ಹಾವೇರಿ: ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆವಿಮೆಗೆ ಒಳಪಡುವ ಆಯ್ಕೆಯನ್ನು ರೈತರಿಗೆ ಬಿಡಲಾಗಿದೆಯೇ ಹೊರತು ಕಡ್ಡಾಯಗೊಳಿಸಿಲ್ಲ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ 19 ಹಿನ್ನೆಲೆಯಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬೆಳೆ ವಿಮೆ ಕಡ್ಡಾಯಗೊಳಿಸಿಲ್ಲ. ಆದರೆ, ಬೆಳೆವಿಮೆ ನೋಂದಾಯಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ಕುರಿತಂತೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು. ವಿಮೆ ಕಂತು ತುಂಬಲು ರೈತರ ಮನವೊಲಿಸಬೇಕು ಎಂದರು.
ಮುಂಗಾರು ಬಿತ್ತನೆಗೆ ಯಾವುದೇ ಅಭಾವ ಆಗದಂತೆ ಬೀಜ ಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಎಲ್ಲ ತಾಲೂಕಾವಾರು ಮಾರಟಗಾರರ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಂಸದರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಹೊಸ ಸಾಲ ಯೋಜನೆಯಡಿ ಕೃಷಿ, ಸಣ್ಣ ಉದ್ಯಮಿಗಳು, ವೈಯಕ್ತಿಕ ಸಾಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿ ಯೋಜನೆಗಳು, ಪ್ರೋತ್ಸಾಹದಾಯಕ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಲಾಕ್‌ಡೌನ್‌ಗೊಳಗಾಗಿ ರೈತರು, ಸ್ವ ಉದ್ಯೋಗಿಗಳು, ಸ್ವ ಸಹಾಯ ಸಂಘಗಳು, ಸಣ್ಣ ವಾಣಿಜ್ಯೋದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಸಾಲ ನೀಡಿಕೆ ಪ್ರಮಾಣದಲ್ಲಿ ಯಾವುದೇ ಕೊರತೆಯಾಗದಂತೆ ನಿಗಧಿಗಿಂತ ಗರಿಷ್ಠ ಪ್ರಮಾಣದಲ್ಲಿ ಅರ್ಹರಿಗೆ ಸಾಲ ನೀಡುವ ಕುರಿತು ತ್ವರಿತ ಕ್ರಮವಹಿಸಬೇಕು ಎಂದರು.
ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ರೈತರಿಗೆ ಕೋವಿಡ್ ಸಂಕಷ್ಟ ಕಾಲದಲ್ಲಿ ಹೆಚ್ಚು ಜನರಿಗೆ ಕೃಷಿ ಸಾಲ ನೀಡಬೇಕು. ರೈತರು ಸಾಲ ಪಡೆಯಲು ತೊಂದರೆ ಪಡಬಾರದು. ಸಿಬಿಲ್ ದರವನ್ನು ಕೃಷಿ ಕ್ಷೇತ್ರಕ್ಕೆ ಅನ್ವಯಿಸಬಾರದು. ಹೊಸ ಕೃಷಿ ಸಾಲವನ್ನು ತಕ್ಷಣವೇ ನೀಡಬೇಕು. ಎಲ್ಲ ಬ್ಯಾಂಕ್‌ಗಳು ಈ ಮಾನದಂಡವನ್ನು ಅನುಸರಿಸುವಂತೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ನೆರೆ ಪರಿಹಾರ: ಕಳೆದ ಆಗಸ್ಟ್, ಅಕ್ಟೋಬರ್ ಮಾಹೆಯಲ್ಲಿ ಸುರಿದ ಮಳೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಮನೆ ಹಾನಿ ಪರಿಹಾರ ಬಹಳ ಜನರಿಗೆ ದೊರೆತಿಲ್ಲ. ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ತಹಶೀಲ್ದಾರ್ ಹಂತದಲ್ಲೇ ಈ ಸಮಸ್ಯೆ ಬಗೆಹರಿಸುವ ಅಧಿಕಾರವಿದ್ದರೂ ಜಿಲ್ಲಾಧಿಕಾರಿಗಳ ನಿರ್ದೇಶನ ಇಲ್ಲ ಎಂದು ವಿಳಂಬ ಮಾಡುತ್ತಿದ್ದಾರೆ. ಬಾಕಿ ಉಳಿದಿರುವ ಪರಿಹಾರ ನೀಡುವ ಪ್ರಕರಣಗಳನ್ನು ಪರಿಶೀಲನೆ ನಡೆಸಿ ಅರ್ಹರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಹಾಗೂ ಬೆಳೆ ಪರಿಹಾರ ದೊರೆಯದವರಿಗೆ ಬೆಳೆ ಪರಿಹಾರ ನೀಡಬೇಕು. ಪರಿಹಾರ ವಿತರಣೆಯಲ್ಲಿ ಲೋಪ ಎಸಗಿದವರನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ಅರುಣಕುಮಾರ ಗುತ್ತೂರ, ವಿರೂಪಾಕ್ಷಪ್ಪ ಬಳ್ಳಾರಿ ಸಭೆಯಲ್ಲಿ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಹಾವೇರಿ ಉಪ ವಿಭಾಗಾಧಿಕಾರಿ ಡಾ| ದಿಲೀಷ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಇತರರು ಇದ್ದರು.