Advertisement

ನ್ಯಾರಿಯಿಂದ ರೈತರು ದೂರ: ಅಪ್ಪಾ

10:31 AM Nov 26, 2017 | |

ಕಲಬುರಗಿ: ರೈತರು ನ್ಯಾರಿ ಊಟದಿಂದ ದೂರಾಗುತ್ತಿದ್ದು, ಅವರ ಶಕ್ತಿ ಕುಗುತ್ತಿದೆ ಎಂದು ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪಾ ಅಪ್ಪಾ ಕಳವಳ ವ್ಯಕ್ತಪಡಿಸಿದರು.

Advertisement

ಇಲ್ಲಿನ ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡ ಕೃಷಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನ್ಯಾರಿ ಎನ್ನುವುದು ರೈತರ ಬೆಳಗಿನ ಊಟ ಅಥವಾ ಉಪಹಾರ. ನ್ಯಾರಿ ಉಣ್ಣುವುದರಿಂದ ದಿನದ ಕೃಷಿ ಚಟುವಟಿಕೆಗೆ ಬಿರುಸಿನ ಚಾಲನೆ ದೊರಕುತ್ತಿತ್ತು. ಆದರೆ, ಇವತ್ತು ಅಂತಹದೊಂದು ಸಂಸ್ಕೃತಿಯಿಂದ ಆಧುನಿಕ ರೈತರು ದೂರವಾಗಿದ್ದಾರೆ. ಈಗೇನಿದ್ದರೂ ನಾಷ್ಟಾ ಮತ್ತು ಪಾನಿಪುರಿ, ಬೇಲ್‌ಪುರಿ ತಿನ್ನುವ ಸಂಸ್ಕೃತಿ ಮತ್ತು ಚಹಾ ಕುಡಿದು ಹೊಲಕ್ಕೆ ಹೋಗುವುದು ಹೆಚ್ಚಾಗಿದೆ. ಇದರಿಂದಾಗಿ ರೈತರಲ್ಲಿ ಕೃಷಿ ಶಕ್ತಿ ಕಡಿಮೆಯಾಗುತ್ತಿದೆ. ರೈತರ ಮನೆಗಳಲ್ಲಿನ ಹಾಲು, ಹೈನು, ತುಪ್ಪ, ಮೊಸರು ಮಾಯವಾಗಿದೆ. ಈಗೇನಿದ್ದರೂ ಪಾಕೀಟ್‌ ಹಾಲಿಂದೆ ದರಬಾರು ಎಂದರು.

ಕಲಬುರಗಿ ತೊಗರಿ ಕಣಜ. ಇಲ್ಲಿ ಬೆಳೆಯುವ ತೊಗರಿ ದೇಶದ ಎಲ್ಲೆಡೆ ಹೋಗುತ್ತದೆ. ನೂರಾರು ತಳಿಗಳು ಬಂದು ಇಳುವರಿ ಜಾಸ್ತಿಯಾಗಿದೆ. ಆದರೂ ಸರಕಾರಗಳು ಆಮದು ನೀತಿ ಮುಂದುವರಿಸಿವೆ. ನಮ್ಮಲ್ಲಿ ತೊಗರಿ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹಿಂದಿನ ತೊಗರಿ ಬೇಳೆಯ ಘಮ ಈಗ ಉಳಿದಿಲ್ಲ ಎಂದು ಹೇಳಿದರು.

ನಮ್ಮ ಶಿಕ್ಷಣ ಸಂಸ್ಥೆಯಿಂದ 30 ಕೋಟಿ ರೂ. ವ್ಯಯಿಸಿ ವಿಶ್ವ ವಿದ್ಯಾಲಯದಲ್ಲಿ ಕೃಷಿ ಕುರಿತು ಕೋರ್ಸು ಆರಂಭಿಸುತ್ತೇವೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. 

ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್‌, ಶಿವಮೊಗ್ಗದ ಚೌಕಿಮಠದ ನೀಲಕಂಠ ಸ್ವಾಮೀಜಿ ಮಾತನಾಡಿದರು. ವಿವಿ ಆಡಳಿತ ಮಂಡಳಿ ಸದಸ್ಯ ಸಿದ್ದಪ್ಪ ಬಂಡಾರಿ, ವೀರಣ್ಣಗೌಡ ಪರಸರಡ್ಡಿ, ಅಮರೇಶ ಬಿಲ್ಲವ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶರಣಬಸ್ಪ ಅಷ್ಟಗಿ ಶಂಕರಗೌಡ ಪಾಟೀಲ, ಸಿದ್ರಾಮಪ್ಪಾ ಪಾಟೀಲ ದಂಗಾಪುರ, ಬಾಲರಾಜ್‌, ಎಸ್‌.ಕೆ.ಮೇಟಿ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಪ್ರಗತಿಪರ ರೈತ ದೇವಿಂದ್ರಪ್ಪ ,ಕೆವಿಕೆ ಪ್ರಾಧ್ಯಾಪಕ ಜೆ.ಆರ್‌.ಪಾಟೀಲ ಇದ್ದರು.

Advertisement

ಕೆವಿಕೆ ಆವರಣದ ಯೋಜನಾ ನಿರ್ದೇಶಕ ಡಿ.ಎಂ.ಮಣ್ಣೂರು ಸ್ವಾಗತಿಸಿದರು. ಜಿಲ್ಲೆಯ ವಿವಿಧ ತಾಲೂಕಿನ ರೈತರು ಹಾಗೂ ಕೃಷಿ ಪರಿಕರಗಳ ಕಂಪನಿ ಸಿಬ್ಬಂದಿ ಹಾಗೂ ವ್ಯಾಪಾರಿಗಳು ಇದ್ದರು.

ಎಲ್ಲ ಬರುತ್ತೆ..ಕೆಲಸ ಮಾಡ್ಲಿಕ್ಕೇ ಬರೋಲ್ಲ ಕೃಷಿ ಜ್ಞಾನದಿಂದ ದೂರವಾಗುವ ನಮ್ಮವರು, ಶಿಕ್ಷಣವನ್ನಾದರೂ ಸರಿಯಾಗಿ ಪಡೆಯುತ್ತಿದ್ದಾರಾ ಅದೂ ಇಲ್ಲ, ಮೆಟ್ರಿಕ್‌ ಪಾಸಾಗಿದ್ದಾರೆ. ಓದಲಿಕ್ಕೆ, ಬರೆಯಲಿಕ್ಕೆ ಬರೋಲ್ಲ.. ಪದವಿ ಪಾಸಾಗಿದ್ದಾರೆ. ಓದಲಿಕ್ಕೆ ಬರುತ್ತದೆ, ಬರೆಯಲು ಬರಲ್ಲ. ಇನ್ನೂ ಸ್ನಾತಕೋತ್ತರ ಪದವಿ ಪಡೆದವರಿಗೆ ಓದಲು
ಬರೆಯಲು ಬರುತ್ತದೆ ಆದರೆ, ಏನು ತಿಳಿಯಲ್ಲ. ಪಿಎಚ್‌ಡಿ ಮುಗಿಸಿದವರಿಗೆ ಎಲ್ಲ ಬರುತ್ತದೆ. ಆದರೆ, ಕೆಲಸ ಮಾಡಲು ಬರುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
 ಡಾ| ಶರಣಬಸವಪ್ಪ ಅಪ್ಪಾ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ

Advertisement

Udayavani is now on Telegram. Click here to join our channel and stay updated with the latest news.

Next