ರೆವಾರಿ (ಹರ್ಯಾಣ): ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪಿಗೆ ಸೇರಲು ಅವರತ್ತ ಸಾಗುತ್ತಿದ್ದ ಹರ್ಯಾಣದ ರೈತರನ್ನು ರವಿವಾರ ಪೊಲೀಸರು ತಡೆದಿದ್ದಾರೆ. ಈ ವೇಳೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ ಘಟನೆಯೂ ನಡೆಯಿತು.
ರೆವಾರಿ- ಅಲ್ವಾರ್ ಗಡಿಯಲ್ಲಿ ಈ ಘರ್ಷಣೆ ನಡೆದಿದ್ದು, ಪೊಲೀಸರ ತಡೆಯನ್ನು ಮುರಿದು ಮುಂದೆ ಹೋಗಲು ರೈತರು ಯತ್ನಿಸಿದ್ದರು ಎನ್ನಲಾಗಿದೆ. ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಕೆಲವು ಸುತ್ತು ಅಶ್ರುವಾಯು ಸಿಡಿದ್ದಾರೆ. ನಂತರ ಪೊಲೀಸರು ರೈತರನ್ನು ಮಾಸನಿ ಎಂಬಲ್ಲಿನ ಮೇಲ್ಸೇತುವೆಯಲ್ಲಿ ತಡೆದಿದ್ದಾರೆ.
ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಜೊತೆ ಇಂದು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ. ರೈತರ ಪ್ರತಿಭಟನೆ ಇಂದು 40ನೇ ದಿನಕ್ಕೆ ಕಾಲಿಡುತ್ತಿದ್ದು, ರೈತರು ಗಾಳಿ ಮಳೆ ಲೆಕ್ಕಿಸದೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು- ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ
ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಜ.26ರಂದು ದಿಲ್ಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸುವುದಾಗಿ ರೈತರು ಹೇಳಿದ್ದಾರೆ.