ಕೋಲಾರ: ಕಳೆದು ಹೋಗಿರುವ ಶಿಕ್ಷಣ ಸಚಿವರನ್ನು ಹುಡುಕಿಕೊಟ್ಟು, ಸರ್ಕಾರಿ ಶಾಲೆಗಳಲ್ಲಿ ನಿಗದಿಪಡಿಸಿರುವ ಆಂಗ್ಲ ಮಾಧ್ಯಮದ ಶೇ.30 ಸೀಟುಗಳನ್ನು ಏರಿಕೆ ಮಾಡಬೇಕು ಹಾಗೂ ಶಾಲೆಗಳ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಉಪ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸರ್ಕಾರ ಶಿಕ್ಷಣದ ವ್ಯವಸ್ಥೆಯನ್ನು ಸರಿಪಡಿಸಲು ವಿವಿಧ ಭರವಸೆಗಳನ್ನು ಮುಂಬಾಗಿಲಿನಿಂದ ಕೊಟ್ಟು ಹಿಂಬಾಗಿಲಿನಿಂದ ಅದನ್ನು ವಾಪಸ್ ಪಡೆಯುತ್ತಿದೆ. ಶಿಕ್ಷಣವನ್ನು ಸಾರ್ವಜನಿಕವಾಗಿ ಮಾರಾಟಕ್ಕಿಟ್ಟೆ ಎಂದು ದೂರಿದರು.
ಸಚಿವ ವಿರುದ್ಧ ಆಕ್ರೋಶ: ಒಂದು ಕಡೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಜಾರಿ ಮಾಡಿ ಆದೇಶ ಹೊರಡಿಸಿದ ನಂತರ ನಗುಮುಖದೊಂದಿಗೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಖಾಸಗಿ ಶಾಲೆಗಳ ಹಗಲು ದರೋಡೆಯಿಂದ ತಪ್ಪಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಮತ್ತೆ ಸರ್ಕಾರ ಶೇ.30 ಸೀಟುಗಳಿಗೆ ಸೀಮಿತಗೊಳಿಸಿ ಶಾಕ್ ನೀಡಿದೆ ಎಂದು ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಮಂತರ ಆಸ್ತಿ: ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನೆಪದ ಜೊತೆಗೆ ಆಂಗ್ಲ ಮಾಧ್ಯಮವನ್ನು ಜಾರಿ ಮಾಡುತ್ತೇನೆಂಬುದು ಆದೇಶ ಹೊರಡಿಸಿರುವುದು ನೆಪಮಾತ್ರಕಷ್ಟೆ. ಸಮಿಶ್ರ ಸರ್ಕಾರ ಖಾಸಗಿ ಶಾಲೆ ಮಾಲಿಕರ ಪರ ಕೆಲಸ ನಿರ್ವಹಿಸುತ್ತಿದೆ. ಶಿಕ್ಷಣ ಎಂಬುದು ದಿನೇ ದಿನೆ ಶ್ರೀಮಂತರ ಆಸ್ತಿಯಾಗುತ್ತಿದೆ ಎಂದು ಆರೋಪಿಸಿದರು.
ಪೋಷಕರಿಂದ ಸುಲಿಗೆ: ಸಂವಿಧಾನ ಶಿಲ್ಪಿ ಆಂಬೇಡ್ಕರ್ ಅವರ ಏಕರೂಪ ಶಿಕ್ಷಣ ಎಂಬ ಕನಸು ಕನಸಾಗಿಯೇ ಉಳಿದಿದೆ. ಶಿಕ್ಷಣ ಸಂಸ್ಥೆಗಳ ಪ್ರಯೋಜನವನ್ನು ಪಡೆಯುತ್ತಿರುವ ಖಾಸಗಿ ಶಾಲೆಗಳು, ಪೋಷಕರನ್ನು ತಮ್ಮ ಕಡೆಗೆ ಸಳೆಯಲು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದು, ಸುಲಿಗೆ ಮಾಡುತ್ತಿವೆ. ಇದಕ್ಕೆಲ್ಲ ನೇರ ಕಾರಣ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ಅವ್ಯವಸ್ಥೆ ಹಾಗೂ ರಾಜಕೀಯ ಮುಖ್ಯ ಕಾರಣವಾಗಿವೆ ಎಂದ ಆರೋಪಿಸಿದರು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಪಾರುಕ್‌ಪಾಷ, ಮಾಸ್ತಿ ವೆಂಕಟೇಶ್, ರಂಜಿತ್, ಯಲುವಳ್ಳಿ ಪ್ರಭಾಕರ್, ವಿಜಯಪಾಲ್, ಮೀಸೆ ವೆಂಕಟೇಶಪ್ಪ, ಅಮರನಾರಾಯಣಸ್ವಾಮಿ, ನಟರಾಜ್, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್ ಮುಂತಾದವರಿದ್ದರು.