ಧಾರವಾಡ: ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ “ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ’ ಶೀರ್ಷಿಕೆ ಅಡಿ ಸಮೀಪದ ನವಲೂರು ಗ್ರಾಮದ ಜಗದಾಳೆ ಅವರ ಹೊಲದಲ್ಲಿ ರೈತ ದಿನ ಆಚರಿಸಲಾಯಿತು.
ಈ ವೇಳೆ ಕೃಷಿ ಕಾಯ್ದೆ ವಿರೋಧಿಸಿ ಹೊಲದಲ್ಲಿ ಟೊಮ್ಯಾಟೋ ಬಿಡಿಸುವ ಮೂಲಕ ಮಹಿಳೆಯರು ಶ್ರಮದಾನ ಮಾಡಿ ವಿನೂತನ ಪ್ರತಿಭಟನೆ ಕೈಗೊಂಡು ಗಮನ ಸೆಳೆದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಪುಷ್ಪಾ ಅಮರನಾಥ ಮಾತನಾಡಿ, ದೇಶದ ಹಿತಕ್ಕಾಗಿದುಡಿಯುವ ರೈತ ಇಂದು ಬೀದಿಗೆ ಬಂದು ಹೋರಾಟನಡೆಸುತ್ತಿದ್ದರೂ ಸರಕಾರಗಳು ಅವರ ಹಿತಕ್ಕಾಗಿ ಯಾವುದೇ ಕೆಲಸ ಮಾಡುತ್ತಿಲ್ಲ ಎಂದರು.
ದೆಹಲಿಯಲ್ಲಿ ಕೊರೆಯುವ ಚಳಿಯಲ್ಲಿ ರೈತರು ನಡೆಸುತ್ತಿರುವ ಧರಣಿಗೆ ಸರಕಾರ ಸ್ಪಂದಿಸುತ್ತಿಲ್ಲ. ರೈತರಿಗೆದೊರೆಯುವ ಬೀಜ, ಗೊಬ್ಬರ, ಕ್ರಿಮಿನಾಶಕಕ್ಕೆ ಬೆಲೆನಿಗದಿಯಾಗಿರುತ್ತದೆ. ಆದರೆ, ರೈತರು ಬೆಳೆದ ಬೆಳೆಗಳಿಗೆಬೆಲೆ ನಿಗದಿಯಾಗಿಲ್ಲ. ಅಸಮರ್ಪಕ ಬೆಲೆ ನೀತಿಯಿಂದರೈತರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಒಕ್ಕಲುತನದ ವೆಚ್ಚ ಹೆಚ್ಚಾಗಿದ್ದರೂ ರೈತನಿಗೆ ದೊರೆಯಬೇಕಾದ ಸೌಲಭ್ಯ ದೊರೆಯುತ್ತಿಲ್ಲ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ದೀಪಾ ಗೌರಿ ಮಾತನಾಡಿ, ರೈತರ ಸಂಕಷ್ಟಗಳಿಗೆ ನಾವೆಲ್ಲರೂ ಸ್ಪಂದಿಸಬೇಕಿದೆ. ಎಷ್ಟೇ ಅನಾನುಕೂಲಗಳಿದ್ದರೂ ರೈತರು ತಮ್ಮ ಕಾರ್ಯ ಮಾಡುತ್ತಿದ್ದಾರೆ. ಅವರ ಕಾರ್ಯ ಸ್ಮರಣೀಯ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ 30 ಜನ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ,ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ, ಅಲ್ತಾಫ್ ಹಳ್ಳೂರ, ಗೌರಿ ನಾಡಗೌಡ ಸೇರಿದಂತೆ ಹಲವರಿದ್ದರು.