ನರೇಗಲ್ಲ: ನಾಗರಾಳ ಗ್ರಾಮದ ರೈತರು ಗಜ್ಜರಿ ಬೆಳೆದು ಆರ್ಥಿಕವಾಗಿ ಸೃದಢರಾಗುತ್ತಿದ್ದಾರೆ. ಹೌದು, ಸಮೀಪದ ನಾಗರಾಳ ಗ್ರಾಮದಲ್ಲಿ ಕಳೆದ ಎರಡು ಶತಮಾನಗಳಿಂದ ರೈತರು ಗಜ್ಜರಿ ಬೆಳೆಯುತ್ತ ಬಂದಿರುವುದು ವಿಶೇಷ.
ನಾಗರಾಳ ಸೇರಿದಂತೆ ಕೋಟುಮಚಗಿ, ಯರೇಬೆಲೇರಿ ಹಾಗೂ ನೀರಲಗಿ ಗ್ರಾಮಗಳಲ್ಲೂ ಅಂದಾಜು ಎರಡು ತಲೆಮಾರಿನಿಂದಲೂ ಗಜ್ಜರಿ ಬೆಳೆಯಲಾಗುತ್ತಿದೆ. ಆದರೆ, ಯರೇಬೇಲೇರಿ ಹಾಗೂ ನೀರಲಗಿ ಗ್ರಾಮಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಹಿಂದೆಲ್ಲ ಇಲ್ಲಿನವರು ಜವಾರಿ ಗಜ್ಜರಿ ಬೆಳೆಯುತ್ತಿದ್ದರು. ಈಗ ಕಾರಣಾಂತರಳಿಂದ ಜವಾರಿ ಗಜ್ಜರಿಗೆ ಗುಡ್ ಬಾಯ್ ಹೇಳಿದ್ದಾರೆ. ಜವಾರಿ ಗಜ್ಜರಿ ನೋಡಲು ಚಿಕ್ಕದಾದರೂ ತಿನ್ನಲು ಬಹಳಷ್ಟು ರುಚಿಕರವಾಗಿತ್ತು. ಆದರೆ, ಇಳುವರಿ ಕಡಿಮೆ. ಹೀಗಾಗಿ ರೈತರು ಜವಾರಿ ಗಜ್ಜರಿ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ.
ಗಜ್ಜರಿ ಮಾರಾಟ: ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಗದಗ, ಗಜೇಂದ್ರಗಡ, ಕೊಪ್ಪಳ, ಗಂಗಾವತಿ, ಬಾದಾಮಿ, ಧಾರವಾಡ, ಚಿಕ್ಕಮಗಳೂರು, ಉಡುಪಿ, ಬೆಂಗಳೂರು, ಬಳ್ಳಾರಿ, ರೋಣ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳ ಪ್ರಮುಖ ತರಕಾರಿ ಮಾರುಕಟ್ಟೆಗಳಿಗೆ ಮಾತ್ರ ಹೆಚ್ಚಾಗಿ ಗಜ್ಜರಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕ್ರಮೇಣವಾಗಿ ಈ ಗ್ರಾಮದಲ್ಲಿ ನೀರಾವರಿ ಪ್ರದೇಶ ಹೆಚ್ಚಾಗಿರುವುದರಿಂದ ಗಜ್ಜರಿ ಕೃಷಿ ಕೈಗೊಳ್ಳುತ್ತ ಬಂದ ರೈತರು ವರ್ಷಕ್ಕೆ ಮೂರು ಬೆಳೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಉಪ್ಪು ನೀರಿನಿಂದ ಸಿಹಿ ಗಜ್ಜರಿ: ನಾಗರಾಳ ಗಜ್ಜರಿ ಹೆಸರುವಾಸಿಯಾಗಲು ಅನೇಕ ಕಾರಣಗಳಿವೆ. ವಿಶೇಷವಾಗಿ, ಇಲ್ಲಿನ ಉಪ್ಪು ನೀರಿನ ಅಂತರ್ಜಲದ ಮೂಲವೇ ಕಾರಣವಾಗಿದೆ. ಉಪ್ಪಿನಂಶದ ನೀರಿನಿಂದ ಕೈಗೊಳ್ಳುವ ವ್ಯವಸಾಯದ ಫಲವೇ ಅತ್ಯಂತ ಸಿಹಿ ಮತ್ತು ಕೆಂಪು ಗಜ್ಜರಿ ಇಳುವರಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪು ನೀರಿನಿಂದ ಕೈಗೊಳ್ಳುವ ಪ್ರತಿಯೊಂದು ವ್ಯವಸಾಯದ ಯಾವುದೇ ಫಸಲುಸವಳು ಕಾಣುವುದನ್ನು ಕೇಳಿದ್ದೇವೆ ಆದರೆ, ಇಲ್ಲಿನ ಗಜ್ಜರಿ ಮಾತ್ರ ಉಪ್ಪು ನೀರಿನ ವ್ಯವಸಾಯದಿಂದಲೂ ಅತ್ಯಂತ ಸಿಹಿಯಿಂದ ಕೂಡಿರುವುದು ವಿಶೇಷವಾಗಿದೆ. ನಾಗರಾಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಜಮೀನಿನ ಮಣ್ಣಿನ ಫಲವತ್ತತೆಯೂ ಇದಕ್ಕೆ ಕಾರಣ ಎಂದು ರೈತರ ಅಭಿಪ್ರಾಯವಾಗಿದೆ.
ಗಜ್ಜರಿ ಸಮಗ್ರ ಬೇಸಾಯ: ಹದ ಮಾಡಿಕೊಂಡ ಜಮೀನಿನಲ್ಲಿ ಆಯ್ದ ಗಡ್ಡೆಗಳಿಂದ ಗಜ್ಜರಿ ಬೀಜವನ್ನುರೈತರೇ ತಯಾರಿಸಿಕೊಂಡು ಒಣ ಭೂಮಿಗೆ ಹರಡುತ್ತಾರೆ. ಮುಂಗಾರು ಮತ್ತು ಹಿಂಗಾರು ಎರಡೂ ಸೀಜನ್‌ನಲ್ಲಿ ಗಜ್ಜರಿ ಬೆಳೆಯುವ ಈ ಪ್ರದೇಶದಲ್ಲಿ ಮುಂಗಾರಿನಲ್ಲಿ ಅತಿ ಮಳೆಯಾದರೆ, ಕಡಿಮೆ ಇಳುವರಿಯಾಗುವ ಸಾಧ್ಯತೆಯೇ ಹೆಚ್ಚು. ಗಡ್ಡೆಗಳನ್ನು ಭೂಮಿಯಲ್ಲಿ ಗೊರಲಿ ಹುಳು ತಿನ್ನುವುದನ್ನು ಬಿಟ್ಟರೆ, ಬೆಳೆಗೆ ಅಂತಹ ಯಾವುದೇ ರೋಗಗಳು ಹರಡುವುದು ಕಡಿಮೆ. ಗೊರಲಿ ಹುಳು ನಿಯಂತ್ರಣಕ್ಕೆ ಬೀಜೋಪಚಾರದ ಜತೆಗೆ, ಕೆಲವೊಮ್ಮೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಕ್ರಿಮಿನಾಶಕ ಸಿಂಪರಣೆಗೆ ಮುಂದಾಗುತ್ತಾರೆ.
ಅವಧಿ-ಲಾಭ: ಗಜ್ಜರಿ ಬಿತ್ತನೆ ಮಾಡಿದ 3 ತಿಂಗಳೊಳಗಾಗಿ ಕೈಗೆ ಪೈರು ಬರುತ್ತದೆ. ಎಕರೆಗೆ ಅಂದಾಜು30 ರಿಂದ 40 ಕ್ವಿಂಟಲ್ ವರೆಗೂ ಬರುತ್ತದೆ. ಮಾರುಕಟ್ಟೆಯಲ್ಲಿ ಸೀಜನ್ ಅನುಸಾರವಾಗಿ ದರ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲೂ ಕ್ವಿಂಟಲ್‌ಗೆ 2 ರಿಂದ 3 ಸಾವಿರ ರೂ.ವರೆಗೆ ದರ ಪಡೆಯಲಾಗುತ್ತಿದೆ. ವರ್ಷಕ್ಕೆ ಕನಿಷ್ಟ ಆದರೂ ಒಂದು ಬೆಳೆಗೆ 3 ರಿಂದ 4 ಲಕ್ಷ ರೂ.ವರೆಗೂ ಲಾಭವಿದೆ.
ಕಳೆದ ಐದು ವರ್ಷದಿಂದ ಗಜ್ಜರಿ ಬೆಳೆಯುತ್ತಿದ್ದೇವೆ. ಉತ್ತಮ ಲಾಭ ಬಂದಿರುವುದರಿಂದ ನಮಗೆ ಗೊತ್ತಿರುವ ರೈತರಿಗೂ ಸಹ ಗಜ್ಜರಿ ಬೆಳೆಯಲು ಹೇಳಲಾಗುತ್ತಿದೆ. ಕೆಲವೊಂದು ಗ್ರಾಮದಲ್ಲಿ ಗಜ್ಜರಿ ಬೆಳೆದು ಯಶಸ್ಸು ಕಂಡಿದ್ದಾರೆ. ಆದರೆ, ಬೇರೆ ಗ್ರಾಮಗಳಲ್ಲಿ ಬೆಳೆ ಗಜ್ಜರಿ ಬೆಳೆ ಅಲ್ಲಿನ ರೈತರಿಗೆ ಕೈ ಕೊಟ್ಟಿದೆ. ಸದ್ಯ ಗಜ್ಜರಿ ಬೆಳೆಯಲ್ಲಿ ಉತ್ತಮ ಆದಾಯ ಬರುತ್ತಿದೆ.
-ಅಲ್ಲಾಬಕ್ಷ ಓಲೇಕಾರ, ನಾಗರಾಳ ರೈತ.
-ಸಿಕಂದರ ಎಂ. ಆರಿ