Advertisement

ರೈತರ ಆತ್ಮಹತ್ಯೆ ರಾಜಕೀಯ ಜಟಾಪಟಿ

06:00 AM Sep 23, 2018 | |

ಪಾಂಡವಪುರ/ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಘೋಷಣೆಯ ನಡುವೆಯೇ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ರೈತನ ಕುಟುಂಬವೊಂದು ಸರಣಿ ಆತ್ಮಹತ್ಯೆಗೆ ಶರಣಾಗಿದೆ. ಈ ಹಿಂದೆ ಮುಖ್ಯಮಂತ್ರಿಯವರ ಜನತಾದರ್ಶನದಲ್ಲಿ ಸಹಾಯಯಾಚಿಸಿದ್ದ ನಂದೀಶ್‌ ಎಂಬುವರು, ಸಿಎಂ ಅವರನ್ನು ಉದ್ದೇಶಿಸಿ ಆತ್ಮಹತ್ಯಾ ಪತ್ರ ಬರೆದಿಟ್ಟು ಕುಟುಂಬ ಸದಸ್ಯರ ಜತೆ ಸಾವಿಗೆ ಶರಣಾಗಿದ್ದಾರೆ.

Advertisement

ಈ ರೈತ ಕುಟುಂಬದ ಸಾವು ರಾಜಕೀಯವಾಗಿಯೂ ಭಾರೀ ಸದ್ದು ಮಾಡಿದೆ. ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು, ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದ್ದು, ಟೆಂಪಲ್‌ ರನ್‌ ಬಿಟ್ಟು ರೈತರ ಸಮಸ್ಯೆ ನಿವಾರಿಸಿ ಎಂದು ಆಗ್ರಹಿಸಿದ್ದಾರೆ.

ಊಟಕ್ಕೆ ವಿಷ ಮಿಶ್ರಣ ಮಾಡಿ ಆತ್ಮಹತ್ಯೆ: ಶುಕ್ರವಾರ ರಾತ್ರಿ ರೈತ ನಂದೀಶ್‌, ಪತ್ನಿ ಕೋಮಲಾ (30), ಮಗಳು ಚಂದನಾ (13), ಮಗ ಮನೋಜ್‌(11) ಮಾಂಸಾಹಾರಕ್ಕೆ ವಿಷ ಮಿಶ್ರಣ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರೈತ ನಂದೀಶ್‌ ವ್ಯವಸಾಯವನ್ನೇ ಬದುಕಾಗಿಸಿಕೊಂಡು ಜೀವನ ಸಾಗಿಸುತ್ತಿದ್ದು, ತೀವ್ರ ಬರಗಾಲ ಮತ್ತು ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಬ್ಯಾಂಕ್‌ ಮತ್ತು ಖಾಸಗಿ ಲೇವಾದೇವಿದಾರರ ಬಳಿ ಲಕ್ಷಾಂತರ ರೂ. ಸಾಲ ಮಾಡಿದ್ದರು, ಸಾಲಗಾರರು ಸಾಲ ಮರುಪಾವತಿಸುವಂತೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಈ ಹಾದಿ ಹಿಡಿದಿದ್ದಾರೆ.
ನಂದೀಶ್‌ ಅವರು ಸುಂಕಾತೊಣ್ಣೂರು ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ 4 ಲಕ್ಷ, ಖಾಸಗಿ ಲೇವಾದೇವಿದಾರರಿಂದ 5 ಲಕ್ಷ ಹಾಗೂ ಜಮೀನು ನಂಬಿಕೆ ಕ್ರಯ ಮಾಡಿ 11 ಲಕ್ಷ ರೂ. ಸೇರಿದಂತೆ 20 ಲಕ್ಷದವರೆಗೆ ಸಾಲ ಮಾಡಿದ್ದರು.

ಜನತಾದರ್ಶನದಲ್ಲಿ ಸಿಎಂಗೆ ಮನವಿ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜನತಾದರ್ಶನ ಕಾರ್ಯಕ್ರಮಕ್ಕೆ ತೆರಳಿದ್ದ ಮೃತ ರೈತ ನಂದೀಶ್‌, ಸಾಲಗಾರರ ಒತ್ತಡ ತೀವ್ರವಿದ್ದು, ಸಾಲದಿಂದ  ಮುಕ್ತಿಗೊಳಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಕುಮಾರಸ್ವಾಮಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಮೃತ ರೈತನ ಸಾಲದ ಮಾಹಿತಿ ಪಡೆಯಲಾಗಿತ್ತು. ಆದರೆ, ಇದುವರೆಗೆ ಪರಿಹಾರ ಸಿಕ್ಕಿರಲಿಲ್ಲ.

ಟೆಂಪಲ್‌ ರನ್‌ ಬಿಡಿ, ರೈತರ ಸಂಕಷ್ಟ ನಿವಾರಿಸಿ
ರಾಜ್ಯದ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ದೇವಾಲಯಗಳನ್ನು ಸುತ್ತುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದರ ಪಕ್ಷಗಳ ವೈಫ‌ಲ್ಯ ಮುಚ್ಚಿಕೊಳ್ಳಲು ವಿರೋಧ ಪಕ್ಷ ಬಿಜೆಪಿ ಮೇಲೆ ಅನಗತ್ಯ ಮುಖ್ಯಮಂತ್ರಿಯವರು ಆಪಾದನೆ ಮಾಡುತ್ತಾರೆ. ರೈತರು ಮತ್ತು ಜನರ ಸಮಸ್ಯೆ ಬಗೆಹರಿಸಲು ವಿಫ‌ಲವಾಗಿರುವ ಬಗ್ಗೆ ನಾವು ಟೀಕಿಸಿದರೆ ಸರ್ಕಾರ ಅಸ್ಥಿರತೆ ಪ್ರಯತ್ನ ಆಗುತ್ತಿದೆ ಎಂದು ಜನರ ದಾರಿ ತಪ್ಪಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಜನರ ಮತ್ತು ರೈತರ ಇಂದಿನ ಪರಿಸ್ಥಿತಿ “ರೋಮ್‌ ಸಾಮ್ರಾಜ್ಯ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಭಾರಿಸುತ್ತಿದ್ದ’ ಎಂಬಂತಿದೆ ಎಂದು ಲೇವಡಿ ಮಾಡಿದ್ದಾರೆ.

Advertisement

ಮಂಡ್ಯ ಜಿಲ್ಲೆ ಪಾಂಡವರಪುರ ತಾಲೂಕಿನ ಸುಂಕತೊನ್ನೂರು ಗ್ರಾಮದಲ್ಲಿ ರೈತ ನಂದೀಶ್‌ ಅವರ ಪತ್ನಿ ಹಾಗೂ ಇಬ್ಬರ ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ಜವಾಬ್ದಾರಿ ಯಾರು? ಎಂದು ನಾನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರನ್ನು ನೇರವಾಗಿ ಕೇಳುತ್ತೇನೆ ಎಂದು ಹೇಳಿದ್ದಾರೆ.

ಕೃಷಿ ಕುಟುಂಬದ ಮರಣವು ಕುಮಾರಸ್ವಾಮಿ ಸರ್ಕಾರ ಜನರ ಅಗತ್ಯತೆ ಪೂರೈಸಲು ವಿಫ‌ಲವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.  ಈ ಸರ್ಕಾರ ಘೋಷಿಸಿದ ಕೃಷಿ ಸಾಲ ಮನ್ನಾ ಯೋಜನೆಯು ಸುಳ್ಳಿನ ಕಂತೆ ಎಂಬುದು ಇದರಿಂದ ತಿಳಿಯುತ್ತದೆ. ಸಾಲ ಮನ್ನಾ ಯೋಜನೆ ನಿಜವಾಗಿದ್ದರೆ ಇನ್ನೂ ಕೂಡ ರೈತರು ಏಕೆ ಸಾವನ್ನಪ್ಪುತ್ತಿದ್ದಾರೆ? ಈ ರೈತರ ಆತ್ಮಹತ್ಯೆಯನ್ನು ಏಕೆ ತಡೆಯಲಾಗುತ್ತಿಲ್ಲ? ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿವರೆಗೆ 50 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಮತ್ತು ಪರಿಹಾರ ಏನು ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಯವರೇ ಈಗಲಾದರೂ ನನ್ನ ಹಾಗೂ ಬಿಜೆಪಿ ವಿರುದ್ಧ ಮಾತನಾಡುವ ಕ್ಷುಲ್ಲಕ ರಾಜಕೀಯ ನಿಲ್ಲಿಸಿ. ರಾಜ್ಯದ 18 ಜಿಲ್ಲೆಗಳಲ್ಲಿ ಬರ ಬಂದಿದೆ. ಇನ್ನಾದರೂ ನಿಮ್ಮ ರಾಜಕೀಯ ತಂತ್ರಗಾರಿಕೆಗೆ ವಿರಾಮ ನೀಡಿ, ಬಡವರು ಮತ್ತು ರೈತರ ಪರ ಕಾಳಜಿ ತೋರಿಸಿ ಎಂದು ಆಗ್ರಹಿಸಿದ್ದಾರೆ.

ಆತ್ಮಹತ್ಯೆ ಪತ್ರದಲ್ಲೇನಿದೆ?
ರಿಗೆ,
ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ
ಈ ಹಿಂದೆ ನನ್ನ ಸಮಸ್ಯೆಯನ್ನು ನಿಮಗೆ ತಿಳಿಸಿದ್ದೆ ಆಗಂತ ನಾವು ಹೇಡಿ ತರ ಸಾಯುತ್ತಿಲ್ಲಾ ಸತ ಪ್ರಯತ್ನ ಮಾಡಿಯೂ ಬಗೆಹರಿಸಿಕೊಳ್ಳಲಾಗದ ಸಮಸ್ಯೆಯಿಂದ ಇಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ನಿಮಗೆ ವಿನಂತಿಸುವುದೇನೆಂದರೆ ನಮ್ಮೆಲ್ಲರ ಕೊನೆ ಆಸೆ. ಪ್ಲೀಸ್‌ ನಮ್ಮೆಲ್ಲರ ಶವಗಳನ್ನು ಯಾರೂ ಮುಟ್ಟದ ಹಾಗೆ ಕಾರ್ಪೋರೇಶನ್‌ಗೆ ಒಪ್ಪಿಸಿ ಬಿಡಿ ಪ್ಲೀಸ್‌ ಇದು ನಮ್ಮ ಕೊನೆ ಆಶೆ.
             ಇಂತಿ ನಂದೀಶ,ಕೋಮಲಾ,ಚಂದನ ಮನೋಜ್‌ ನಮ್ಮೆಲ್ಲರ ಸಾವಿಗೆ ಈ ವ್ಯವಸಾಯನೇ ಕಾರಣ, ಬೇರೆ ಯಾರೂ ಅಲ್ಲಾ

ಧೈರ್ಯ ಹೇಳಿದ್ದರೂ ಆತ್ಮಹತ್ಯೆ
ಚಿಕ್ಕಮಗಳೂರು:
ರೈತ ನಂದೀಶ್‌ ಕುಟುಂಬದ ನಾಲ್ವರ ಆತ್ಮಹತ್ಯೆಯನ್ನು ನೋವಿನ ವಿಚಾರ ಎಂದು ಕರೆದಿರುವ ಸಿಎಂ ಕುಮಾರಸ್ವಾಮಿ, ಧೃತಿಗೆಡಬೇಡಿ ಎಂದರೂ ಸಾವಿಗೆ ಶರಣಾಗಿದ್ದಾರೆ ಎಂದು ಕಂಬನಿ ಮಿಡಿದಿದ್ದಾರೆ. ಈ ಹಿಂದೆ ಜನತಾದರ್ಶನದಲ್ಲಿ ಭೇಟಿಯಾಗಿ ಮನವಿ ಮಾಡಿದ್ದರು.  15 ಲಕ್ಷ ರೂ. ಖಾಸಗಿಯವರಿಂದ ಸಾಲ ಮಾಡಿರುವುದಾಗಿ ಹೇಳಿದ್ದರು. ಅವರಿಗೆ ಧೃತಿಗೆಡಬೇಡಿ. ಇದಕ್ಕೆ ನಿಯಂತ್ರಣ ಹಾಕಲು ಕಾನೂನು ಜಾರಿಗೆ ತರಲಾಗುವುದು ಎಂದು ಧೈರ್ಯ ಹೇಳಿದ್ದೆ. ಆದರೂ ನನ್ನ ಹೆಸರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ನೋವು ಮಿಡಿದಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಖಾಸಗಿಯಾಗಿ ಸಾಲ ನೀಡುವುದನ್ನು ತಡೆಗಟ್ಟಲು ಕಾಯ್ದೆ ತರಲು ಮುಂದಾಗಿದ್ದೇವೆ. ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿ ರಾಷ್ಟ್ರಪತಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮಾನ್ಯ ಮುಖ್ಯಮಂತ್ರಿಯವರೇ ಪ್ರಾಮಾಣಿಕವಾಗಿ ಹೇಳಿ, ತಾವು ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ರೈತರ ಸಮಸ್ಯೆಗಳನ್ನು ಚರ್ಚಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದೀರಾ?  ಇಂದು ಮರಣ ಹೊಂದಿದ ರೈತ ನಂದೀಶ್‌ ಡೆತ್‌ನೋಟ್‌ನಲ್ಲಿ ತನ್ನ ಸಾಲಗಳಿಂದ ಪರಿಹಾರ ಪಡೆಯಲು ಎರಡು ಬಾರಿ ತಮ್ಮನ್ನು ಭೇಟಿ ಮಾಡಿದ್ದೇನೆಂದು ಬಹಿರಂಗಪಡಿಸಿದ್ದಾರೆ. ಅವರ ಆತ್ಮಹತ್ಯೆಗೆ ನೀವೇ ಕಾರಣ ಎಂದು ಏಕೆ ಆರೋಪಿಸಬಾರದು. ನಿಮ್ಮ ಉದಾಸೀನತೆಯಿಂದ  ಈ ಸಾವು ಸಂಭವಿಸಿಲ್ಲವೇ?
– ಬಿ.ಎಸ್‌.ಯಡಿಯೂರಪ್ಪ

ಸಾಯುವವರನ್ನು ನಾವು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ರೈತರು ಗೊತ್ತಿಲ್ಲದಂತೆ ವಿಷ ಕುಡಿದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಏನು ಮಾಡುವುದಕ್ಕಾಗುವುದಿಲ್ಲ.
– ಎಂ.ಸಿ.ಮನಗೂಳಿ, ತೋಟಗಾರಿಕಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next