Advertisement

ಬೆಂಬಲ ಬೆಲೆ ವಿಚಾರದಲ್ಲೂ ರೈತರಿಗೆ ದ್ರೋಹ: ಬಿಎಸ್‌ವೈ

06:20 AM Nov 15, 2018 | |

ಬೆಂಗಳೂರು: ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರೈತರ ಕಣ್ಣಿಗೆ ಮಣ್ಣೆರಚುತ್ತಿದ್ದು, ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲೂ ರೈತರಿಗೆ ದ್ರೋಹ ಬಗೆದಿದೆ. 

Advertisement

ಕೂಡಲೇ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ರಾಜ್ಯ ಸರ್ಕಾರ ನಿಗದಿಪಡಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಈ ಸಂಬಂಧ ಬುಧವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 1,600 ರೂ. ಬೆಂಬಲ ಬೆಲೆಯನ್ನು ಮುಖ್ಯಮಂತ್ರಿಗಳು ಮಂಗಳವಾರ ಘೋಷಿಸಿದ್ದಾರೆ. 

ಆದರೆ ಕೇಂದ್ರ ಸರ್ಕಾರವು ಐದು ತಿಂಗಳ ಹಿಂದೆಯೇ ಭತ್ತ ಸೇರಿದಂತೆ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಕೇಂದ್ರ ಸರ್ಕಾರ ಉತ್ತಮ ಗುಣಮಟ್ಟದ ಕ್ವಿಂಟಾಲ್‌ ಭತ್ತಕ್ಕೆ 1,770 ರೂ. ನಿಗದಿಪಡಿಸಿದ್ದು, ಸಾಮಾನ್ಯ ಗುಣಮಟ್ಟದ ಭತ್ತಕ್ಕೆ 1750 ರೂ. ನಿಗದಿಪಡಿಸಿದೆ. ಹಾಗೆಯೇ ಪ್ರತಿ ಕ್ವಿಂಟಾಲ್‌ ರಾಗಿಗೆ ಬೆಂಬಲ ಬೆಲೆಯನ್ನು 1,900 ರೂ.ನಿಂದ 2,897 ರೂ.ಗೆ ಹೆಚ್ಚಳ ಮಾಡಿದೆ. 

ಆದರೆ ರಾಜ್ಯ ಸರ್ಕಾರ ಈ ವಿಷಯವನ್ನು ಪರಿಗಣಿಸದೆ ಕೇವಲ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.

Advertisement

ಕೇಂದ್ರ ಸರ್ಕಾರ ನಾಲ್ಕು ತಿಂಗಳ ಹಿಂದೆಯೇ 14 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದ್ದರೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆಗಾಗಲಿ, ಜಿಲ್ಲಾಧಿಕಾರಿಗಳು, ಎಪಿಎಂಸಿಗಳಿಗಾಗಲಿ ಮಾಹಿತಿ ಇಲ್ಲ. ಇದು ರಾಜ್ಯ ಸರ್ಕಾರ ರೈತರನ್ನು ಎಷ್ಟರ ಮಟ್ಟಿಗೆ ನಿರ್ಲಕ್ಷಿಸಿದೆ ಎಂಬುದನ್ನು ತೋರಿಸುತ್ತದೆ. 

ಕೇಂದ್ರ ಸರ್ಕಾರ ಕಳೆದ ಜುಲೈನಲ್ಲಿ ನಿಗದಿಪಡಿಸಿರುವ ಬೆಂಬಲ ಬೆಲೆ ಪ್ರಕಾರ ರಾಜ್ಯದ ರೈತರಿಗೆ 33,500 ಕೋಟಿ ರೂ.ನಷ್ಟು ಲಾಭ ಸಿಗಲಿದೆ. ಭತ್ತ ಬೆಳೆಯೊಂದಕ್ಕೆ 12,500 ರೂ. ಕೋಟಿ ರೂ. ಲಾಭ ಸಿಗುತ್ತಿದೆ. ಈ ಯಾವ ಮಾಹಿತಿಯೂ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರದೊಂದಿಗೆ ಸಮನ್ವಯ ಸಾಧಿಸಿ, ರಾಜ್ಯದ ರೈತರಿಗೆ ಗರಿಷ್ಠ ಲಾಭ ದೊರೆಯುವಂತೆ ಮಾಡಬೇಕಿದ್ದ ರಾಜ್ಯ ಸರ್ಕಾರಕ್ಕೆ ಬೆಂಬಲ ಬೆಲೆ ಬಗ್ಗೆ ತಿಳಿವಳಿಕೆಯೇ ಇಲ್ಲದಂತೆ ವರ್ತಿಸುತ್ತಿರುವುದು ವಿಪರ್ಯಾಸ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಶೇ. 150ರಷ್ಟು ಬೆಲೆ ನಿಗದಿಪಡಿಸಿ ರೈತರ ಬಗೆಗಿನ ಬದ್ಧತೆಯನ್ನು ತೋರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು 2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದಾರೆ. ಜತೆಗೆ ಫ‌ಸಲ್‌ ಬಿಮಾ ಯೋಜನೆ ಮೂಲಕ ರೈತರನ್ನು ನಷ್ಟದಿಂದ ಪಾರು ಮಾಡಲು ಕ್ರಾಂತಿಕಾರಿ ತೀರ್ಮಾನ ಕೈಗೊಂಡಿದೆ. ಆದರೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ರಾಜ್ಯ ಸರ್ಕಾರ ಆಂತರಿಕ ಗೊಂದಲಗಳಲ್ಲಿ ಮುಳುಗಿದ್ದು, ರೈತರ ಹಿತ ಕಾಪಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ತಿಂಗಳ ಬಳಿಕ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಘೋಷಿಸಿರುವ ಮುಖ್ಯಮಂತ್ರಿಗಳು ಉಳಿದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಕೇಂದ್ರ ನಿಗದಿಪಡಿಸಿರುವ ಬೆಂಬಲ ಬೆಲೆ ಸಿಗುವಂತೆ ಮಾಡಬೇಕು. ರಾಜ್ಯ ಸರ್ಕಾರದ ದ್ರೋಹವನ್ನು ರೈತರು ಇನ್ನಾದರೂ ಅರಿಯಬೇಕು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಹೆಚ್ಚು ಬೆಲೆಯನ್ನು ರಾಜ್ಯ ಸರ್ಕಾರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next