ದೇವನಹಳ್ಳಿ: ನೀರಿನ ಕೊರತೆ ನಡುವೆಯೂ ರೈತರು ಶುಂಠಿ ಬೆಳೆಯಲು ಮುಂದಾಗಿದ್ದು, ಈ ಬಾರಿ ಉತ್ತಮ ಇಳುವರಿಯಿಂದ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ಈ ವರ್ಷ ಪ್ರಸ್ತುತ ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಶುಂಠಿ ಬೆಳೆಗೆ ನೀರುಣಿಸುವುದು ಕಷ್ಟವಾಗುತ್ತಿಲ್ಲ. ಸಕಾಲದಲ್ಲಿ ಮಳೆಯಾಗುತ್ತಿರುವುದರಿಂದ ಈ ಮಧ್ಯೆ 15 ದಿನ ಮಳೆ ಬಂದಿರಲಿಲ್ಲ. ಕಳೆದ 3-4 ದಿನಗಳಿಂದ ಮತ್ತೇ ಮಳೆ ಸುರಿಯುತ್ತಿದೆ. ಸಾಧಾರಣ ಮಳೆಯಾದರೆ ಸಾಕು ಹೆಚ್ಚು ಮಳೆ ಬಂದುಬೆಳೆಯಲ್ಲಿ ನೀರು ತುಂಬಿದರೆ ಬೇರು ಹಾಗೂ ಮಣ್ಣಿನ ತೇವಾಂಶಕ್ಕೆ ಕೊಳೆತು ಹೋಗುತ್ತದೆ. ಇದನ್ನು ಅರಿತು ಶುಂಠಿ ಬೆಳೆ ಜಮೀನಿನಲ್ಲಿ ನೀರು ನಿಲ್ಲದಂತೆ, ಬಸಿ ಕಾಲುವೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ಬೇಡಿಕೆ ಹೆಚ್ಚಳ:ಜಿಲ್ಲೆಯಲ್ಲಿ ಶುಂಠಿ ಬೆಳೆ ಪ್ರಸಕ್ತ ವರ್ಷದಲ್ಲಿ 178 ಎಕರೆಯಲ್ಲಿದೆ. ಕಳೆದ ವರ್ಷ 78 ಎಕರೆಯಲ್ಲಿತ್ತು. ವಾರ್ಷಿಕವಾಗಿ ಶುಂಠಿ ಬೆಳೆ ವಿಸ್ತೀರ್ಣದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಈ ವರ್ಷವೂ ಶುಂಠಿ ಬೆಳೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತೋಟಗಾರಿಕಾ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಪ ನೀರಿನಲ್ಲಿ ಬೆಳೆ: ಶುಂಠಿಯನ್ನು ಈಗಾಗಲೇ ತಾಲೂ ಕಿನಲ್ಲಿ ಅನೇಕ ಕಡೆ ನಾಟಿ ಮಾಡಿ, ಬೆಳೆಯಲು ರೈತರು ಮುಂದಾಗಿದ್ದಾರೆ. ಒಂದು ವರ್ಷದ ಅವಧಿ ನೀರಾವರಿ ಅವಲಂಬಿತ ಶುಂಠಿ ಬೆಳೆ ಬಿತ್ತನೆ ಮಾಡಿ, ಈಗಾಗಲೇ 3 ತಿಂಗಳು ಕಳೆಯುತ್ತಿವೆ. ತಾಲೂಕು ಮತ್ತು ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಪ್ರತಿವರ್ಷ ಕುಸಿಯುತ್ತಿದೆ. 1200 ರಿಂದ 1500 ಅಡಿಗಳಿಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಸ್ಥಿತಿನಿರ್ಮಾಣ ವಾಗಿದೆ. ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ಶುಂಠಿ ಇತರೆ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಮತ್ತೂಂದು ಕಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ಮೇಲೆ ರೈತರ ಜಮೀನು ಬಡಾವಣೆ, ಲೇಔಟ್‌ಗಳ ನಿರ್ಮಾಣಕ್ಕೆ ಮಾರಾಟ ವಾಗುತ್ತಿದೆ. ಉಳಿದ ಭೂಮಿಯಲ್ಲಿಯೇರೈತರು ತರಕಾರಿ, ಇತರೆ ಬೆಳೆ ಬೆಳೆಯುತ್ತಿದ್ದಾರೆ. ಕಳೆದ 6-7 ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಬೆಳೆಯಲು ಪ್ರಾರಂಭಿಸಿದ ರೈತರು, ವಾಣಿಜ್ಯ ಬೆಳೆ, ಸಾಂಬಾರು ಪದಾರ್ಥದಲ್ಲಿ ಪ್ರಮುಖವಾಗಿರುವ ಶುಂಠಿಬೆಳೆಗೆ ಹೆಚ್ಚು ಒತ್ತು ನೀಡಿದ್ದಾರೆ.
ಶುಂಠಿ ಬೆಳೆ ಬೆಳೆಯಲು ಪ್ರಥಮ ಬಾರಿಗೆ ಕೈ ಹಾಕಿದ್ದೇನೆ. 1 ಎಕರೆಗೆ ಶುಂಠಿ ಬೀಜ, ಉಳುಮೆ, ಬಿತ್ತನೆ, ಕೊಟ್ಟಿಗೆ ಗೊಬ್ಬರ, ಕ್ರಿಮಿನಾಶಕ ಸೇರಿ 60 ಸಾವಿರ ರೂ.ವೆಚ್ಚವಾಗಿದೆ. ನಿರೀಕ್ಷೆ ಮೀರಿ ಶುಂಠಿ ಬೆಳೆ ಬರುತ್ತದೆ ಎಂದು ಭಾವಿಸಿದ್ದೇನೆ. 2ಲಕ್ಷ ರೂ.ಲಾಭ ಬರುವ ಸಾಧ್ಯತೆ ಇದೆ.
– ಎಸ್.ಪಿ.ಮುನಿರಾಜು, ಶುಂಠಿ ಬೆಳೆಗಾರ, ಸಾವಕನಹಳ್ಳಿ ಎಂಪಿಸಿಎಸ್ ಅಧ್ಯಕ್ಷ
ರೈತರು ತಾವು ಯಾವ ಬೆಳೆ ಬೆಳೆಯುತ್ತೇವೆಂಬುವುದರ ಬಗ್ಗೆ ತೋಟಗಾರಿಕಾಇಲಾಖೆಯಿಂದ ಮಾಹಿತಿ ನೀಡುತ್ತೇವೆ. ಶುಂಠಿ ಫಸಲು ಉತ್ತಮವಾಗಿ ಬೆಳವಣಿಗೆ ಕಾಣುತ್ತಿದೆ. ಈ ಬೆಳೆಗೆ ಬರುವ ರೋಗ ನಿವಾರಣೆಗೆ ಆಯಾ ತಾಲೂಕಿನ ತೋಟಗಾರಿಕೆ ಅಧಿಕಾರಿಗಳನ್ನುಸಂಪರ್ಕಿಸಿ ಮಾಹಿತಿ ಪಡೆಯಬಹುದು.
–ಮಹಂತೇಶ್ ಮುರುಗೋಡ್, ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ
–ಎಸ್.ಮಹೇಶ್