ಜಗಳೂರು: ಕೃಷಿ ಇಲಾಖೆಯ ಜಲಾನಯನ ಯೋಜನೆಯಡಿ ಜಮಿನುಗಳಲ್ಲಿ ಬದು ನಿರ್ಮಾಣ ಮಾಡಿಕೊಂಡ ರೈತರ ಖಾತೆಗಳಿಗೆ ಕೂಲಿ ಹಣ ಪಾವತಿಗೆ ಆಗ್ರಹಿಸಿ ರೈತರು ಸಹಾಯಕ ಕೃಷಿ ನಿರ್ದೇಶಕರನ್ನು ತರಾಟೆ ತೆಗೆದುಕೊಂಡ ಪ್ರಸಂಗ ಸೋಮವಾರ ಇಂದಿಲ್ಲಿ ಜರುಗಿದೆ.
ಸೋಮವಾರ ಬೆಳಗ್ಗೆ ತಾಲೂಕಿನ ಸೊಕ್ಕೆ ಗ್ರಾಮದ ನಲ್ವತ್ತಕ್ಕೂ ಅಧಿಕ ಗ್ರಾಮಸ್ಥರು ಕೃಷಿ ಇಲಾಖೆಗೆ ಆಗಮಿಸಿ ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಬಸಣ್ಣ ಅವರಿಗೆ, ಕೆಲಸ ಮಾಡಿ 2 ತಿಂಗಳು ಕಳೆದರೂ ಕೂಲಿ ಹಣ ಪಾವತಿಯಾಗಿಲ್ಲ. ನಾವು ಬಡ ರೈತರು. ನಮ್ಮ ಭಾಗದಲ್ಲಿ ಮಳೆಯಾಗಿದ್ದು, ಬಿತ್ತನೆ ಬೀಜ ಕೊಂಡುಕೊಳ್ಳುವ ಸಮಯವಾಗಿದೆ. ಕೂಲಿ ಹಣ ಪಾವತಿಸಿದರೆ ಅನುಕೂಲವಾಗುತ್ತದೆ ಎಂದು ಹಂಪಣ್ಣ, ಕಾಡಪ್ಪ ಸೇರಿದಂತೆ ಇತರರು ತಮ್ಮ ನೋವನ್ನು ತೊಡಿಕೊಂಡರು.
ಈಗಾಗಲೇ ನಿಮ್ಮ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ. ಸರಕಾರಿ ರಜೆ ಇರುವುದರಿಂದ ವಿಳಂಬವಾಗಿರಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಸಮಾಜಾಯಿಷಿ ನೀಡಿದಾಗ, ಕೆಲಸ ಮಾಡಿ ಎರಡು ತಿಂಗಳಾದರೂ ಸಹ ಹಣ ಪಾವತಿಗೆ ವಿಳಂಬ ಮಾಡುತ್ತೀರಿ. ಜೆಸಿಬಿ ಯಂತ್ರದಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಸಕಾಲಕ್ಕೆ ಹಣ ತಲುಪುತ್ತದೆ. ಗುಂಡಿ ತೆಗೆದರೆ 750 ರೂ. ಎಂದು ಹೇಳುತ್ತಿರಿ. ನಮಗೆ 500 ರೂ. ಮಾತ್ರ ಪಾವತಿಸುತ್ತೀರಿ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಈ ರೀತಿ ಅನ್ಯಾಯ ಮಾಡಬಾರದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬದು ಮತ್ತು ಕಂದ ನಿರ್ಮಾಣ ಮಾಡುವ ಸಂದರ್ಭದಲ್ಲಿ 15 ದಿನಗಳಿಗೊಮ್ಮೆ ಹಣ ಪಾವತಿ ಭರವಸೆ ನೀಡಲಾಗಿತ್ತು. ಈಗಾಗಲೇ ನಾವು ಸುಮಾರು 1000 ಗುಂಡಿಗಳನ್ನು ತೆಗೆದಿದ್ದೇವೆ. ಈಗ ನೋಡಿದರೆ ನಿಮ್ಮ ಖಾತೆಗೆ ಜಮಾ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತೀರಿ. ನಮ್ಮ ಖಾತೆಗೆ ಎಂದು ಹಣ ಜಮಾ ಮಾಡುತ್ತೀರೆಂದು ತಿಳಿಸಿದರೆ ಅಂದೇ ಬರುತ್ತೇವೆ ಎಂದು ರೈತರು ಒತ್ತಾಯಿಸಿದಾಗ, ಬುಧವಾರ ವೇಳೆಗೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ಈರಜ್ಜ, ಮಂಜಣ್ಣ, ಕಾಡಪ್ಪ, ಕೊಟ್ರಪ್ಪ ಸೇರಿದಂತೆ ಇತರರು ಇದ್ದರು.