ಬೇಲೂರು: ಸರ್ಕಾರ ಮರು ಜಾರಿ ಮಾಡಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಲ್ಲಿ ರೈತರು ತಮ್ಮ ಹೆಸರು ನೋಂದಾಯಿಸಿಕೊಂಡು ಆರೋಗ್ಯ ಸೌಲಭ್ಯ ಪಡೆಯಬೇಕು ಎಂದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಹಾಗೂ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಚನ್ನಕೇಶವೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಶಸ್ವಿನಿ ಯೋಜನೆಗಾಗಿ ರೈತ ರು ಹಾಗೂ ಸಹಕಾರ ಸಂಘಗಳು ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರ ಯಶಸ್ವಿ ನಿ ಯೋಜನೆ ಮರು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕಾಗಿ 2022-23ನೇ ಬಜೆಟ್‌ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ ಎಂದರು.
ಬೇಲೂರು ಅಭಿವೃದ್ಧಿಗೆ ಒತ್ತು: ಸಹಕಾರ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ಸಿಎಂ ಆವಧಿಯಲ್ಲಿ ರೈತರ ಸಾಲ ಮನ್ನಾ ಯೋಜನೆ ಸೇರಿದಂತೆ ಹೈನುಗಾರಿಕೆ, ವ್ಯಾಪಾರ ಸಾಲ ನೀಡಲು ಅವಕಾಶ ಕಲ್ಪಿಸಿದ್ದರು. ಸ್ಥಳೀಯ ಶಾಸಕರು ನಮ್ಮದೆ ಸರ್ಕಾರ ಇಲ್ಲದ ವೇಳೆ ಅನುದಾನ ತರುವ ಮೂಲಕ ಬೇಲೂರಿನ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದರು.
ಸಹಕಾರ ಕ್ಷೇತ್ರಕ್ಕೆ ಒತ್ತು: ಹಾಸನ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜು ಮಾತನಾಡಿ, ಸರ್ಕಾರ ಇತ್ತೀಚಿನ ದಿನದಲ್ಲಿ ಸಹಕಾರ ರಂಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 3 ಲಕ್ಷದ ತನಕ ಶೂನ್ಯ ಬಡ್ಡಿ, ಹೈನುಗಾರಿಕೆ ಉತ್ತೇಜನಕ್ಕೆ ಸಾಲ ವಿತರಣೆ, ಮಧ್ಯಮಾವಧಿ ಸಾಲ ಹೀಗೆ ನಾನಾ ಪ್ರಮುಖ ಯೋಜನೆ ಜತೆಗೆ ಸದ್ಯ ಯಶಸ್ವಿನಿ ಜಾರಿಯಾಗಿದೆ ಎಂದರು. ಹಾಸನ ಜಿಲ್ಲೆಯ ಸಹ ಕಾರ ಕ್ಷೇತ್ರದ ಅಭಿವೃದ್ಧಿಗೆ ದೇವೇಗೌಡ ಹಾಗೂ ರೇವಣ್ಣ ಅವರ ಕೊಡು ಗೆ ಹೆಚ್ಚಿದೆ. ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಆಗಮಿಸಿದ್ದು ಸಂತಸದ ಸಂಗತಿ ಎಂದರು.
ಸಹಕಾರ ಕ್ಷೇತ್ರದ ಕಡೆಗಣನೆ: ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಕೇಂದ್ರ ಸರ್ಕಾರ ಇತ್ತೀಚಿನ ದಿನದಲ್ಲಿ ವಾಣಿಜ್ಯ ಬ್ಯಾಂಕಿಗೆ ಹೆಚ್ಚಿನ ಒತ್ತು ನೀಡುತ್ತಾ ಸಹಕಾರ ಕ್ಷೇತ್ರದ ಬೆಳವಣಿಗೆ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದ ಅವರು, ಸಹಕಾರ ಕ್ಷೇತ್ರಕ್ಕೆ ಇನ್ನೂ ಅಧಿಕ ಸಾಲ ಸೌಲಭ್ಯಗಳು ಸೇರಿದಂತೆ ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸಹಕಾರ
ಸಂಘ ಕೇವಲ ಸಾಲ ನೀಡಲು ಮಾತ್ರ ಸೀಮಿತವಾಗದೆ, ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳು, ಕ್ರಿಮಿಕೀಟ ನಾಶಕ, ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿ ನಲ್ಲಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಒಕ್ಕೂಟದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ನಿರ್ದೇಶಕರಾದ ಪುಟ್ಟಸ್ವಾಮಿ, ಕೆ.ಬಿ.ನಾಗರಾಜೇಗೌಡ, ಆರ್ .ಟಿ.ದ್ಯಾವೇಗೌಡ, ರಾಮ ಚಂದ್ರೇಗೌಡ, ದೇವರಾಜು, ಡಿ.ಮಲ್ಲೇಗೌಡ, ಬಿ.ಡಿ.ಚಂದ್ರೇಗೌಡ, ಬಿ. ಗಿರೀಶ್, ಗೋಪಾಲಯ್ಯ, ಸುರೇಶ್‌ರಾವ್, ಶಂಕರ್, ಸೌಜನ್ಯ, ಖಾಲಿದ್ ಅಹ್ಮದ್, ವೇಣುಗೋಪಾಲ್, ಶಕು, ದಿನೇಶ್ ಕುಮಾರ್, ಪುಟ್ಟರಾಮು,ಎಸ್.ಟಿ.ದಿನೇಶ್, ಜೈ ಪ್ರಕಾಶ್, ಸಹಕಾರ ಕ್ಷೇತ್ರದ ಅಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.