ಬೆಂಗಳೂರು: ಕೇಂದ್ರ ಸರ್ಕಾರ ಕೂಡಲೇ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರು ರೈತರ ಜತೆಗೂಡಿ ಗುರುವಾರ “ರೈಲು ತಡೆ ಚಳವಳಿ’ ನಡೆಸಲು ತ್ನಿಸಿದರು.
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ದೇಶದಾದ್ಯಂತ ನಾಲ್ಕು ಗಂಟೆಗಳ ರೈಲು ತಡೆಗೆ ಕರೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಯಶವಂತಪುರ ರೈಲು ನಿಲ್ದಾಣದಲ್ಲಿ “ರೈಲು ರೋಕೋ’ ನಡೆಸಿದರು. ಜೈ ಜವಾನ್ ಜೈಕಿಸಾನ್ ಘೋಷಣೆ ಕೂಗುತ್ತಾ, ಹಸಿರು ಟವೆಲ್ ಬೀಸುತ್ತಾ ಯಶವಂತಪುರ ರೈಲು ನಿಲ್ದಾಣದೊಳಗೆ ನುಗ್ಗಿದ ರೈತರು ದೆಹಲಿಯತ್ತ ಹೊರಟ್ಟಿದ್ದ “ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್’ ತಡೆಯಲು ಮುಂದಾದರು.
ಈ ವೇಳೆ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದರು. ಹೀಗಾಗಿ ಕೆಲಕಾಲ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ವಾಕ್ಸಮರ ನಡೆಯಿತು.
ಇದನ್ನೂ ಓದಿ:ಹೋಟೆಲ್ ಮಾಲೀಕರೊಂದಿಗೆ ಮತ್ತೊಮ್ಮೆ ಸಭೆ
ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರೊಂದಿಗೆ ಚೆಲ್ಲಾಟವಾಡುತ್ತಿವೆ. ಕಾರ್ಪೊರೇಟ್ ಪರವಾದ ಕಾಯ್ದೆ ರೂಪಿಸಿ ಈ ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿವೆ. ಇದಕ್ಕೆ ಅನ್ನದಾತರು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ರೈತಪರವಾದ ಕಾಯ್ದೆಗಳನ್ನು ರೂಪಿಸಬೇಕಾಗಿದ್ದ ಕೇಂದ್ರ ಸರ್ಕಾರ ರೈತರನ್ನು ಬೀದಿಪಾಲು ಮಾಡುವ ಕಾಯ್ದೆಗಳನ್ನು ಚರ್ಚೆ ಮಾಡದೆ ಜಾರಿಗೆ ತರುತ್ತಿದೆ. ರೈತರ ಹೋರಾಟದ ಪರವಾಗಿ ಮಾತನಾಡಿದವರನ್ನು ಜೈಲಿಗೆ ಹಾಕುತ್ತಿದೆ. ಬ್ರಿಟಿಷ್ ಆಡಳಿತ ವ್ಯವಸ್ಥೆಗಿಂತಲೂ ಕನಿಷ್ಠ ರೀತಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ರೈತ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಪೊಲೀಸರನ್ನು ಮುಂದೆ ಬಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ದ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.ಇಡೀ ದೇಶಕ್ಕೆ ಅನ್ನ ನೀಡುವ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಉದ್ಯಮಿಗಳ ಹಿತಕಾಯುವ ನಿಟ್ಟಿನಲ್ಲಿ ಕಾಯ್ದೆಯ ಜಾರಿಯ ಹಠಕ್ಕೆ ಬಿದ್ದಿದೆ ಎಂದು ಟೀಕಿಸಿದರು.