Advertisement

ಮುಚ್ಚಿದ ಸಕ್ಕರೆ ಕಾರ್ಖಾನೆ ಆರಂಭಿಸಿ :ಕಾರ್ಖಾನೆ ಬಂದ್‌ನಿಂದ ಸಾವಿರಾರು ಕಾರ್ಮಿಕರು ಬೀದಿಪಾಲು

02:22 PM Jan 17, 2021 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಒಟ್ಟು 18 ಸಕ್ಕರೆ ಕಾರ್ಖಾನೆಗಳು ಆಡಳಿತದ ವೈಫಲ್ಯದಿಂದ ಬಾಗಿಲು ಮುಚ್ಚಿವೆ. ಇವುಗಳಲ್ಲಿ ದುಡಿಯುವ ಸುಮಾರು 1 ಲಕ್ಷ ಕಾರ್ಮಿಕರು ನಿರುದ್ಯೋಗಿಗಳಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇವುಗಳನ್ನು ಮತ್ತೆ ಆರಂಭಿಸಲು ಸರ್ಕಾರ ಬೇಗನೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಪದಾಧಿಕಾರಿಗಳು
ಸಕ್ಕರೆ ಸಚಿವ ಶಿವರಾಂ ಹೆಬ್ಟಾರ ಅವರನ್ನು ಬೆಳಗಾವಿ ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

Advertisement

ಮುಧೋಳ ರನ್ನ ನಗರದ ರೈತ ಸಹಕಾರಿ ಸಕ್ಕರೆ ಕಾರ್ಖಾನೆ, ಮಂಡ್ಯ ಸಕ್ಕರೆ ಕಾರ್ಖಾನೆ, ಬಾಗಲಕೋಟೆ ಜಿಲ್ಲೆಯ ರೈತ ಸಹಕಾರಿ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಎಂ.ಪಿ.ಎಂ ಕಾರ್ಖಾನೆ, ಹಿರಿಯೂರು ಸಹಕಾರಿ ಸಕ್ಕರೆ ಕಾರ್ಖಾನೆ, ಸಾಲಾರ್ಜಂಗ್‌ ಸಕ್ಕರೆ ಕಾರ್ಖಾನೆ, ಶಿವಮೊಗ್ಗ ಸಕ್ಕರೆ ಕಾರ್ಖಾನೆ, ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ, ವಾಣಿ ವಿಳಾಸ ಸಕ್ಕರೆ ಕಾರ್ಖಾನೆ,
ಅಂಬಿಕಾ ಸಕ್ಕರೆ ಕಾರ್ಖಾನೆ, ಶಿವಸಾಗರ ಸಕ್ಕರೆ ಕಾರ್ಖಾನೆ ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡಿವೆ.

ಇದನ್ನೂ ಓದಿ:ಕೆವಾಡಿಯಾ ಏಕತಾ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಪ್ರಧಾನಿ ಚಾಲನೆ

ಇವುಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಬೀದಿಪಾಲಾಗಿದ್ದಾರೆ. ಅಲ್ಲಿಯ ಕಬ್ಬು ಬೆಳೆಗಾರರಿಗೂ ಬಹಳ ತೊಂದರೆಯಾಗಿದೆ. ಸರ್ಕಾರ ಮುಚ್ಚಿದ್ದ ಕಾರ್ಖಾನೆಗಳನ್ನು ಮತ್ತೆ ಆರಂಭಿಸಲು ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಸಕ್ಕರೆ ಕಾರ್ಮಿಕರಿಗೆ 7ನೇ ವೇತನ ಶ್ರೇಣಿ ನಿಗದಿ ಪಡಿಸಬೇಕು. 6 ನೇ ವೇತನ ಶ್ರೇಣಿಯ ಅವಧಿ ಮುಗಿದು 2 ವರ್ಷಗಳು ಕಳೆದಿವೆ. ಕೆಲವು ಕಾರ್ಖಾನೆಗಳು 6 ನೇ ವೇತನ ಶ್ರೇಣಿ ಜಾರಿಮಾಡಿಲ್ಲ. ಈ ಬಗ್ಗೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಮುಧೋಳ ತಾಲೂಕಿನ ರನ್ನ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಸ್ಥಗಿತಗೊಂಡಿದೆ. ಕಾರ್ಮಿಕರಿಗೆ ಕಳೆದ 6 ತಿಂಗಳಿಂದ ಸಂಬಳ ದೊರೆತಿಲ್ಲ. ಈ ಕಾರ್ಖಾನೆಯ ಪುನಃ ಆರಂಭಕ್ಕೆ ಬೇಗನೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಿದ್ದಾರೆ. ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಯ ಮಹಾಮಂಡಲದ ಕಾರ್ಯಾಧ್ಯಕ್ಷ ಬಸವರಾಜ ಪೂಜಾರಿ, ಉಪಾಧ್ಯಕ್ಷ ರಾಜೇಸಾಬ
ನದಾಫ, ರೈತರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಐ.ಜಿ ಪಾಟೀಲ, ಪದಾಧಿಕಾರಿಗಳಾದ ಪ್ರಕಾಶ ಕಬ್ಬೂರ, ನಾಗಪ್ಪ ಕೆಳಗಡೆ, ಪಾಂಡು ಮುಳ್ಳೂರ, ಭೀಮಾಶಂಕರ ಗಲಗಲಿ, ಉಮೇಶ ಬಡಿಗೇರ, ಕಲ್ಲಪ್ಪ ಕಂಬಾರ, ಸಿ.ಎ ದೇಸಾಯಿ, ಗೋವಿಂದ ಅವರಾಧಿ, ಆರ್‌.ಕೆ ಹಲಗತ್ತಿ ಮತ್ತು ಎಚ್‌.ಎಸ್‌ ಪಾಟೀಲ ಹಾಗೂ ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಪಾಟೀಲ, ಆಡಳಿತ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಹೆಗ್ಗಳಗಿ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next