Advertisement

ರೈತ ಭವನ-ಹು.ಧಾ. ಒನ್‌ ಕೇಂದ್ರ ಉದ್ಘಾಟನೆ

03:17 PM Dec 07, 2020 | Adarsha |

ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೀರಾಪುರ ರಸ್ತೆಯಲ್ಲಿ ನೂತನ ರೈತ ಭವನ, ಹು-ಧಾ ಒನ್‌ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಟ್ಟಡವನ್ನು ರವಿವಾರ ಉದ್ಘಾಟಿಸಲಾಯಿತು.

Advertisement

ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸರ್ಕಾರ ಸಾರ್ವಜನಿಕ ಹಣ ಬಳಸಿ ಯೋಜನೆಗಳನ್ನು ನೀಡಿರುತ್ತದೆ. ನಿರ್ಮಾಣ, ಉದ್ಘಾಟನೆಗೆ ತೋರುವ ಕಾಳಜಿ ನಿರ್ವಹಣೆಗೂ ಇರಬೇಕು. ಸ್ವತ್ಛತೆ ಕಾಪಾಡಿಕೊಂಡು ಇದೊಂದು ಮಾದರಿ ಕಟ್ಟಡವನ್ನಾಗಿ ನೋಡಿಕೊಳ್ಳಬೇಕು. ಒಂದೇ ಸೂರಿನಡಿ 26 ಸೇವೆಗಳ ಹು-ಧಾ ಒನ್‌ ಕೇಂದ್ರ ಆರಂಭವಾಗಿರುವುದು ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಇನ್ನೊಂದು ಅಂತಸ್ತು ನಿರ್ಮಿಸಿ ಮಹಿಳಾ ಮಂಡಳಕ್ಕೆ ನೀಡಬೇಕು. ಇದಕ್ಕೆ ಅಗತ್ಯ ಅನುದಾನ ಕಲ್ಪಿಸಲಾಗುವುದು ಎಂದರು.

ರಾಜಕಾರಣಕ್ಕೆ ಬೇರೆ ವೇದಿಕೆ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಕ್ಷದ ಬ್ಯಾನರ್‌ಗಳನ್ನು ಕಟ್ಟುವುದು ಸರಿಯಲ್ಲ. ರಾಜಕಾರಣ ಮಾಡಲು, ಬ್ಯಾನರ್‌ ಕಟ್ಟಲು ನಮ್ಮದೇಯಾದ ವೇದಿಕೆಗಳಿರುತ್ತವೆ. ರಾಜಕಾರಣಿಗಳು ಜನರ ಹೃದಯದಲ್ಲಿರಬೇಕು ವಿನಃ ಬ್ಯಾನರ್‌ಗಳಲ್ಲಿ ಅಲ್ಲ. ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ದಿನವಿಡೀ ರಾಜಕಾರಣ ಮಾಡಿಕೊಂಡು ಇರಲು ಸಾಧ್ಯವಿಲ್ಲ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಪ್ರಾಸ್ತಾವಿಕ ಮಾತನಾಡಿ, ರೈತ ಭವನ ಹಾಗೂ ಹು-ಧಾ ಒನ್‌ ಕೇಂದ್ರಕ್ಕೆ ಈ ಭಾಗದಲ್ಲಿ ಸಾಕಷ್ಟು ಬೇಡಿಕೆಯಿತ್ತು. ಸರ್ಕಾರಿ ಜಾಗ ಸದ್ಬಳಕೆ ಮಾಡಿಕೊಂಡು 1.95 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಇದೇ ಕಟ್ಟಡದಲ್ಲಿ ಬಂಕಾಪುರ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ ಒಂದು ಅಂತಸ್ತು ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಇ ಫೀಡರ್‌ ಬಸ್‌: ಬಿಎಂಟಿಸಿಗೆ ಮೆಟ್ರೋ ನೆರವು

Advertisement

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ರೈತ ಮುಖಂಡ ಪರ್ವತಪ್ಪ ಬಳಗಣ್ಣವರ, ಪಾಲಿಕೆ ಮಾಜಿ ಸದಸ್ಯರಾದ ಶಿವು ಮೆಣಸಿನಕಾಯಿ, ನಾರಾಯಣ ಜರತಾರಘರ, ಅಲ್ತಾಫ್‌ ಕಿತ್ತೂರು, ಮುಖಂಡರಾದ ಸದಾನಂದ ಡಂಗನವರ, ಅನ್ವರ್‌ ಮುಧೋಳ ಇನ್ನಿತರರಿದ್ದರು.

ಮಹಾನಗರ ವ್ಯಾಪ್ತಿಯಲ್ಲಿ ಹು-ಧಾ ಒನ್‌ ಕೇಂದ್ರಗಳುಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವದೂರುಗಳಿವೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ  ಮಹಾನಗರ ಪಾಲಿಕೆ ಅಧಿಕಾರಿಗಳು ಗಮನಹರಿಸಿ ಪರಿಹಾರ ಕಲ್ಪಿಸುವ ಕೆಲಸ ಆಗಬೇಕು. ಉತ್ತಮವಾಗಿ ನಿರ್ವಹಣೆ ಮಾಡಿದರೆ ಮಾತ್ರ ಕಟ್ಟಡ ನಿರ್ಮಿಸಿರುವುದು ಸಾರ್ಥಕವಾಗುತ್ತದೆ.

ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next