ರಾಯಚೂರು: ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲಬೆಲೆಗೆ ಖರೀದಿಸಬೇಕು, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮುಂದಿಟ್ಟುಕೊಂಡು ಸಿಂಧನೂರು ಎಪಿಎಂಸಿ ಸಭಾಂಗಣದಲ್ಲಿ ಅ.28ರಂದು ರೈತರ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಕೃಷಿ ವಲಯ ದುರ್ಬಲಗೊಳಿಸಲು ಎಲ್ಲ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಘೋಷಣೆ ಮಾಡಿದ್ದ ಬಿಜೆಪಿ, ಈವರೆಗೂ ಅನುಷ್ಠಾನಕ್ಕೆ ಮುಂದಾಗಿಲ್ಲ. ರೈತರ ಬೆಳೆಗಳಿಗೆ ಬೆಲೆ ನೆಲಕಚ್ಚಿದರೂ ಸರ್ಕಾರ ಮಾತ್ರ ನೆರವಿಗೆ ಬರುತ್ತಿಲ್ಲ ಎಂದರು.
ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಘೋಷಣೆ ಮಾಡಿ ಏಳು ವರ್ಷ ಕಳೆದರೂ ಜಾರಿ ಮಾಡಿಲ್ಲ. ಹೂಡಿದ ಹಣ ಮರಳಿ ಬಾರದಂತಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟಾದರೂ ಸರ್ಕಾರ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆಗಳನ್ನು ಜಾರಿಗೊಳಿಸಿ ದೇಶದ ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳ ಕೈಗೆ ನೀಡಲು ಮುಂದಾಗಿದೆ. ಇದನ್ನೇ ದೇಶದ ಸರ್ವತೋಮುಖ ಅಭಿವೃದ್ಧಿ ಎಂದು ಬಿಂಬಿಸುತ್ತಿರುವುದು ಖಂಡನೀಯ ಎಂದರು.
ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಎರಡೂ ಪರ್ಸೆಂಟೆಜ್ ಪಕ್ಷಗಳು: ಮಾಜಿ ಸಿಎಂ ಕುಮಾರಸ್ವಾಮಿ
ಭತ್ತ ದರ ಕುಸಿತವಾಗಿ ರೈತರು ಕಂಗೆಟ್ಟಿದ್ದಾರೆ. ರಸಗೊಬ್ಬರ ಬೆಲೆ ಏರುತ್ತಲೇ ಇದೆ. ಇಂಧನ ಬೆಲೆಗಳು ಕೈ ತಪ್ಪಿ ಹೋಗಿವೆ. ಖರ್ಚು ವೆಚ್ಚಗಳನ್ನು ನಿಭಾಯಿಸಲಾಗದೆ ಇರುವಾಗಲೇ ರೋಗ ಬಾಧೆಯ ಮಧ್ಯೆ ಭತ್ತ ಬೆಳೆಗಾರರಿಗೆ ಬೆಲೆಯೇ ಇಲ್ಲದಾಗಿದೆ. ಪ್ರತಿ ಕ್ವಿಂಟಲ್ ಭತ್ತಕ್ಕೆ ಒಂದು ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಬೆಂಬಲ ಬೆಲೆ ನಿಗದಿ ಮಾಡಬೇಕು. ಹೋಬಳಿ ಕೇಂದ್ರದಲ್ಲಿಯೂ ಖರೀದಿ ಕೇಂದ್ರ ಪ್ರಾರಂಭಿಸಿ ವಾರದೊಳಗೆ ಹಣ ಪಾವತಿ ವ್ಯವಸ್ಥೆ ಮಾಡಬೇಕಿದೆ. ನಿರಂತರ ವಿದ್ಯುತ್ ಪೂರೈಕೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು, ರೈತರ ಸಾಲಮನ್ನಾ ಬೇಡಿಕೆಗಳನ್ನು ಇಟ್ಟುಕೊಂಡು ಸಮಾವೇಶ ನಡೆಸಲಾಗುತ್ತದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸಮಾವೇಶ ಉದ್ಘಾಟಿಸುವರು. ಜಿಲ್ಲೆಯ ಎಲ್ಲ ತಾಲೂಕುಗಳ ರೈತರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸಮಾವೇಶ ದಿನದಂದು ಜಿಲ್ಲಾಧಿಕಾರಿಗಳು ಸಿಂಧನೂರಿಗೆ ಆಗಮಿಸಿ ಮನವಿ ಪಡೆಯಬೇಕು. ಇಲ್ಲದೇ ಹೋದಲ್ಲಿ ಮುಂದಾಗುವ ಅನಾಹುತಗಳಿಗೆ ಆಡಳಿತವೇ ಹೊಣೆ ಆಗಬೇಕು ಎಂದು ಎಚ್ಚರಿಸಿದರು. ಸಂಘಟನೆ ಮುಖಂಡರಾದ ನರಸಪ್ಪ ದೇವಸೂಗೂರು, ರಾಮಬಾಬು, ಶಿವರಾಜ್ ಸಾಸಲಮರಿ, ರಾಮಪ್ಪ ನಾಯಕ ಜವಳಗೇರಾ ಸುದ್ದಿಗೋಷ್ಠಿಯಲ್ಲಿದ್ದರು.