Advertisement

ರೈತರ ಕೈಹಿಡಿದ ಹಿಂಗಾರು ಹಂಗಾಮು

02:23 PM Feb 24, 2020 | Suhan S |

ಗದಗ: ಜಿಲ್ಲೆಯಲ್ಲಿ ಕಳೆದ ವರ್ಷ ಹಿಂಗಾರಿನಲ್ಲಿ ಸುರಿದ ಭಾರೀ ಮಳೆ, ಪ್ರವಾಹದಿಂದ ಹಲವರ ಬದುಕು ಬೀದಿಗೆ ಬಂದಿವೆ. ಮತ್ತೂಂದೆಡೆ ಬಯಲು ಸೀಮೆಯಲ್ಲಿ ವಿವಿಧ ಬೆಳೆಗಳು ರೈತರ ಕೈಹಿಡಿವೆ. ಹೀಗಾಗಿ ನಗರದ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ, ಕಡಲೆ ಹೊಟ್ಟು ಮಾರಾಟದಿಂದ ಕೃಷಿ ಉತ್ಪನ್ನ ಮಾರುಕಟ್ಟಗೆ ಜೀವಕಳೆ ಬಂದಿದೆ. ಅದರಲ್ಲೂ ಈ ಬಾರಿ ರೈತರ ಜೀವನಾಡಿಯಾಗಿರುವ ಎತ್ತುಗಳಿಗೆ ಹಾಗೂ ಕಡಲೆ ಹೊಟ್ಟಿಗೆ ಈಗ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

Advertisement

ಕಳೆದ ಐದಾರು ವರ್ಷಗಳಿಂದ ಸತತ ಬರಗಾಲದಿಂದ ರೈತರು ಕಂಗೆಟ್ಟಿದ್ದರು. ಜಾನುವಾರುಗಳಿಗೆ ಕುಡಿಯಲು ನೀರು, ಮೇವು ಪೂರೈಸಲಾಗದೇ ಹೈರಾಣಾಗಿದ್ದರು. ಹೀಗಾಗಿ ಅನೇಕರು ಬಂದಷ್ಟು ಬರಲಿ ಎಂದು ತಮ್ಮ ಎತ್ತು, ಎಮ್ಮೆ ಹಾಗೂ ಆಕಳಗಳನ್ನು ಅತ್ಯಂಕ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಆದರೆ, ಈ ಬಾರಿ ಹಿಂಗಾರಿನಲ್ಲಿ ಅಲ್ಪಸ್ವಲ್ಪ ಮಳೆ- ಬೆಳೆಯಾಗಿದ್ದರಿಂದ ರೈತರಿಗೆ ಆದಾಯ ಹರಿದು ಬಂದಿದೆ. ಹೀಗಾಗಿ ಮತ್ತೆ ಎತ್ತುಗಳ ಖರೀದಿಯತ್ತ ಚಿತ್ತರಿಹರಿಸಿದ್ದಾರೆ.

ಕೃಷಿಗೆ ಎತ್ತುಗಳೇ ಜೀವಾಳ: ಆಧುನಿಕ ಯುಗದಲ್ಲಿ ಟ್ರ್ಯಾಕ್ಟರ್‌ ಹಾಗೂ ಅನೇಕ ಕೃಷಿ ಯಂತ್ರೋಪಕರಣಗಳ ಬಳಕೆ ಇದ್ದರೂ ಕೃಷಿಗೆ ಜಾನುವಾರುಗಳು ಬೇಕೇ ಬೇಕು. ಇನ್ನು, ಸಾವಯವ ಕೃಷಿ ಮಾಡುವರರು, ಮನೆಯಲ್ಲೇ ಜಾನುವಾರುಗಳ ಸಗಣಿ ಬಳಸಿ, ರಸಗೊಬ್ಬರ ತಯಾರಿಕೆ, ಹಾಲು ಉತ್ಪಾದನೆ ಹಾಗೂ ಕೃಷಿ ಚಟುವಟಿಕೆಗಳಿಗೂ ಬೇಕೇ ಬೇಕು. ಇನ್ನು, ಸಣ್ಣ ಹಿಡುವಳಿದಾರರಿಗೆ ಎತ್ತುಗಳು ಅವಿಭಾಜ್ಯ ಅಂಗ. ಅಲ್ಲದೇ, ಟ್ರ್ಯಾಕ್ಟರ್‌ಗಿಂತ ಎತ್ತುಗಳಿಂದ ಬಿತ್ತನೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುದು ರೈತರ ಅಭಿಪ್ರಾಯ.

ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಎತ್ತುಗಳ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ. ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಜವಾರಿ, ಮೂಡಲ, ಕಿಲಾರಿ, ಯರೀಸೀಮೆ, ಮೌಳಿ ಮತ್ತಿತರೆ ತಳಿಗಳ ಎತ್ತುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅದರಲ್ಲೂ ಉತ್ತಮ ಜೋಡಿ ಎತ್ತುಗಳಿಗೆ ಹೆಚ್ಚಿನ ದರ ಕಟ್ಟಲಾಗುತ್ತದೆ. ಈ ಹಿಂದೆ ಬರಲಾಗದಿಂದಾಗಿ ಎತ್ತುಗಳನ್ನು ಮಾರುವವರ ಸಂಖ್ಯೆ ಹೆಚ್ಚಿರುತ್ತಿತ್ತು. ಆದರೆ, ಇತ್ತೀಚಿಗೆ ಕೃಷಿಕರ ಪರಿಸ್ಥಿತಿ ಸುಧಾರಿಸಿದೆ. ಕಳೆದ ಒಂದು ತಿಂಗಳಿಂದೀಚೆಗೆ ಜಿಲ್ಲೆಯ ವಿವಿಧ ಸಂತೆಗಳಲ್ಲಿ ಜಾನುವಾರುಗಳ ಖರೀದಿದಾರರ ಸಂಖ್ಯೆ ಹೆಚ್ಚಿದ್ದು, ಎತ್ತು, ಆಕಳುಗಳು ಸಾವಿರಾರು ಸಂಖ್ಯೆಯಲ್ಲಿ ಕೈ ಬದಲಾಗುತ್ತಿವೆ. ಪ್ರತಿ ಜೋಡು ಎತ್ತುಗಳನ್ನು 30 ಸಾವಿರದಿಂದ 1 ಲಕ್ಷ ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಜಾನುವಾರು ಮಾರಾಟಗಾರರಿಗೂ ಉತ್ತಮ ಬೆಲೆ ದೊರೆಯುತ್ತಿದೆ ಎನ್ನುತ್ತಾರೆ ರೈತ ಶಿವಪ್ಪ ಮ್ಯಾಗೇರಿ.

ಜಾನುವಾರುಗಳಿಗೆ ಮೇವು ಬರಪೂರ: ಈ ಬಾರಿ ಹಿಂಗಾರಿನಲ್ಲಿ ಭಾರೀ ಮಳೆಯಾಗಿದ್ದರಿಂದ ಹಲವು ದಿನಗಳ ವರೆಗೆ ಭೂಮಿಯಲ್ಲಿ ತೇವಾಂಶ ಮುಂದುವರಿದಿತ್ತು. ವಿವಿಧ ಕಾರಣಗಳಿಂದಾಗಿ ವಿವಿಧಡೆ ಬೆಳೆಗಳು ಕಾಯಿ ಕಟ್ಟದೇ ಇದ್ದರೂ, ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆದು ನಿಂತಿದ್ದರಿಂದ ಮೇವಿಗೆ ಸಮಸ್ಯೆಯಾಗಿಲ್ಲ. ಅದರಲ್ಲೂ ಈ ಬಾರಿ ಹಿಂಗಾರಿನಲ್ಲಿ ಒಟ್ಟು 1.22 ಲಕ್ಷ ಹೆಕ್ಟೇರ್‌ ಕಡಲೆ ಬಿತ್ತನೆ ಮಾಡಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕಿನಿಂದ ಟ್ರ್ಯಾಕ್ಟರ್‌ಗಳಲ್ಲಿ ಒಣಮೇವು, ಹೊಟ್ಟು ಹೇರಿಕೊಂಡು ಬರುತ್ತಿದ್ದು,

Advertisement

ಗ್ರಾಹಕರಿಗಾಗಿ ಸಾಲು ಗಟ್ಟಿ ನಿಲ್ಲುತ್ತಿವೆ. ಒಣ ಮೇವು ಟ್ರ್ಯಾಕ್ಟರ್‌ವೊಂದಕ್ಕೆ 4,500 ರಿಂದ 6,000 ರೂ. ವರೆಗೆ ಧಾರಣೆ ನಿಗದಿ ಮಾಡಲಾಗಿದೆ. ಅದರಂತೆ ಕಡಲೆ ಹೊಟ್ಟು ಟ್ರ್ಯಾಕ್ಟರ್‌ ವೊಂದಕ್ಕೆ 3,500 ಸಾವಿರ, ಶೇಂಗಾ ಹೊಟ್ಟು 5,000 ಬೆಲೆ ಕೇಳಿ ಬರುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮೇವಿನ ದರದಲ್ಲಿ ಕೊಂಚ ಇಳಕೆಯಾಗಿದೆ ಎನ್ನಲಾಗಿದೆ.

ಈ ಬಾರಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬೆಳೆಗಳು ಕೈಹಿಡಿದಿವೆ. ಮುಂದಿನ ಮುಂಗಾರು ಇದೇ ರೀತಿ ಚುರುಕಾದರೆ ಜಾನುವಾರಗಳ ಬೆಲೆ ಗಗನಕ್ಕೇರುತ್ತವೆ. ಹೀಗಾಗಿ ಕೈಗೆಟಕುವ ದರದಲ್ಲಿ ಸಿಕ್ಕರೆ, ಒಂದು ಜೋಡಿ ಎತ್ತು ಖರೀದಿಸಬೇಕೆಂದಿದ್ದೇವೆ.  –ಶರಣಪ್ಪ ಬಿ. ಉಪ್ಪಾರ, ರೋಣ ರೈತ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next