Advertisement

ರೈತರ ಕೈಹಿಡಿದ ನೆಲಗಡಲೆ ಕದಿರಿ ಲೇಪಾಕಿ ತಳಿ

11:13 AM Nov 06, 2021 | Team Udayavani |

ಬಂಗಾರಪೇಟೆ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಂಧ್ರ ಮೂಲದ ಕದಿರಿ ಲೇಪಾಕ್ಷಿ ಕೆ-1812 ಎಂಬ ತಳಿಯ ನೆಲಗಡಲೆಯನ್ನು ಬಿತ್ತನೆ ಮಾಡಿ, ಉತ್ತಮ ಇಳುವರಿ ಬಂದಿದ್ದು, ತಾಲೂಕಿನ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ರೈತರು ಈಗಾಗಲೇ ಹಲವು ತಳಿಯ ನೆಲಗಡಲೆಯನ್ನು ಬಿತ್ತನೆ ಮಾಡಿದ್ದು, ಅದರಲ್ಲೂ ಹೆಚ್ಚಾಗಿ ಕೆ-6 ತಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ.

Advertisement

ಈ ತಳಿಯು ನಾನಾ ರೋಗಗಳಿಗೆ ತುತ್ತಾಗಿ ಇಳುವರಿ ಯಲ್ಲೂ ಕುಂಠಿತಗೊಳ್ಳುತ್ತದೆ. ಈ ಬಾರಿ ಮುಂಗಾರಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ತೇವಾಂಶ ಹಾಗೂ ರೋಗ ಬಾಧೆ ತಗುಲಿ ಇಳುವರಿ ಸಹ ಕಡಿಮೆಯಾಗಿರುವುದು ಕಂಡುಬಂದಿದ್ದರಿಂದ ಈ ಬಾರಿ ನೆಲಗಡಲೆ ಬಿತ್ತನೆ ಬೀಜವನ್ನು ಬದಲಾವಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕದಿರಿ ಲೇಪಾಕ್ಷಿ ಕೆ-1812 ಎಂಬ ಹೊಸ ತಳಿಯನ್ನು ಪರಿಚಯಿಸಲಾಗಿತ್ತು. ತಾಲೂಕಿನ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತ ವೆಂಕಟಾಚಲಪತಿ ಈ ತಳಿಯನ್ನು ಬೆಳೆದು ಉತ್ತಮ ಇಳುವರಿಯೊಂದಿಗೆ ಯಶಸ್ಸು ಕಂಡಿದ್ದಾರೆ.

ಇದನ್ನೂ ಓದಿ:- ಮಾಸ ಪೂರ್ತಿ ಉಚಿತ ವೈದ್ಯಕೀಯ ಸೇವೆ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿಯಲ್ಲಿನ ಸರ್ಕಾರದ ನೆಲಗಡಲೆ ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸಲಾಗಿರುವ ಕದಿರಿ ಲೇಪಾಕ್ಷಿ ಕೆ-1812 ಎಂಬ ತಳಿ ಆ ಭಾಗದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ. ಈ ತಳಿಯ ವಿಶೇಷ ಏನೆಂದರೆ ಪ್ರತಿ ಗಿಡಕ್ಕೂ 150 ರಿಂದ 200 ಕಾಯಿ ಇಳುವರಿ ಬರುತ್ತದೆ. ಬೇರೆ ತಳಿಗೆ ಹಾಗೂ ಈ ತಳಿಗೂ ವ್ಯತ್ಯಾಸ ನೋಡಿದರೆ ಕದಿರಿ ಲೇಪಾಕ್ಷಿಯಲ್ಲಿ ಮೂರು ಪಟ್ಟು ಇಳುವರಿ ಅಧಿಕವಾಗುತ್ತದೆ.

ಬೆಳೆಯುವ ವಿಧಾನ: ಬಿತ್ತನೆಗೆ ಭೂಮಿಯನ್ನು ಚೆನ್ನಾಗಿ ಹದ ಮಾಡಿಕೊಂಡು, ಈ ತಳಿಯನ್ನು ಬೇರೆ ತಳಿಗಿಂತ ಸ್ವಲ್ಪ ಭಿನ್ನವಾಗಿ 30ಕ್ಕೆ 15 ಸೆ.ಮೀ. ಅಳತೆಯ 4 ರಿಂದ 5 ಸೆ.ಮೀ. ಆಳದಲ್ಲಿ ಸಾಲು ಪದ್ಧತಿಯಲ್ಲಿ ಬಿತ್ತನೆ ಮಾಡಬೇಕು. 110 ರಿಂದ 120 ದಿನಗಳಲ್ಲಿ ಕಟಾವಿಗೆ ಬರುತ್ತದೆ.

Advertisement

ರೋಗ ಬಾಧೆ ಕಡಿಮೆ: ಇತರೆ ನೆಲಗಡಲೆ ಬೆಳೆಗಳಿಗೆ ಹೊಲಿಸಿದರೆ ಈ ತಳಿಗೆ ರೋಗ ತಗುಲುವುದು ಕಡಿಮೆ. ಈ ತಳಿಯಲ್ಲಿ ಎಣ್ಣೆ ಅಂಶ ಹೆಚ್ಚಾಗಿರುತ್ತದೆ. ಪ್ರತಿ ಗಿಡಕ್ಕೂ 150 ರಿಂದ 200 ಕಾಯಿಗಳನ್ನು ಕಟ್ಟಿರುವುದಲ್ಲದೆ ಕಾಯಿ ಸಹ ತುಂಬಾ ಗಟ್ಟಿಯಾದ ಬೀಜದಿಂದ ಕೂಡಿರುತ್ತದೆ. ಕೂಲಿಗಾರರ ಅಭಾವ ದಿಂದ ಗಿಡದ ತಂಬಾ ಕಾಯಿ ಇರುವ ಕಾರಣ ಕಾಯಿ ಬಿಡಿಸಲು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ವೆಂಕಟಾಚಲಪತಿ ತಮ್ಮದೇ ನೂತನ ಮಾರ್ಗದಲ್ಲಿ ತಮ್ಮ ದ್ವಿಚಕ್ರದ ಸಹಾಯದಿಂದ ಕಾಯಿಯನ್ನು ಬಿಡಿಸಿದ್ದಾರೆ. ಇದರಿಂದ ಕೂಲಿಗಾರರ ವೆಚ್ಚ ಹಾಗೂ ಸಮಯವನ್ನು ಕಡಿಮೆ ಮಾಡಿದ್ದಾರೆ.

 “ಆತ್ಮ ಯೋಜನೆಯ ರೈತರ ಕ್ಷೇತ್ರ ಪಾಠ ಶಾಲೆಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕದಿರಿ ಲೇಪಾಕ್ಷಿ ಕೆ-1812 ತಳಿಯನ್ನು ಪರಿಚಯಿಸಲಾಗಿದೆ. ಈ ತಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಎಲೆ ಚುಕ್ಕೆರೋಗ, ತುಕ್ಕು ರೋಗಗಳು ತಗಲುವುದಿಲ್ಲ. ಪ್ರತಿ ಎಕರೆಗೆ 15 ರಿಂದ 20 ಕ್ವಿಂಟಲ್‌ ಇಳುವರಿ ಬರುವುದರಿಂದ ರೈತರಿಗೆ ತುಂಬಾ ಲಾಭದಾಯಕವಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಸಹ ಹೆಚ್ಚಾಗಿದೆ.”

  • ಆಸೀಫ್ವುಲ್ಲಾ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

 “ಕಳೆದ 10 ವರ್ಷಗಳಿಂದಲೂ ನೆಲಗಡಲೇ ಬೆಳೆ ನೋಡದೇ ನಿರುತ್ಸಾಹರಾಗಿದ್ದ ರೈತರಿಗೆ ಈ ಬಾರಿ ಮಳೆಯಾಶ್ರಿತವಾಗಿ ಕದಿರಿ ಲೇಪಾಕ್ಷಿ ಕೆ-1812 ತಳಿ ಬಿತ್ತನೆ ಮಾಡಿರುವುದರಿಂದ ಉತ್ತಮ ಫ‌ಸಲು ಸಿಕ್ಕಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಅಧಿಕವಾಗಿ ಮಳೆ ಬಂದಿದ್ದರಿಂದ ಸ್ವಲ್ಪಮಟ್ಟಿಗೆ ಇಳುವರಿ ಕಡಿಮೆಯಾಗಿದ್ದರೂ ಉತ್ತಮ ಇಳುವರಿ ಸಿಕ್ಕಿರುವುದರಿಂದ ರೈತರಿಗೆ ಸಂತಸ ತಂದಿದೆ.” – ವೆಂಕಟೇಶ್‌, ಕಾರಮಾನಹಳ್ಳಿ, ರೈತ

  • – ಎಂ.ಸಿ.ಮಂಜುನಾಥ್
Advertisement

Udayavani is now on Telegram. Click here to join our channel and stay updated with the latest news.

Next