ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ನಾಲ್ಕೈದು ವರ್ಷಗಳಿಂದ ಮಳೆ ಕೊರತೆ, ನೀರಿನ ಅವೈಜ್ಞಾನಿಕ ಬಳಕೆಯಿಂದ ಒಂದೇ ಬೆಳೆ ಪಡೆದ ರೈತರು, ಈ ಬಾರಿ ಬೇಸಿಗೆ ಭತ್ತದ ಬೆಳೆ ನಾಟಿ ಮಾಡಿದ 25 ದಿನಗಳಲ್ಲಿ ತೆನೆ ಬಿಚ್ಚುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿದೆ.
ಮುಂಗಾರು ಸುಗ್ಗಿ ಬೆಳೆಗೆ ಸೂಕ್ತ ಬೆಲೆ ಸಿಗದೇ ಬಹುತೇಕ ರೈತರು ಇನ್ನೂ ಭತ್ತವನ್ನು ಮಾರಾಟ ಮಾಡದೇ ಸಂಗ್ರಹ ಮಾಡಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು 90-120 ದಿನಗಳಲ್ಲಿ ಕಟಾವಿಗೆ ಬರುವ ಭತ್ತವನ್ನು ನಾಟಿ ಮಾಡುತ್ತಾರೆ. ನಾಟಿ ಮಾಡಿದ 25 ದಿನಗಳು ಪೂರ್ಣಗೊಳ್ಳುವ ಮುನ್ನವೇ ಬಹುತೇಕ ಭತ್ತದ ಬೆಳೆ ತೆನೆ ಬಿಚ್ಚುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿದೆ. ಬೇಸಿಗೆ ಹಂಗಾಮಿನ ಭತ್ತದ ಬೆಳೆ ನವೆಂಬರ್, ಡಿಸೆಂಬರ್‌ನಲ್ಲಿ ನಾಟಿ ಮಾಡಿ ಮಾರ್ಚ್ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಕಟಾವು ಮಾಡಲಾಗುತ್ತದೆ. ಈ ಭಾರಿ ಬೇಸಿಗೆ ಭತ್ತದ ನಾಟಿ ಜನವರಿ ಮಧ್ಯೆ ಭಾಗದವರೆಗೂ ನಾಟಿ ಕಾರ್ಯ ನಡೆದಿದೆ.
ಇದೀಗ ಭತ್ತದ ಬೆಳೆ 20-25 ದಿನಗಳಾಗಿವೆ. ಕಲ್ಗುಡಿ, ಮರಳಿ, ಶ್ರೀರಾಮನಗರ, ಢಣಾಪೂರ, ಮುಸ್ಟೂರು, ಅಯೋಧ್ಯಾ, ಹೊಸಳ್ಳಿ, ಜಂತಗಲ್, ಕುಂಟೋಜಿ, ಬರಗೂರು, ಸಿದ್ದಾಪೂರ, ಶಾಲಿಗನೂರು, ಉಳೇನೂರು, ಬೆನ್ನೂರು, ಜಮಾಪೂರ, ಗುಂಡೂರು, ಸಿಂಗನಾಳ ಭಾಗದಲ್ಲಿ 25 ದಿನದ ಭತ್ತದ ಬೆಳೆ ತೆನೆ ಬಿಚ್ಚಿದ್ದು, ಕಾಳುಕಟ್ಟುವ ಸಂದರ್ಭದಲ್ಲಿ ಚಳಿ ವಾತಾವರಣದಿಂದ ಕಾಳು ಜೊಳ್ಳಾಗುವ ಸಂದರ್ಭವಿದೆ. ಅವಧಿಗೂ ಮುನ್ನ ತೆನೆ ಬಿಚ್ಚುವ ಕುರಿತು ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡುವ ಅವಶ್ಯವಿದೆ. ತಾಲೂಕಿನ ಬಹುತೇಕ ಕಡೆ ಭತ್ತದ ಬೀಜ ತಯಾರಿಕಾ ಘಟಕಗಳು ತಲೆ ಎತ್ತಿದ್ದು, ಈ ಕುರಿತು ರೈತರು ದೂರು ನೀಡಿದರೂ ಕೃಷಿ ಇಲಾಖೆ ಅಧಿ ಕಾರಿಗಳು ಒತ್ತಡಕ್ಕೆ ಮಣಿದು ಬೀಜ ಮಾರಾಟ ಮಾಡಿದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಸರಕಾರ ಕೂಡಲೇ ನಕಲಿ ಭತ್ತದ ಬೀಜ ತಯಾರಿಸುವ ಘಟಕಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಬೇಗನೆ ತೆನೆ ಬಿಚ್ಚಿದ ಭತ್ತದ ಕುರಿತು ಸೂಕ್ತ ಸಂಶೋಧನೆ ಮಾಡಿ ರೈತರನ್ನು ರಕ್ಷಣೆ ಮಾಡಬೇಕಿದೆ.
ಕೆ. ನಿಂಗಜ್ಜ