ಕಾರಟಗಿ: ವಿತರಣಾ ನಾಲೆಗಳಿಗೆ ನೀರು ಹರಿಸಿ 15 ದಿನ ಕಳೆದರೂ ಕೃಷಿಭೂಮಿಗೆ ನೀರು ತಲುಪದ ಹಿನ್ನೆಲೆಯಲ್ಲಿ ನೀರಾವರಿ ಅ ಧಿಕಾರಿಗಳೊಂದಿಗೆ ರಾಯಚೂರು, ಕೊಪ್ಪಳ ಜಿಲ್ಲೆಗಳ ಗಡಿಭಾಗದ ರೈತರೇ ಸ್ವಯಂ ಪ್ರೇರಣೆಯಿಂದ ತಂಡ ರಚಿಸಿಕೊಂಡು ನೀರು ನಿರ್ವಹಣೆಗೆ ಮುಂದಾಗುತ್ತಿದ್ದಾರೆ.
ನಾಲೆಗಳಿಗೆ ನೀರು ಹರಿಸಿ 15 ದಿನಗಳಾದರೂ ನಿಗದಿಯಂತೆ ನೀರು ತಲುಪದ್ದರಿಂದ ಬೇಸತ್ತಿರುವ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಗಡಿಭಾಗದ ರೈತರು ಪಟ್ಟಣದ ತುಂಗಭದ್ರಾ ನೀರಾವರಿ ನಿಗಮದ ಕಚೇರಿಗೆ ಧಾವಿಸಿ ಎಇಇ ಸೂಗಪ್ಪ ಹಾಗೂ ಎಇ ಶ್ರೀನಿವಾಸ ಅವರೊಂದಿಗೆ ಚರ್ಚಿಸಿದರು. ನೀರಾವರಿ, ಪೊಲೀಸ್ ಅಧಿಕಾರಿಗಳೊಂದಿಗೆ ರಚಿಸಲಾಗುತ್ತಿರುವ ನೀರು ನಿರ್ವಹಣಾ ತಂಡದಲ್ಲಿ ಮೊದಲ ಬಾರಿಗೆ ನಾಲಾ ವ್ಯಾಪ್ತಿಯ ರೈತರೂ ಸೇರಿಕೊಳ್ಳುತ್ತಿದ್ದಾರೆ. ಅಲ್ಲದೇ, ಸೋಮವಾರದಿಂದಲೇ ಗಸ್ತು ತಿರುಗುವ ಜೊತೆಗೆ ನಿರ್ವಹಣೆ ಕೆಲಸ ಆರಂಭಿಸಲು ನಿರ್ಧರಿಸಿದ್ದಾರೆ.
ಹನಿ ನೀರಿಲ್ಲ: ಕೃಷಿ ಚಟುವಟಿಕೆಗಳಿಗಾಗಿ ತುಂಗಭದ್ರಾ ಎಡದಂಡೆ ಮುಖ್ಯನಾಲೆಗೆ ಈಗಾಗಲೇ ನೀರು ಹರಿಸಲಾಗಿದೆ. 15ದಿನಗಳಿಂದ ವಿತರಣಾ ನಾಲೆಗಳಿಗೂ ಹರಿಬಿಡಲಾಗಿದೆ. ಆದರೆ ನಿರ್ವಹಣೆ ಕೊರತೆ ಹಾಗೂ ಮೇಲ್ಭಾಗದಲ್ಲಿ ನಡೆಯುತ್ತಿರುವ ನೀರ್ಗಳ್ಳತನದಿಂದ 31/4ನೇ ಉಪನಾಲೆಯಿಂದ 10ನೇ ಉಪನಾಲೆಯವರೆಗೆ ಇದುವರೆಗೆ ನೀರು ತಲುಪಿಲ್ಲ. ಇದರಿಂದಾಗಿ ರಾಯಚೂರು-ಕೊಪ್ಪಳ ಜಿಲ್ಲೆಗಳ ಗಡಿಭಾಗದಲ್ಲಿ ಅಚ್ಚುಕಟ್ಟು ಪ್ರದೇಶದ ಕೃಷಿಭೂಮಿಗೆ ನೀರಿನ ಕೊರತೆ ಎದುರಾಗಿದೆ. ಸಾವಿರಾರು ರೈತರು ಸುಮಾರು 27 ಸಾವಿರ ಎಕರೆ ಭೂಮಿಯಲ್ಲಿ ಭತ್ತದ ಸಸಿ ನಾಟಿಗೆ ಸಿದ್ಧಗೊಳಿಸಿ ನೀರಿಗಾಗಿ ಕಾಯುವಂತಾಗಿದೆ. ಗ್ಯಾಂಗ್‌ಮನ್‌ಗಳು ಮುಷ್ಕರದಲ್ಲಿ ತೊಡಗಿದ್ದರಿಂದ 31ನೇ ವಿತರಣಾ ನಾಲೆಯಲ್ಲಿ ನೀರು ನಿರ್ವಹಣೆಯಿಲ್ಲದಂತಾಗಿದೆ. ಇದರಿಂದ ನಾಲೆಯಲ್ಲಿ ನಿಗದಿತ ನೀರು ಹರಿಯುತ್ತಿದ್ದರೂ ಉಪನಾಲೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಅಲ್ಲದೇ, ಮೇಲ್ಭಾಗದಲ್ಲಿ ನೀರ್ಗಳ್ಳತನ ನಡೆಯುತ್ತಿದ್ದರಿಂದ ಕೆಳಭಾಗಕ್ಕೆ ನೀರು ಹರಿಯಲು ಮತ್ತಷ್ಟು ತೊಡಕಾಗಿದೆ.
ಸಸಿ ನಾಟಿಗೆ ಸಿದ್ಧತೆ ನಡೆಸಿದ್ದೇವೆ. ಆದರೆ ನಿಗದಿಯಂತೆ ನಮ್ಮ ಭೂಮಿಗೆ ಇನ್ನೂ ನೀರು ಹರಿಯುತ್ತಿಲ್ಲ. ಹೀಗಾಗಿ ನಾವೇ ಅಧಿಕಾರಿಗಳೊಂದಿಗೆ ನೀರು ನಿರ್ವಹಣೆ ಮಾಡುವ ಮೂಲಕ ನಿಗದಿತ ನೀರು ಪಡೆಯುತ್ತೇವೆ.
ಸಂಗಮೇಶಗೌಡ ಬೂದಗುಂಪಾ,
ಲಿಂಗನಗೌಡ, ನೀರು ಬಳಕೆದಾರರ ಸಂಘದ ಅಧ್ಯಕ್ಷರು.
ನೀರು ನಿರ್ವಹಣೆ ಕೊರತೆಯಿಂದ ನೀರು ಹರಿಸಲು ಸಮಸ್ಯೆಯಾಗುತ್ತಿದೆ. ರೈತರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಲು ಆಸಕ್ತಿ ತೋರುತ್ತಿದ್ದು, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ನಾಳೆಯಿಂದಲೇ ತಂಡ ರಚಿಸಿ ಗಸ್ತು ಆರಂಭಿಸಲಾಗುವುದು.
ಸೂಗಪ್ಪ, ಎಇಇ,
ತುಂಗಭದ್ರಾ ನೀರಾವರಿ ನಿಗಮ.