Advertisement

ಆಲಮಟ್ಟಿ ಎತ್ತರ’ಚರ್ಚೆಯಲ್ಲೇ ಮುಳುಗಿದ ರೈತರು!

04:20 PM Aug 25, 2018 | Team Udayavani |

ಬಾಗಲಕೋಟೆ: ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ 12 ಹಳ್ಳಿಗಳ ಸಂತ್ರಸ್ತರು ತೀವ್ರ ಗೊಂದಲಕ್ಕೆ ಸಿಲುಕಿದ್ದಾರೆ. ಸರ್ಕಾರದ ಇಬ್ಬಗೆ ನೀತಿಯಿಂದ ಸಂತ್ರಸ್ತರು, ನಮ್ಮ ಹಳ್ಳಿಗಳು ಮುಳಗ್ತಾವಾ-ಮುಳಗಲ್ವಾ ಎಂಬ ಪ್ರಶ್ನೆ ನಿತ್ಯವೂ ಯುಕೆಪಿ ಅಧಿಕಾರಿಗಳ ಮುಂದಿಡುತ್ತಿದ್ದಾರೆ.

Advertisement

ಯುಕೆಪಿ ವ್ಯಾಪ್ತಿಯ ಯೋಜನೆಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸುವ ಜತೆಗೆ ರೈತರ ಫಲವತ್ತಾದ ಭೂಮಿ, ಹಲವು ವರ್ಷಗಳ ಕಾಲ ಬಾಂಧವ್ಯ ಹೊಂದಿರುವ ಗ್ರಾಮಗಳನ್ನು ಮುಳುಗಡೆಯಿಂದ ತಪ್ಪಿಸಲು ಈಗಾಗಲೇ ಸ್ವಾಧೀನಪಡಿಸಿಕೊಂಡ 519.60 ಮೀಟರ್‌ಗೆ ಮಿತಿಗೊಳಿಸಿ ಅದೇ ಸ್ವಾಧೀನ ಜಾಗೆಯಲ್ಲಿ ನಾರ್ವೆ ಮಾದರಿಯ ತಡೆಗೋಡೆ ನಿರ್ಮಿಸುವ ಯೋಜನೆ ಸಿದ್ಧಗೊಂಡು ನಾಲ್ಕು ವರ್ಷ ಕಳೆದಿವೆ. ಆದರೆ, ಸರ್ಕಾರ ಈ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ 12 ಹಳ್ಳಿಗಳ ಜನರು ತಮ್ಮ ಗ್ರಾಮಗಳು ಮುಳುಗಡೆ ಆಗುತ್ತವೆಯೋ, ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ.

ಯಾವ ಯಾವ ಗ್ರಾಮಗಳು?: ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ಕೃಷ್ಣಾ ನ್ಯಾಯಾಧಿಕರಣ 2010ರಲ್ಲಿ ಅನುಮತಿ ನೀಡಿದೆ. ಜಲಾಶಯ ಎತ್ತರಿಸಿದರೆ ಅವಳಿ ಜಿಲ್ಲೆಯ 22 ಗ್ರಾಮಗಳು ಹಾಗೂ ಸುಮಾರು 96 ಸಾವಿರ ಎಕರೆ ಫಲವತ್ತಾದ ಭೂಮಿ ಮುಳುಗಡೆಯಾಗುತ್ತದೆ. ಅದರಲ್ಲಿ ಸಾಧ್ಯತೆ ಇರುವ 12 ಗ್ರಾಮಗಳು, 4,855 ಎಕರೆ ಭೂಮಿ ಉಳಿಸಿಕೊಳ್ಳಲು, ಮುಖ್ಯವಾಗಿ ಇದಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ 5,393 ಕೋಟಿ ಅನುದಾನ ಉಳಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದ ಕಂಪನಿಗೆ ಗುತ್ತಿಗೆ ಕೂಡ ನೀಡಲಾಗಿತ್ತು. ಈ ಸಂಸ್ಥೆ ಯುಕೆಪಿ ವ್ಯಾಪ್ತಿಯಲ್ಲಿ ಮುಳುಗಡೆಯಿಂದ ತಪ್ಪಿಸಬಹುದಾದ ಗ್ರಾಮಗಳ ಸಮೀಕ್ಷೆ ನಡೆಸಿ, ವರದಿ ನೀಡಿದೆ.

ಮುಳುಗಡೆಯಿಂದ ತಪ್ಪಿಸಿ ಭೂಮಿ, ಮನೆ, ಅನುದಾನ ಎಲ್ಲವೂ ಉಳಿಸಲು ಗುರುತಿಸಿದ್ದು ಒಟ್ಟು 12 ಗ್ರಾಮಗಳು. ಅದರಲ್ಲಿ ಬಾಗಲಕೋಟೆ ತಾಲೂಕಿನ ಕಲಾದಗಿ, ಗೋವಿಂದಕೊಪ್ಪ, ಉದಗಟ್ಟಿ, ಬೀಳಗಿ ತಾಲೂಕಿನ ಆಲಗುಂಡಿ, ಕಾತರಕಿ, ಬಾವಲತ್ತಿ, ಕೊಪ್ಪ ಎಸ್‌.ಕೆ, ಜಮಖಂಡಿ ತಾಲೂಕಿನ ಹಿರೇಪಡಸಲಗಿ, ಕುಂಬಾರಹಳ್ಳ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮಗಳನ್ನು ಮುಳುಗಡೆಯಿಂದ ರಕ್ಷಿಸಲು ಉದ್ದೇಶಿಸಲಾಗಿದೆ.

5 ಸಾವಿರ ಕೋಟಿ ಉಳಿತಾಯ: ಸರ್ಕಾರ ಈ ಯೋಜನೆ ಕೈಗೊಂಡಲ್ಲಿ 12 ಗ್ರಾಮಗಳು, 4,855 ಎಕರೆ ಭೂಮಿ ಉಳಿಯಲಿದೆ. ಒಂದು ವೇಳೆ ಭೂಮಿ, ಕಟ್ಟಡ ಸ್ವಾಧೀನಪಡಿಸಿಕೊಂಡರೆ 5,60.97 ಕೋಟಿ ಪರಿಹಾರ ನೀಡಬೇಕು. ಅದರ ಬದಲು ನಾರ್ವೆ ಮಾದರಿ ಗೋಡೆ ನಿರ್ಮಿಸಿದರೆ ಅದಕ್ಕಾಗಿ ಕೇವಲ 247 ಕೋಟಿ ಖರ್ಚು ಆಗಲಿದೆ. ಇದರಿಂದ ಸರ್ಕಾರಕ್ಕೆ ಒಟ್ಟು 5,393.97 ಕೋಟಿ ಅನುದಾನದ ದೊರೆ ಇಳಿಯಲಿದೆ. ಅದಕ್ಕಾಗಿ ಯೋಜನೆ ರೂಪಿಸಿದ್ದರೂ ಅದನ್ನು ಜಾರಿಗೊಳಿಸುವ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ 524.256 ಮೀಟರ್‌ ವ್ಯಾಪ್ತಿಯೊಳಗೆ ಬರುವ ಭೂಮಿಯ ರೈತರು, ಗ್ರಾಮಗಳ ಸಂತ್ರಸ್ತರು ಗೊಂದಲದಲ್ಲಿದ್ದಾರೆ.

Advertisement

ಸರ್ಕಾರ ಮುಳುಗಡೆ ಮಾಡದಿದ್ದರೆ ಭೂಮಿಯಲ್ಲಿ ಹೊಸದಾಗಿ ಕೊಳವೆ ಬಾವಿ, ಮನೆ ನಿರ್ಮಾಣ ಇಲ್ಲವೇ ವಿವಿಧ ಭೂ ಅಭಿವೃದ್ಧಿ ಕೆಲಸ ಕೈಗೊಳ್ಳಬಹುದು. ಒಂದು ವೇಳೆ ಸ್ವಾಧೀನಪಡಿಸಿಕೊಂಡರೆ ನಾವು ಖರ್ಚು ಮಾಡಿದ ಹಣ ಸದ್ಬಳಕೆಯಾಗುವುದಿಲ್ಲ. ಹೀಗಾಗಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ವಿಳಂಬದಿಂದ ನಮ್ಮ ಭೂಮಿ, ಹಳ್ಳಿಗಳು ಮುಳುಗಡೆ ಆಗ್ತಾವಾ, ಇಲ್ಲವಾ ಎಂಬ ಚಿಂತೆ ಕಾಡುತ್ತಿದೆ ಎಂದು ಬೀಳಗಿ ತಾಲೂಕು ಕೊಪ್ಪ ಎಸ್‌.ಕೆ ಗ್ರಾಮದ ರೈತ ಮಾರುತಿ ಹೇಳಿದರು.

ಜಲಾಶಯ ಎತ್ತರದಿಂದ 12 ಗ್ರಾಮ, ಸುಮಾರು 5 ಸಾವಿರ ಎಕರೆ ಭೂಮಿ ಮುಳುಗಡೆಯಿಂದ ತಪ್ಪಿಸಲು ಹಾಗೂ 5393 ಕೋಟಿ ಅನುದಾನ ಉಳಿತಾಯದ ತಡೆಗೋಡೆ ನಿರ್ಮಾಣ ಕುರಿತ ಸಮಗ್ರ ಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದು ಜಾರಿಗೊಳಿಸುವ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ. ತಡೆಗೋಡೆ ನಿರ್ಮಾಣ ಯೋಜನೆ ಕೈಬಿಟ್ಟಿಲ್ಲ. ಅಂತಿಮ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸ್ಪಷ್ಟನೆ ಕೇಳಲಾಗಿದೆ.
. ಜಗದೀಶ ರೂಗಿ, ಪ್ರಧಾನ ವ್ಯವಸ್ಥಾಪಕರು, ಯುಕೆಪಿ

Advertisement

Udayavani is now on Telegram. Click here to join our channel and stay updated with the latest news.

Next