ಕಡೂರು: ದೇಶದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದ ಪ್ರಾತಃಸ್ಮರಣೀಯರು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಿ.ಮಂಜುಳಾ ಬಣ್ಣಿಸಿದರು.
ಪಟ್ಟಣದ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚೌಧರಿ ಚರಣ್ ಸಿಂಗ್ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆದಿರುವುದು ಅತ್ಯಂತ ಸೂಕ್ತವಾಗಿದೆ. ಏಕೆಂದರೆ ಆ ಕಾಲದಲ್ಲಿ ಕೃಷಿ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದವು. ರೈತರ ತಲಾ ಆದಾಯ ಕ್ಷೀಣವಾಗಿತ್ತು. ಸಾಂಪ್ರದಾಯಿಕ ಕೃಷಿಯೊಡನೆ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ತಂತ್ರಜ್ಞಾನದ ಪರಿಚಯವನ್ನು ರೈತರಿಗೆ ಮಾಡಿಸಿದ ಪರಿಣಾಮ ಕೃಷಿ ಕ್ರಾಂತಿಯೇ ಉಂಟಾಯಿತು ಎಂದರು.
ಸಿಂಗ್ ಅವರ ಆಶಯದಲ್ಲಿ ಕೈಜೋಡಿಸಿದ ಸ್ವಾಮಿನಾಥನ್ ಸಹ ಸ್ಮರಣೀಯರು. ಆ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕ ಪದ್ಧತಿಯ ಜೊತೆಗೆ ಅಗತ್ಯವಿದ್ದಷ್ಟೇ ರಸಗೊಬ್ಬರ ಬಳಸುವ ಮೂಲಕ ಭೂಮಿಯ ಆರೋಗ್ಯ ಕೆಡಿಸದಂತೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಕೃಷಿ ಕ್ಷೇತ್ರದಲ್ಲಿ ಈ ಎಚ್ಚರಿಕೆ ನಿರ್ಲಕ್ಷಿಸಿದ್ದು ವಿಪರ್ಯಾಸಕರ ಸಂಗತಿ ಎಂದರು. ಈಗ ತಡವಾಗಿಯಾದರೂ ಮತ್ತೆ ಸಾವಯವ ಕೃಷಿಯತ್ತ ಮನಸ್ಸು ಮಾಡುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಒಟ್ಟಾರೆ ಕೃಷಿ ಪ್ರಧಾನ ದೇಶದಲ್ಲಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣೆಯಲ್ಲಿ ರೈತ ದಿನಾಚರಣೆ ಮಾಡುತ್ತಿರುವುದು ಅರ್ಥಪೂರ್ಣ ಎಂದರು.
ಹಿರೇನಲ್ಲೂರು ಕೃಷಿಕ ಚಂದ್ರಪ್ಪ ಮಾತನಾಡಿ, ಕೃಷಿ ಕ್ಷೇತ್ರ ಆಧುನಿಕತೆಗೆ ಮಾರು ಹೋಗಿ ಸಾವಯವ ಕೃಷಿಯನ್ನು ಮರೆತು ಬಿಟ್ಟಿತು. ಆದರೆ ಬದಲಾದ ಕೃಷಿ ಪದ್ಧತಿಯಿಂದ ಪುನಃ ಸಾವಯವ ಕೃಷಿಗೆ ಉತ್ತೇಜನ ದೊರಕುತ್ತಿದೆ. ಕೃಷಿ ಇಲಾಖೆಯಿಂದ ಅನೇಕ ಸೌಲಭ್ಯಗಳು ದೊರಕುತ್ತಿದ್ದು, ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಪಡೆದು ಕೃಷಿ ಪದ್ಧತಿಯನ್ನು ನಡೆಸಿದರೆ ಉತ್ತಮ ಇಳುವರಿ ಮತ್ತು ಲಾಭ ಪಡೆಯಲು ಸಾಧ್ಯ ಎಂದರು.
ಕಸಬಾ ಕೃಷಿ ಅಧಿಕಾರಿ ಡಾ| ಟಿ.ಸಿ.ಚಂದ್ರು, ಹಿರೇನಲ್ಲೂರು ಕೃಷಿ ಅಧಿಕಾರಿ ಶಿವಶಂಕರ್, ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಹಿರಿಯಂಗಳ ಪ್ರಗತಿಪರ ರೈತ ಲೋಕೇಶ್, ರಾಜಣ್ಣ, ತಾಂತ್ರಿಕ ಅಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.