ರಬಕವಿ-ಬನಹಟ್ಟಿ: ತೇರದಾಳದ ಸಕ್ಕರೆ ಕಾರ್ಖಾನೆಗೆ 2018-19 ರಲ್ಲಿ ಕಬ್ಬು ಪೂರೈಕೆ ಮಾಡಿದ 1628 ಜನ ರೈತರ ಒಟ್ಟು ಬಾಕಿ 19,54,66,660 ರೂ. ಹೊಂದಿದ ಪಟ್ಟಿಯನ್ನು ಕಾರ್ಖಾನೆಯ ಆಡಳಿತ ಮಂಡಳಿಯವರು ತಹಶೀಲ್ದಾರ್ ಕಾರ್ಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ಪಟ್ಟಿಯನ್ನು ರಬಕವಿ ಬನಹಟ್ಟಿ ತಹಶೀಲ್ದಾರ್, ತೇರದಾಳದ ವಿಶೇಷ ತಹಶೀಲ್ದಾರ್ ಕಾರ್ಯಾಲಯ ಮತ್ತು ಸಾವರಿನ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಲಗತ್ತಿಸಲಾಗಿದೆ. ಸಂಬಂಧಪಟ್ಟ ರೈತರು ಈ ಕುರಿತು ತಮ್ಮ ಬಾಕಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ ಹೇಳಿದರು.
ಸ್ಥಳೀಯ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ತೇರದಾಳದ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಕಬ್ಬು ಪೂರೈಕೆ ಮಾಡಿದ ರೈತರು ಲಿಖೀತ ರೂಪದಲ್ಲಿ ಮತ್ತು ಅಗತ್ಯವಾದ ದಾಖಲೆಗಳ ಜತೆಗೆ ಫೆ. 18ರಿಂದ 24 ಸಂಜೆ 5.30ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ನಂತರ ಬಂದ ಆಕ್ಷೇಪಣೆ ಪರಿಗಣಿಸಲಾಗುವುದಿಲ್ಲ. ಇನ್ನೂ ರೈತರ ಕಬ್ಬು ಕಟಾವು ಮತ್ತು ಸಾಗಾಣಿಕೆಗೆ ಸಂಬಂಧಪಟ್ಟಂತೆ 308 ಜನ ರೈತರ ರೂ. 51,33,216 ಬಿಡುಗಡೆ ಮಾಡಿದೆ. ಕಬ್ಬು ಪೂರೈಕೆ ಮಾಡಿದ ರೈತರಿಗೆ ಎಫ್ ಆರ್ ಪಿ ಬೆಲೆಯ ಪ್ರಕಾರ 2613 ರೂ. ನೀಡಲಾಗಿದ್ದು, ಇದರಲ್ಲಿ ಕಬ್ಬು
ಕಟಾವು ಮತ್ತು ಸಾಗಾಣಿಕೆಯ ಹಣ 613 ರೂ.ಕಡಿತಗೊಳಿಸಿ ಉಳಿದ ಹಣ ನೀಡಲಾಗುವುದು. ರೈತರ ಹಣವನ್ನು ಕರ್ನಾಟಕ ಅಪೆಕ್ಸ್ ಬ್ಯಾಂಕ್‌ನವರು ಜಮಖಂಡಿಯ ಉಪವಿಭಾಗಾಧಿಕಾರಿಗಳ ಖಾತೆಗೆ ಜನವರಿ 27ರಂದು ಹಣವನ್ನು ಠೇವಣಿ ಮಾಡಿದ್ದಾರೆ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.
ರೈತ ಮುಖಂಡರು ಸರ್ಕಾರ ನಿಗದಿ ಮಾಡಿದ ಬೆಲೆಗೆ ಸಮ್ಮತಿ ಇಲ್ಲ. ನಾವು ಶೀಘ್ರ ಕಬ್ಬು ಪೂರೈಕೆ ಮಾಡಿದ ರೈತರ ಸಭೆ ಕರೆಯುತ್ತೇವೆ. ಅಲ್ಲಿ ಬಿಲ್ ಕುರಿತು ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪತ್ರಿಕೆಗೆ ತಿಳಿಸಿದರು. ಈಗಿರುವ ಕಬ್ಬಿನ್ ಬಿಲ್ಲನ್ನು ಪಡೆದುಕೊಂಡು ಮುಂದಿನ ಹಣಕ್ಕಾಗಿ ಮತ್ತು ಹಣದ ಮೇಲಿನ ಬಡ್ಡಿಗಾಗಿ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ಮುಖಂಡ ಬಂಡು ಪಕಾಲಿ ಪತ್ರಿಕೆಗೆ ತಿಳಿಸಿದರು.
ಮೂರು ವರ್ಷ ಹೋರಾಟದ ಫಲವಾಗಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ನ್ಯಾಯ ಒದಗಿದಂತಾಗಿದೆ. ಸಕ್ಕರೆ ಕಾರ್ಖಾನೆಯು ಇನ್ನೂ ಹೆಚ್ಚಿನ ಬಿಲ್ ನೀಡಬೇಕಾಗಿದೆ ಎಂದು ರೈತ ಸಂಘದ ಮುಖಂಡ ಹೊನ್ನಪ್ಪ ಬಿರಡಿ ತಿಳಿಸಿದರು. ರೈತ ಮುಖಂಡ ಶ್ರೀಕಾಂತ ಘೂಳನ್ನವರ, ಶಿವಪ್ಪ ಹೋಟಕರ್, ಧರಿಗೌಡರ, ಭುಜಬಲಿ ಕೆಂಗಾಲಿ, ಯಲ್ಲಪ್ಪ ಮೂಸಿ, ಸರೇಶ ತೇಲಿ, ಮಹಾದೇವ ಬುಗಡಿ, ರಾಮಪ್ಪ ಹೊಸೂರ, ಭೀಮಶಿ ಕರಿಗೌಡರ, ಪರಪ್ಪ ಕಮಲದಿನ್ನಿ, ಬಾಹುಬಲಿ ನಂದಗಾವಿ ಇದ್ದರು.