ಬನಹಟ್ಟಿ: ತಾಲೂಕಿನ ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣ ಪಾವತಿ ಮಾಡಿಸಬೇಕು ಎಂದು ರೈತರು ತಹಶೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಒತ್ತಾಯಿಸಿದರು.
ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಶುಕ್ರವಾರ ದಿಢೀರ್ ಸಭೆ ಸೇರಿ ಬಾಕಿ ಹಣ ಕೂಡಲೇ ಬಿಡುಗಡೆ ಮಾಡಿಸಬೇಕೆಂದು ತಾಲೂಕಾಡಳಿತವನ್ನು ಆಗ್ರಹಿಸಿದರು. ರೈತ ಮುಖಂಡ ಹೊನ್ನಪ್ಪ ಬಿರಡಿ ಮಾತನಾಡಿ, ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಒಟ್ಟು 996 ರೈತರ 21 ಕೋಟಿಯಷ್ಟು ಹಣ ಬಾಕಿ ಇದೆ. ಈ ಹಣ ಬಾರದೇ ಇರುವುದರಿಂದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಜು.13ರ ಒಳಗಾಗಿ ರೈತರ ಸಮಸ್ಯೆ ಬಗೆ ಹರೆಯದಿದ್ದಲ್ಲಿ ಅಂದು ಅನಿರ್ದಿಷ್ಟಾವಧಿವರೆಗೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಜು.13ರ ಒಳಗಾಗಿ ಚರ್ಚೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿತ್ತು.ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಈಗಾಗಲೇ ಅಪೆಕ್ಸ್ ಬ್ಯಾಂಕ್ ಜೊತೆಗೆ ಈ ಕುರಿತು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸಿಪಿಐ ಜಿ. ಕರುಣೇಶಗೌಡ,
ತೇರದಾಳ ಪಿಎಸ್‌ಐ ವಿಜಯ ಕಾಂಬಳೆ, ಗಂಗಾಧರ ಮೇಟಿ, ಶ್ರೀಕಾಂತ ಗುಳ್ಳನ್ನವರ, ಬಂದು ಪಕಾಲಿ, ಹನಮಂತ ಪೂಜಾರಿ, ಶಿವಪ್ಪ ಹೋಟಕರ್, ಬಸವಣ್ಣೆಪ್ಪ ಪಾಟೀಲ, ಸುಭಾಷ ಬಿರಾಣಿ, ಲಕ್ಷ್ಮಣಗೌಡ ಪಾಟೀಲ, ಪರಮಾನಂದ ಅಕ್ಕಿಮರಡಿ ಇತರರು ಇದ್ದರು.