸಿಗದಂತಾಗಿದೆ.

ಪ್ರತಿ ಕೆ.ಜಿ.ಗೆ 400 ರೂ. ಖರ್ಚು: ಹೆಚ್ಚಿದ ಕೂಲಿಹಣ, ವಿದ್ಯುತ್‌ ಸಮಸ್ಯೆ, ರಸಗೊಬ್ಬರ, ಔಷಧಗಳ ಬೆಲೆ ಹೆಚ್ಚಳ, ಚಾಕಿ ಹುಳುಗಳ ಬೆಲೆ ಹೆಚ್ಚಳ ಹೀಗೆ ಹಲವು ಕಾರಣಗಳಿಂದಾಗಿ ಪ್ರತಿ ಕೆ.ಜಿ. ರೇಷ್ಮೆಗೂಡನ್ನು ಉತ್ಪಾದನೆ ಮಾಡರು ರೈತರಿಗೆ 350 ರೂ.ಗಳಿಂದ 400ರೂ. ವರೆಗೆ ಖರ್ಚಾಗುತ್ತದೆ. ಸ್ವಂತ ಜಮೀನಿದ್ದು ಹಿಪ್ಪುನೇರಳೆ ಸೊಪ್ಪನ್ನು ತಾವೆ ಬೆಳೆದರೆ ಖರ್ಚಿನ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದ್ದು, ಬೇರೆಯವರ ಬಳಿ ಸೊಪ್ಪನ್ನು ಖರೀದಿ ಮಾಡಿದರೆ ರೈತರ ಖರ್ಚು ಇನ್ನೂ ಹೆಚ್ಚಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬೆಳೆ ಬೆಳೆಯಲು ಮಾಡಿದ ಖರ್ಚಿಗೂ ಸಿಗದಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ಬೆಲೆ ಕುಸಿತ ಯಾಕೆ?: ರೇಷ್ಮೆ ಬೆಲೆ ಕುಸಿತವಾಗಿರುವುದಕ್ಕೆ ಮುಖ್ಯಕಾರಣ ರೇಷ್ಮೆ ಉತ್ಪಾದನೆ ಹೆಚ್ಚಾಗಿದ್ದು, ಬೇಡಿಕೆ ಕುಸಿತಗೊಂಡಿರುವುದು. ರೇಷ್ಮೆ ನೂಲಿನ ಬೇಡಿಕೆ ಕುಸಿತಗೊಂಡಿದೆ. ಇದರೊಂದಿಗೆ ರೇಷ್ಮೆ ಗೂಡಿನ ಉತ್ಪಾದನೆಯೂ ಹೆಚ್ಚಾಗಿದೆ. ಈ ಕಾರಣದಿಂದಾಗಿ ರೇಷ್ಮೆಗೂಡಿನ ಬೆಲೆ ಕಡಿಮೆಯಾಗುತ್ತಿದ್ದು ಇದಕ್ಕೆ ಹೊರದೇಶದಿಂದ ರೇಷ್ಮೆ ಬರುತ್ತಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯ ರೀಲರ್‌ಗಳು ಹೇಳುತ್ತಿದ್ದಾರೆ.

ಸರ್ಕಾರ ಮಧ್ಯ ಪ್ರವೇಶಿಸಲಿ: ರೇಷ್ಮೆ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 2011ರಲ್ಲಿ ರೇಷ್ಮೆ ಗೂಡಿಗೆ ಪ್ರತಿಕೆಜಿಗೆ 300ರೂ.ಬೆಲೆ ಇರಬೇಕು ಎಂದು ಸರ್ಕಾರ ನಿಗದಿ ಮಾಡಿದ್ದು, ಅದಕ್ಕಿಂತ ಕಡಿಮೆಯಾದಲ್ಲಿ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. 13 ವರ್ಷ ಕಳೆದರೂ ಈ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸರ್ಕಾರ 500 ರೂ.ಗಳಿಗೆ ರೇಷ್ಮೆಗೂಡಿನ ದರವನ್ನು ನಿಗದಿಪಡಿಸಿ ಬೆಲೆ ಕುಸಿತ ಕಂಡಲ್ಲಿ ಬೆಂಬಲ ಬೆಲೆ ನೀಡುವ ಯೋಜನೆಯನ್ನು ಜಾರಿಗೆ ತರಲಿ ಎಂದು ರೇಷ್ಮೆ ಬೆಳೆಗಾರರು ಆಗ್ರಹಿಸಿದ್ದಾರೆ.

Advertisement

ರೇಷ್ಮೆ ಬೆಲೆ 400ಕ್ಕಿಂತ ಕಡಿಮೆ ಸಿಗುತ್ತಿದ್ದು, ರೈತರಿಗೆ ಏನೇನೂ ಸಿಗದಂತಾಗಿದೆ. ಒಂದು ಕೆ.ಜಿ.ಗೂಡಿಗೆ ಕನಿಷ್ಠ 500 ರೂ.ಬೆಲೆ ಸಿಕ್ಕರೆ ನಾವು ಮಾಡಿದ ಖರ್ಚು ಸರಿಯೋಗುತ್ತದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ರೇಷ್ಮೆಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಬೇಕು. ●ಕೆಂಪೇಗೌಡ ಹುಲುವಾಡಿ, ರೇಷ್ಮೆ ಬೆಳೆಗಾರ

ರೇಷ್ಮೆ ಗೂಡಿನ ಬೆಲೆ ತೀರಾ ಕಡಿಮೆಯಾಗಿಲ್ಲ. ಕಳೆ ವರ್ಷಕ್ಕೆ ಹೋಲಿಕೆ ಮಾಡಿದರೆ ಕಡಿಮೆ ಎನಿ ಸುತ್ತಿದೆ ಅಷ್ಟೇ. ಜಿಲ್ಲೆಯಲ್ಲಿ ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಾಗಿದ್ದು, ಕಳೆದ ಸಾಲಿಗಿಂತ ಹೆಚ್ಚು ಗೂಡು ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಸ್ವಲ್ಪ ಕಡಿಮೆ ಎನಿಸಿದರೂ. ಸರಾಸರಿ ಗಣನೆಗೆ ತೆಗೆದು ಕೊಂಡರೆ ಬೆಲೆ ತೀರಾ ಕಡಿಮೆಯಾಗಿಲ್ಲ. –ಮಲ್ಲಿಕಾರ್ಜುನ್‌, ಉಪನಿರ್ದೇಶಕರು, ರೇಷ್ಮೆ ಗೂಡಿನ ಮಾರುಕಟ್ಟೆ ರಾಮನಗರ

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next