Advertisement

“ಪ್ಯಾಕ್ಸ್‌’ಗಳಿಂದ ರೈತರಲ್ಲಿ ಜಾಗೃತಿ: ಗಾದಗಿ

01:17 PM Aug 31, 2017 | Team Udayavani |

ಬೀದರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪ್ಯಾಕ್ಸ್‌ಗಳು) ಗ್ರಾಮೀಣ ಪ್ರದೇಶದ
ರೈತರ ಜೀವನಾಡಿಯಂತೆ ಕೆಲಸ ಮಾಡುತ್ತಿದ್ದು, ರೈತರಿಗೆ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿವೆ
ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿಜಯಕುಮಾರ ಪಾಟೀಲ ಗಾದಗಿ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಪಿಕೆಪಿಎಸ್‌ ಅಧ್ಯಕ್ಷರಿಗಾಗಿ ನಬಾರ್ಡ್‌ ವತಿಯಿಂದ
ಹಮ್ಮಿಕೊಂಡಿದ್ದ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು
ಮಾತನಾಡಿದರು.

ಜನರಿಗೆ ಯಶಸ್ವಿನಿ ವಿಮೆ ಯೋಜನೆ, ಬೆಳೆ ವಿಮೆಯ ಫಸಲ್‌ ಬಿಮಾ ಯೋಜನೆ, ಡಿಜಿಟಲ್‌
ಇಂಡಿಯಾ ಯೋಜನೆಯಡಿ ರುಪೇ ಕಾರ್ಡ್‌ ವಿತರಣೆ, ಪ್ರಧಾನ ಮಂತ್ರಿಗಳ ಸಾಮಾಜಿಕ
ಸುರûಾ ಯೋಜನೆಗಳನ್ನು ಮತ್ತು ಸಾಲ ಮನ್ನಾ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆ. ಜಿಲ್ಲೆಯಲಿ ಈ ವರ್ಷ ರೈತರು ಫಸಲ ಬಿಮಾ ಯೋಜನೆಯಲ್ಲಿ 13 ಕೋಟಿ ಪ್ರೀಮಿಯಂ ಕಟ್ಟಿದ್ದು ದಾಖಲೆಯಾಗಿದೆ. ರಾಜ್ಯದಲ್ಲೇ ಇದು ಗರಿಷ್ಠವಾಗಿದೆ ಎಂದರು.

ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ರೂಪಿಸಲಾಗಿರುವ ರೈತ ಉತ್ಪಾದಕ ಸಂಸ್ಥೆ
ಯೋಜನೆ ಕೂಡಾ ಪಿಕೆಪಿಎಸ್‌ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ
ಈಗಾಗಲೇ 25 ಸಂಘಗಳನ್ನು ಇದಕ್ಕಾಗಿ ಗುರುತಿಸಲಾಗಿದ್ದು, ಪ್ರಸ್ತಾವನೆಗಳನ್ನು ಸರ್ಕಾರಕ್ಕೆ
ಸಲ್ಲಿಸಲಾಗಿದೆ. ಸಹಕಾರಿ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ
ರೈತರು ಪಡುತ್ತಿರುವ ಹಲವು ಸಂಕಷ್ಟಗಳಿಗೆ ಪರಹಾರ ಒದಗಿಸಬಹುದಾಗಿದೆ ಎಂದು ತಿಳಿಸಿದರು.

ನಬಾರ್ಡ್‌ ಅಧಿ ಕಾರಿ ಡಿ.ಎಸ್‌.ವಿ. ಜೋಷಿ ಮಾತನಾಡಿ, ಪ್ರತಿ ಸಂಘಗಳು ತಮ್ಮ ವ್ಯಾಪಾರ
ಅಭಿವೃದ್ಧಿ ಯೋಜನೆ ರೂಪಿಸಬೇಕು. ಅದರ ಅನುಷ್ಠಾನಕ್ಕಾಗಿ ಸಹಾಯ ಧನ ಮತ್ತು ಸಾಲದ
ನೆರವನ್ನು ನಬಾರ್ಡ್‌ ನೀಡುತ್ತದೆ. ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಿ ನಿರ್ವಹಿಸಲು ಮೂರು ವರ್ಷಗಳಿಗೆ 7 ಲಕ್ಷದಷ್ಟು ಅನುದಾನ ನೀಡಲ್ಪಡುತ್ತದೆ. ಇದನ್ನು ಎಲ್ಲ ಸಂಘಗಳು ಉಪಯೋಗಿಸಿಕೊಳ್ಳಬೇಕು ಎಂದರು.

Advertisement

ಲೀಡ್‌ ಬ್ಯಾಂಕ್‌ ಜಿಲ್ಲಾ ಪ್ರಬಂಧಕ ಪಂಡಿತ್‌ ಹೊಸಳ್ಳಿ ಮಾತನಾಡಿ, ಡಿಜಿಟಲ್‌ ಇಂಡಿಯಾ
ಯೋಜನೆಯಡಿ ಪ್ಯಾಕ್ಸ್‌ಗಳು ಮೈಕ್ರೋ ಎಟಿಎಂಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ
ಸೌಲಭ್ಯ ಒದಗಿಸಬೇಕು. ಮೈಕ್ರೋ ಎಟಿಎಂಗೆ ಆಧಾರ್‌ ಅವಶ್ಯವಾಗಿದ್ದು, ಬ್ಯಾಂಕ್‌
ಶಾಖೆಗಳಲ್ಲೇ ಆಧಾರ್‌ ನೊಂದಣಿಯನ್ನು ಕೂಡಾ ಮಾಡಿಸಲಾಗುತ್ತಿದೆ. ಹೀಗೆ
ಇಂದು ಬ್ಯಾಂಕ್‌ಗಳು ಕೇವಲ ಹಣದ ವ್ಯವಹಾರದ ಸಂಸ್ಥೆಗಳಾಗಿ ಉಳಿಯದೇ
ಸರ್ಕಾರದ ಸಾಮಾಜಿಕ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ
ವಹಿಸುತ್ತಿವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ ಇದ್ದರು. ನಿವೃತ್ತ ಡಿಜಿಎಂ ನರಸಾರೆಡ್ಡಿ ಉಪನ್ಯಾಸ ನೀಡಿದರು. ರಾಯುಚೂರು, ಬಳ್ಳಾರಿ, ಬೀದರಿನ 25 ಪ್ಯಾಕ್ಸ್‌ಗಳ ಅಧ್ಯಕ್ಷರು ಮತ್ತು ನಿರ್ದೇಶಕರು ತರಬೇತಿಯಲ್ಲಿ ಭಾಗವಹಿಸಿದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್‌.ಜಿ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next