ಕುಷ್ಟಗಿ: ತಾಲೂಕಿನಲ್ಲಿ ಮುಂಗಾರು ವಿಳಂಬದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದ ರೈತರಿಗೆ ಸಜ್ಜೆ, ತೊಗರಿ ಬೆಳೆ ಸಮಾಧಾನ ಮೂಡಿಸಿವೆ.
ಕೆಲವು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಆದರೆ ಕಳೆದ ವರ್ಷ ಹುಸಿ ಸೈನಿಕ ಹುಳುವಿನ ಬಾಧೆ ಕಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಮೆಕ್ಕೆಜೋಳ ಪ್ರದೇಶದಲ್ಲಿ ಸಜ್ಜೆ, ತೊಗರಿ ಬಿತ್ತನೆಯಾಗಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ 59,275 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆ. 2ರವರೆಗೆ 22,600 ಹೆಕ್ಟೇರ್ ಸಜ್ಜೆ ಬಿತ್ತನೆಯಾಗಿದೆ. ಕುಷ್ಟಗಿ ಹೋಬಳಿಯಲ್ಲಿ 4,540 ಹೆಕ್ಟೇರ್, ತಾವರಗೇರಾ 8,440 ಹೆಕ್ಟೇರ್, ಹನುಮಸಾಗರ 4,740 ಹೆಕ್ಟೇರ್ ಹಾಗೂ ಹನುಮನಾಳದಲ್ಲಿ 4,930 ಹೆಕ್ಟೇರ್ ಬಿತ್ತನೆಯಾಗಿದ್ದು ಸದ್ಯ 40ರಿಂದ 45 ದಿನಗಳ ಬೆಳೆ ಇದೆ.
ಪ್ರಸಕ್ತ ವರ್ಷದಲ್ಲಿ ತೊಗರಿ 9,120 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಕುಷ್ಟಗಿ ಹೋಬಳಿಯಲ್ಲಿ 1905 ಹೆಕ್ಟೇರ್, ತಾವರಗೇರಾ 2,805 ಹೆಕ್ಟೇರ್, ಹನುಮಸಾಗರ ವ್ಯಾಪ್ತಿಯಲ್ಲಿ 2,205 ಹಾಗೂ ಹನುಮನಾಳದಲ್ಲಿ 2,205ರಷ್ಟು ಬಿತ್ತನೆಯಾಗಿದೆ.
ವಾಡಿಕೆಯಷ್ಟೇ ಮಳೆ: ಜೂನ್ ತಿಂಗಳ 75.25 ಮಿ.ಮೀ. ವಾಡಿಕೆ ಮಳೆಯಲ್ಲಿ 89.75 ಮಿ.ಮೀ. ಮಳೆಯಾಗಿದೆ. ಜುಲೈ ತಿಂಗಳಲ್ಲಿ 73.05 ಮಿ.ಮೀ. ವಾಡಿಕೆ ಮಳೆಯಲ್ಲಿ 81.75ರಷ್ಟು ಮಳೆಯಾಗಿದೆ. ಆ. 5ಕ್ಕೆ ಈ ವರ್ಷದ ಒಟ್ಟು ಸರಾಸರಿ 255 ಮಿ.ಮೀ. ವಾಡಿಕೆ ಮಳೆಯಷ್ಟೇ 255 ಮಿ.ಮೀ. ಮಳೆಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಮಳೆ ಪ್ರಮಾಣದಲ್ಲಿ ಸುಧಾರಣೆ ಕಂಡಿರುವುದು ಬೆಳೆಯ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಿದೆ.
Advertisement
ಆರಂಭಿಕವಾಗಿ ಅಸಮರ್ಪಕ ಮುಂಗಾರು ಮಳೆಗೆ ಬಿತ್ತನೆ ಕ್ಷೇತ್ರ ವಿಸ್ತಾರವಾಗಿರಲಿಲ್ಲ. ಬದಲಾದ ಪರಿಸ್ಥಿತಿಗೆ ಬಹುತೇಕ ರೈತರು ತೊಗರಿ, ಸಜ್ಜೆ ಬಿತ್ತನೆಗೆ ಒಲವು ತೋರಿದ ಹಿನ್ನೆಲೆಯಲ್ಲಿ ಇದೀಗ ರೈತರು ನಿರೀಕ್ಷಿಸಿದಂತೆ ಉತ್ತಮ ಬೆಳೆ ಬಂದಿದ್ದು, ಬರಗಾಲ ಚಿಂತೆಯನ್ನು ಜುಲೈ ತಿಂಗಳ ಮಳೆ ದೂರ ಮಾಡಿದೆ.
Related Articles
ಈ ವರ್ಷದಲ್ಲಿ ಸಜ್ಜೆ, ತೊಗರಿ ಬೆಳೆ ನೀರಾವರಿ ಪ್ರದೇಶದ ಬೆಳೆಯಂತೆ ಈ ಬೆಳೆ ನಿಂತು ನೋಡುವಂಗ ಆಗೈತೀ. ಈ ವರ್ಷ ಅಂತಹ ಕನಿಷ್ಟ ಬರಗಾಲ ಆಗಿಲ್ಲ. ಬಹುತೇಕ ರೈತರು ಸಜ್ಜೆ ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಆಗಬಾರದು. ಬೆಲೆ ಕುಸಿತವಾದರೆ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಕನಿಷ್ಟ ಪ್ರತಿ ಕ್ವಿಂಟಲ್ಗೆ 2,500 ರೂ. ಸಿಗಬೇಕು. •ರಾಮಪ್ಪ ನಿಡಶೇಷಿ, ರೈತ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೊಗರಿ, ಸಜ್ಜೆ ಬೆಳೆ ಉತ್ತಮವಾಗಿದ್ದು, ಸಜ್ಜೆ ಆ. 31ರವರೆಗೂ ಬಿತ್ತನೆಗೆ ಅವಕಾಶವಿದೆ. ಬಿತ್ತನೆ ಕ್ಷೇತ್ರ ಇನ್ನೂ ಹೆಚ್ಚಾಗಲಿದೆ. ಕಳೆದ ವರ್ಷದಲ್ಲಿ ಮೆಕ್ಕೆಜೋಳಕ್ಕೆ ಹುಸಿ ಸೈನಿಕ ಹುಳುವಿನ ಬಾಧೆ ಎದುರಾರ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬದಲಿಗೆ ಸಜ್ಜೆ, ತೊಗರಿ ಬೆಳೆ ಕ್ಷೇತ್ರ ವಿಸ್ತರಿಸಿದ್ದು, ಸದ್ಯದ ಮಳೆಗೆ ಹುಸಿ ಸೈನಿಕ ಹುಳುವಿನ ಜೀವನ ಚಕ್ರ ನಿಂತು ಹೋಗಿದ್ದು, ತಾಲೂಕಿನಲ್ಲಿ ಈ ಬಾಧೆಯ ತೀವ್ರತೆ ಕಡಿಮೆಯಾಗಿದೆ. •ರಾಘವೇಂದ್ರ ಕೊಂಡಗುರಿತಾಂತ್ರಿಕ ಸಹಾಯಕ ಕೃಷಿ ಇಲಾಖೆ
•ಮಂಜುನಾಥ ಮಹಾಲಿಂಗಪುರ
Advertisement