ಧಾರವಾಡ: ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಎಂಬ ಪೆಡಂಭೂತ ತನ್ನ ಕಬಂಧ ಬಾಹುಗಳನ್ನು ಉತ್ತರ ಕರ್ನಾಟಕಕ್ಕೂ ಚಾಚುತ್ತಿರುವುದು ಕೃಷಿ ಮೇಳದಲ್ಲಿ ಕಂಡು ಬಂತು. ರೈತರೊಂದಿಗೆ ಗುತ್ತಿಗೆ ಮಾಡಿಕೊಳ್ಳುವ ಹಲವಾರು ಕಂಪನಿಗಳು ರೈತರಿಗೆ ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಪರಿಚಯಿಸಿದ್ದು ವಿಶೇಷವಾಗಿತ್ತು.
ಈಗಾಗಲೇ ಗುತ್ತಿಗೆ ಕೃಷಿ ಪದ್ಧತಿ ನಮ್ಮಲ್ಲಿ ಅನುಷ್ಠಾನದಲ್ಲಿದೆ. ವ್ಯಕ್ತಿ ಆಧಾರಿತ ಪದ್ಧತಿ ಇದಾಗಿದೆ. ಆದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯೀಕರಣಗೊಳಿಸುವ ಉದ್ದೇಶದಿಂದ ಹಲವು ಕಂಪನಿಗಳು ರೈತರನ್ನು ಹೊಸ ಪದ್ಧತಿಗೆ ಅಣಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದವು. ಒಪ್ಪಂದ ಪತ್ರದಿಂದ ಯಾವುದೇ ಸಮಸ್ಯೆಯಾಗಲ್ಲ ಎಂದು ರೈತರಲ್ಲಿ ಆಸಕ್ತಿ ಮೂಡಿಸುತ್ತಿದ್ದವು.
ನೇರವಾಗಿ ಗುತ್ತಿಗೆ ಕೃಷಿ ಎಂದು ಹೇಳದೇ ನಿರ್ವಹಣೆ ಮಾಡುವುದಾಗಿ ಹೇಳಿಕೊಂಡ ಹಲವು ಸಂಸ್ಥೆಗಳು ರೈತರನ್ನು ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಕಡೆಗೆ ಒಲಿಸಿಕೊಳ್ಳುತ್ತಿದ್ದುದು ಕಂಡು ಬಂತು. ಇದಕ್ಕೆ ಕಾರ್ಪೋರೇಟ್ ಟಚ್ ನೀಡಿದ್ದರಿಂದ ವಿದ್ಯಾವಂತ ಯುವ ಕೃಷಿಕರು ಇವರ ಟಾರ್ಗೆಟ್ ಎಂಬುದು ಸ್ಪಷ್ಟವಾಗಿತ್ತು. ಅಪ್ಲಿಕೇಶನ್ ಆಧಾರಿತ ಕೃಷಿ, ವಿದೇಶಗಳ ನೂತನ ತಂತ್ರಜ್ಞಾನ ಬಳಕೆ, ಸಂಸ್ಥೆಯ ಸಂಶೋಧನೆ, ಡಾಟಾ ಸಂಗ್ರಹ ಮೊದಲಾದ ಮಾಹಿತಿಯನ್ನು ರೈತರಿಗೆ ಮೊಬೈಲ್‌ನಲ್ಲಿ ತೋರಿಸಲಾಗುತ್ತಿತ್ತು.
ಮೊದಲೇ ರೈತರು ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ಕೃಷಿ ವೆಚ್ಚ, ಆತಿವೃಷ್ಟಿ, ಅನಾವೃಷ್ಟಿಯಿಂದ ಬೇಸತ್ತಿದ್ದಾರೆ. ಹಲವು ಕಾರಣಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜಮೀನು ನಿರ್ವಹಣೆ ಹೆಸರಿನಲ್ಲಿ ಗುತ್ತಿಗೆ ಮಾಡಿಕೊಳ್ಳುವ ಹಲವು ಸಂಸ್ಥೆಗಳು ವಿವಿಧ ರೂಪದಲ್ಲಿ ಕಂಡು ಬಂದವು. ಕೆಲವರು ಅರಣ್ಯ ಕೃಷಿ ಹೆಸರಿನಲ್ಲಿ, ಇನ್ನು ಕೆಲವರು ಹಣ್ಣು, ಆಯುರ್ವೇದ ಸಸ್ಯಗಳ ಹೆಸರಿನಲ್ಲಿ ರೈತರ ಭೂಮಿ ಪಡೆಯಲು ಪ್ರಚಾರ ನಡೆಸಿದವು.
ಈಗಾಗಲೇ ಕಾಂಟ್ರ್ಯಾಕ್ಟ್ ಫಾರ್ಮಿಂಗ್‌ನಿಂದ ಉತ್ತರ ಭಾರತದಲ್ಲಿ ಸಹಸ್ರಾರು ಎಕರೆ ಜಮೀನು ಬಂಜರಾಗಿದೆ. ಗುತ್ತಿಗೆ ಅವಧಿ ಮುಗಿಯುವವರೆಗೆ ರೈತರದ್ದು ಭೂಮಿಯ ಮೇಲೆ ಯಾವುದೇ ಹಕ್ಕು ಇರದಿರುವುದರಿಂದ ದೇಶ-ವಿದೇಶಗಳ ಹಣ್ಣು-ಹೂವು ಬೆಳೆಯಲು ಅಪಾರ ಪ್ರಮಾಣದಲ್ಲಿ ರಾಸಾಯನಿಕ ಬಳಸುವುದರಿಂದ ಭೂಮಿಯಫಲವತ್ತತೆ ಹಾಳಾಗಿದೆ. ಹಣದ ಆಸೆಯಿಂದ ಭೂಮಿಯನ್ನು ಸಂಸ್ಥೆಗಳಿಗೆ ನೀಡಿದ ರೈತರು ಈಗ ಪರಿತಪಿಸುತ್ತಿದ್ದಾರೆ. ಇನ್ನು ಕೆಲವೆಡೆ ರೈತರಿಗೆ ಗುತ್ತಿಗೆಯಲ್ಲಿ ನಮೂದಿತವಾದ ಹಣ ಸಿಗದಿದ್ದರಿಂದ ಹಲವಾರು ರೈತರು ತೊಂದರೆ ಅನುಭವಿಸುವಂತಾಗಿದೆ.
ಅರಣ್ಯ ಕೃಷಿಯಿಂದ ಲಾಭವಿದೆ. ಅರಣ್ಯ ಕೃಷಿಯಿಂದ ಬೆಲೆ ಬಾಳುವ ಶ್ರೀಗಂಧ, ರಕ್ತಚಂದನ, ತೇಗ, ಮಹಾಘನಿ ಅಲ್ಲದೇ ಮಲೇಶಿಯಾ ಟೀಕ್ ಸೇರಿದಂತೆ ವಿವಿಧ ಸಸಿಗಳನ್ನು ನೀಡಿ ಅವುಗಳನ್ನು ನಿರ್ವಹಣೆ ಮಾಡಿ ಬೆಳೆಸಲಾಗುವುದೆಂದು ಕೆಲವು ಸಂಸ್ಥೆಗಳು ಪ್ರಚಾರ ಮಾಡುತ್ತಿದ್ದರೆ, ಇನ್ನು ಕೆಲವು ಸಂಸ್ಥೆಗಳು ವಿದೇಶಗಳ ಹಣ್ಣುಗಳನ್ನು ಬೆಳೆಯಲು ಭೂಮಿ ಬಳಸಿಕೊಳ್ಳುವುದಾಗಿ ಹೇಳುತ್ತಿದ್ದವು. ರೈತರಿಗೆ ಆದಾಯದ ಬಗ್ಗೆ ತಿಳಿಸಲಾಗುತ್ತಿತ್ತೇ ಹೊರತು ಭೂಮಿಯ ಗುಣದ ಬಗ್ಗೆ ಹೇಳಲಿಲ್ಲ.
ಕೃಷಿಯಿಂದ ಬೇಸತ್ತ ಹಲವು ರೈತರು ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಕೃಷಿ ಬಗ್ಗೆ ಆಸಕ್ತಿ ತೋರಿದ್ದು ಕಂಡು ಬಂತು. ನಗರ ಪ್ರದೇಶಗಳ ಸುತ್ತಮುತ್ತಲಿನ ಯುವ ರೈತರು ಇಂಥ ಸ್ಟಾಲ್‌ಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು. ರೈತರನ್ನು ಹೊರಗಿಟ್ಟು ಕೃಷಿ ಮಾಡಿದರೆ ರೈತರು ಒಪ್ಪಲ್ಲ ಎಂಬ ಕಾರಣಕ್ಕೆ ರೈತರಿಗೆ ತಂತ್ರಜ್ಞಾನ, ಪೂರಕ ಮಾಹಿತಿ, ಬೆಳೆಯುವ ವಿಧಾನ, ಸೂಕ್ತ ಮಾರ್ಗದರ್ಶನ ನೀಡುವುದಾಗಿ ಹೇಳುತ್ತ ರೈತರ ಮನವೊಲಿಸಲು ಕಂಪನಿಗಳ ಪ್ರತಿನಿಧಿಗಳು ಯತ್ನಿಸುತ್ತಿದ್ದರು. ಪರದೆಯ ಮೇಲೆ ವಿವಿಧ ಜಮೀನುಗಳಲ್ಲಿ ಬೆಳೆದ ಬೆಳೆಗಳು, ಯಂತ್ರಗಳ ಬಳಕೆ, ಇಳುವರಿ ಕುರಿತಾದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.
-ವಿಶ್ವನಾಥ ಕೋಟಿ