ಸವದತ್ತಿ: ಗೋವಿನ ಜೋಳ ಮತ್ತು ಜೋಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ರೈತರು ಎಪಿಎಂಸಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಹಂಚಿನಾಳ ಗ್ರಾಮದ ರೈತ ಫಕೀರಗೌಡ ಪಾಟೀಲ ಮಾತನಾಡಿ, ಗೋವಿನ ಜೋಳ ಮತ್ತು ಜೋಳ ಖರೀದಿ ಕೇಂದ್ರ ಇಲ್ಲದರಿಂದ ರೈತರಿಗೆ ಕಷ್ಟ ಎದುರಿಸುವಂತಾಗಿದೆ. ದೇಶದಲ್ಲಿ ಕೈಗಾರಿಕೆ, ಇತರ ಉದ್ಯಮಗಳಿಗೆ ನಷ್ಟವಾದಲ್ಲಿ ಮುಂದೆ ಬರುವ ಸರ್ಕಾರಗಳು ರೈತರಿಗೆ ತಾರತಮ್ಯ ಮಾಡುತ್ತಿವೆ. ಅಲ್ಲದೇ ಉತ್ತಮ ಫಸಲು ಬಂದರೂ ಬೆಳೆಗೆ ತಕ್ಕ ಬೆಲೆ ಸಿಗದೇ ಇದ್ದರೆ ಮಾಡಿದ ಸಾಲ ತೀರಿಸುವದಾದರೂ ಹೇಗೆಂದು ತಿಳಿಯುತ್ತಿಲ್ಲ. ನಿನ್ನೆ 1200 ರೂ. ಇದ್ದ ದರ ಇಂದು ರೂ. 900ಕ್ಕೆ ಇಳಿದಿದೆ. ದಿನಕ್ಕೊಂದು ಬೆಲೆಯಾದರೆ ನಮ್ಮ ಗೋಳನ್ನು ಹೇಳುವುದಾದರೂ ಯಾರಿಗೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಗೆ ಬೆಂಬಲ ನೀಡಿದ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಮಾತನಾಡಿ, ರೈತನ ಬೆಳೆ ಬಂದು 5 ತಿಂಗಳು ಕಳೆದಿವೆ. ಆದರೆ ಕೇಂದ್ರ ಬೆಂಬಲ ಬೆಲೆ ಈಗ ನಿಗದಿ ಮಾಡಿದೆ. ಶೀಘ್ರವೇ ರಾಜ್ಯ ಸರ್ಕಾರ ಗೋವಿನ ಜೋಳ ಖರೀದಿ ಮಾಡಲು ಮುಂದಾಗಬೇಕು ಎಂದರು.
ಬೆಳೆ ಹಾನಿ, ಅತಿವೃಷ್ಟಿಯಿಂದ ರೈತ ಕಂಗಾಲಾಗಿದ್ದಾನೆ. ಅಳಿದುಳಿದದ್ದನ್ನು ಮಾರುಕಟ್ಟೆಗೆ ತಂದರೆ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಲ್ಲ. ಈ ಕುರಿತು ಡಿಸಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಶೀಘ್ರವೇ ರೈತರ ಬೆಳೆದ ಗೋವಿನ ಜೋಳ ಮತ್ತು ಜೋಳಕ್ಕೆ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಹಂಚಿನಾಳ, ಉಗರಗೋಳ, ಹಿರೇಕುಂಬಿ, ಹರಳಕಟ್ಟಿ, ಆಚಮಟ್ಟಿ, ಕಗದಾಳ ಗ್ರಾಮಗಳ ರೈತರು ಇದ್ದರು.