Advertisement

ರೈತರ ಸಾಲ ಮನ್ನಾ ಅನಿವಾರ್ಯ: ಚಿದಂಬರಂ

12:18 PM Dec 22, 2018 | Team Udayavani |

ಬೆಂಗಳೂರು: ರೈತರ ಸಾಲ ಮನ್ನಾ ಒಳ್ಳೆಯ ರಾಜಕೀಯವೋ, ಕೆಟ್ಟ ರಾಜಕೀಯವೋ ಎಂಬುದು ಮುಖ್ಯವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಅನಿವಾರ್ಯ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಒಂದು ಜಿಲ್ಲೆಯಲ್ಲಿ 108 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ 10 ಕೋಟಿ ಕೃಷಿಕರ ಕುಟುಂಬದ ಪೈಕಿ 5.28 ಕೋಟಿ ಸಣ್ಣ ಮತ್ತು ಮಧ್ಯಮ ಭೂ ಹಿಡುವಳಿದಾರರಿದ್ದಾರೆ.

ಈ ರೈತರ ಸರಾಸರಿ ಸಾಲ ಪ್ರಮಾಣ 90,000 ರೂ.ನಿಂದ ಒಂದು ಲಕ್ಷ ರೂ.ವರೆಗೆ ಇದೆ. ಈ ಸಾಲವನ್ನು ಅವರು ಹೇಗೆ ತೀರಿಸುತ್ತಾರೆ? ಹಾಗಾಗಿ ಸಾಲ ಮನ್ನಾ ಅನಿವಾರ್ಯ. ಈ ಹಿನ್ನೆಲೆಯಲ್ಲಿಯೇ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್‌ಘಡದಲ್ಲಿ ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್‌ ಸರ್ಕಾರಗಳು ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಿವೆ ಎಂದು ಹೇಳಿದರು.

ಕೃಷಿ ಮಾಡಿ ಅಭಿಪ್ರಾಯ ಹೇಳಲಿ: ರೈತರ ಸಾಲ ಮನ್ನಾ ಸೂಕ್ತವಲ್ಲ ಎಂಬ ಆರ್ಥಿಕತಜ್ಞರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, “ಆರ್ಥಿಕ ತಜ್ಞರು ಎರಡು ಎಕರೆ ಭೂಮಿ ತೆಗೆದುಕೊಂಡು 10 ವರ್ಷ ಕೃಷಿ ನಡೆಸಿ ನಂತರ ರೈತರ ಸಾಲ ಮನ್ನಾ ಬಗ್ಗೆ ಪ್ರತಿಕ್ರಿಯೆ ನೀಡಲಿ. ಸಾಲ ಮನ್ನಾ ಟೀಕಿಸುವ ಆರ್ಥಿಕ ತಜ್ಞರು ದೇಶದ ರೈತರ ಸ್ಥಿತಿಗತಿಯ ಅನುಭವ ಪಡೆದು ಮಾತನಾಡಬೇಕು. ಆರ್ಥಿಕ ತಜ್ಞರು ಆರ್ಥಿಕತೆ ಗುಣಮಟ್ಟ ನಿರ್ಧರಿಸಬೇಕೆ ಹೊರತು ರಾಜಕೀಯದ ಗುಣಮಟ್ಟವನ್ನಲ್ಲ ಎಂದು ಹೇಳಿದರು.

ನೋಟು ಅಮಾನ್ಯ ಹಾಗೂ ಜಿಎಸ್‌ಟಿಯಿಂದ ಆರ್ಥಿಕತೆಗೆ ಬಿದ್ದಿರುವ ಹೊಡೆತವು ದೇಶದ ಪ್ರತಿಯೊಬ್ಬ ನಾಗರಿಕರ ಮನಸ್ಸಿನ ಮೇಲೂ ಗಾಢ ಪ್ರಭಾವ ಬೀರಿದೆ. ಇದನ್ನು ಬಿಜೆಪಿ ಅಷ್ಟು ಸುಲಭವಾಗಿ ಅಳಿಸಲು ಸಾಧ್ಯವಿಲ್ಲ. ನಿರುದ್ಯೋಗ, ಸಣ್ಣ ಉದ್ದಿಮೆಗಳ ಸ್ಥಗಿತ, ಆರ್ಥಿಕ ವ್ಯವಸ್ಥೆಯಲ್ಲಿ ಏರುಪೇರಿನಿಂದ ಅನುಭವಿಸಿದ ತೊಂದರೆಗೆ ಜನ ನಲುಗಿದ್ದನ್ನು ಮರೆಯುವುದು ಅಸಾಧ್ಯ ಎಂದು ಹೇಳಿದರು.

Advertisement

ಸದನ ಸಮಿತಿ ರಚನೆ ಖಚಿತ: ರಫೇಲ್‌ ಒಪ್ಪಂದ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ಸಂಸತ್ತು ಜಂಟಿ ಸದನ ಸಮಿತಿ ರಚಿಸದಿದ್ದರೆ ಮುಂದಿನ ಸಂಸತ್ತು ಖಂಡಿತವಾಗಿಯೂ ವಿವಾದದ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲೇ 126 ರಫೇಲ್‌ ಯುದ್ಧ ವಿಮಾನ ಖರೀದಿಗೆ ಶೇ.95ರಷ್ಟು ಮಾತುಕತೆ ಪೂರ್ಣಗೊಂಡಿತ್ತು. ನನ್ನ ಮಾಹಿತಿ ಪ್ರಕಾರ ಎಚ್‌ಎಎಲ್‌ನಲ್ಲಿ ತಯಾರಾಗುವ ರಫೇಲ್‌ ಯುದ್ಧ ವಿಮಾನದ ಗುಣಮಟ್ಟ, ಕಾರ್ಯಕ್ಷಮತೆಗೆ ಫ್ರಾನ್ಸ್‌ ಕಂಪನಿ ಹಾಗೂ ಎಚ್‌ಎಎಲ್‌ ಜಂಟಿ ಖಾತರಿ ನೀಡಬೇಕೆಂಬ ವಿಚಾರದ ಚರ್ಚೆ ಬಾಕಿಯಿತ್ತು. ಈ ಹಂತದಲ್ಲಿ ಒಪ್ಪಂದ ರದ್ದುಪಡಿಸಿ ಹೊಸ ಒಪ್ಪಂದ ಮಾಡಿಕೊಂಡಿದ್ದರ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಸಂಸತ್ತಿನಲ್ಲಿ ಈಗಾಗಲೇ ಚರ್ಚೆ ನಡೆದಿದೆ: ಕಾಂಗ್ರೆಸ್‌ ರಫೇಲ್‌ ಒಪ್ಪಂದ ಕುರಿತು ಸದನದಲ್ಲಿ ಚರ್ಚೆಗೆ ಸಿದ್ಧವಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ ಮಾಧವ್‌ ಹೇಳಿಕೆಗೆ ಉತ್ತರಿಸಿದ ಪಿ.ಚಿದಂಬರಂ, ಸಂಸತ್ತಿನಲ್ಲಿ ಈಗಾಗಲೇ ಈ ಕುರಿತು ಚರ್ಚೆ ನಡೆದಿದೆ.

ಕೇಂದ್ರ ಸರ್ಕಾರ ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಕಾರಣ ಜಂಟಿ ಸದನ ಸಮಿತಿ ರಚನೆಗೆ ಒತ್ತಾಯಿಸಲಾಗಿದೆ. ಸದನ ಸಮಿತಿ ರಚಿಸಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಜಂಟಿ ಸದನ ಸಮಿತಿ ರಚನೆಗೆ ಕೇಂದ್ರ ಸರ್ಕಾರ ಹಿಂಜರಿಯುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next